ಬೆಳಗಾವಿ(ಆ.12):  ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ತೆರವು ವಿವಾದ ಬಗೆಹರಿದಿರುವ ಹೊತ್ತಲ್ಲೇ ಖಾನಾಪುರದ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಅವರು ಈ ಬಗ್ಗೆ ಟ್ವೀಟ್‌ ಮಾಡಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ.

ಗ್ರಾಮದ ಹಿರಿಯರೇ ಮುಂದೆ ನಿಂತು ವಿವಾದ ಇತ್ಯರ್ಥಗೊಳಿಸಲು ಹೊರಟಿರುವ ಸಂದರ್ಭದಲ್ಲೇ ನಿಂಬಾಳ್ಕರ್‌ ಪರೋಕ್ಷವಾಗಿ ಮಹಾರಾಷ್ಟ್ರ ನಾಯಕರ ಬೆಂಬಲಕ್ಕೆ ನಿಲ್ಲುವ ಮೂಲಕ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೊರೋನಾಗೆ ಸಚಿವ ಜಾರಕಿಹೊಳಿ‌ ಪರಮಾಪ್ತ ಬಲಿ: ಕುಚುಕು ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಸಾಹುಕಾರ್‌

ಮಣಗುತ್ತಿ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೇ ಆ.5ರಂದು ಬೆಳಗಿನ ಜಾವ ಶಿವಾಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪಿಸಿ ಪ್ರತಿಭಟನೆ ನಡೆಸಿದ ಬಳಿಕ ಆ.8ರಂದು ತೆರವುಗೊಳಿಸಲಾಗಿತ್ತು. ಆ.11ರಂದು ಶಾಂತಿಸಭೆ ಸೇರಿ ನಡೆಸಿ ಗ್ರಾಮಸ್ಥರು ಹೊರವಲಯದ ಬಸವಣ್ಣನ ಗುಡಿ ಬಳಿ ಶಿವಾಜಿ, ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ, ಕೃಷ್ಣನ ಮೂರ್ತಿ ಪ್ರತಿಸ್ಥಾಪನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸುವ ಮೂಲಕ ಈ ವಿವಾದ ಕೊನೆಗೊಂಡಿತು. ನಂತರ ಅಂದೇ ಸಂಜೆ ಅಷ್ಟೂ ಪ್ರತಿಮೆಗಳಿಗೆ ಅಡಿಗಲ್ಲು ಹಾಕಲಾಯಿತು.

ಈ ಬಗ್ಗೆ ವಾಸ್ತವ ಅರಿಯದೇ ಶಾಸಕಿ ಅಂಜಲಿ ನಿಂಬಾಳಕರ್‌ ಟ್ವೀಟ್‌ ಮಾಡಿ, ‘ಶಿವಾಜಿ ಪುತ್ಥಳಿ ತೆರವುಗೊಳಿಸಿದ್ದು ರಾಷ್ಟ್ರನಾಯಕನಿಗೆ ಮಾಡಿದ ಅಪಮಾನ. ಕರ್ನಾಟಕ ಸರ್ಕಾರ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು. ಸರ್ಕಾರಿ ಗೌರವದೊಂದಿಗೆ ಮೂರ್ತಿ ಪ್ರತಿಷ್ಠಾನ ಮಾಡಬೇಕು. ಮೂರ್ತಿ ತೆರವಿಗೆ ಕಾರಣರಾದವರ ವಿರುದ್ಧ ಕ್ರಮವಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಶಿವಾಜಿ ಪುತ್ಥಳಿ ವಿಚಾರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್‌  ಅವರು ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಎಲ್ಲ ಜಾತಿ, ಜನಾಂಗ, ಭಾಷಿಕರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿದೆ. ಅವರು ವಾಸ್ತವತೆ ಅರಿತು ಮಾತಮಾಡಬೇಕು ಎಂದು ಹೇಳಿದ್ದಾರೆ.