ಬಾಗಲಕೋಟೆ: ಮರೀಚಿಕೆಯಾದ ಐಹೊಳೆ ಸ್ಥಳಾಂತರ, ಸಚಿವರ ಭೇಟಿಗೆ ಮುಂದಾದ ಕಾಂಗ್ರೆಸ್‌ ನಾಯಕರು

ಬಾಗಲಕೋಟೆ ಜಿಲ್ಲೆಯ ಕೈ ನಾಯಕರು ಸ್ವತ: ಪ್ರವಾಸೋಧ್ಯಮ ಸಚಿವರನ್ನೇ ಭೇಟಿ ಮಾಡಿ ಸ್ಥಳಾಂತರ ಕಾರ್ಯಕ್ಕೆ ಒತ್ತಾಯಿಸುತ್ತಿದ್ದು, ಇದೀಗ ಸ್ವಪಕ್ಷೀಯರ ಮಾತಿಗಾದ್ರೂ ಕೈ ಸರ್ಕಾರ ಮಣೆ ಹಾಕುತ್ತಾ ಎಂಬ ಆಶಯ ವ್ಯಕ್ತವಾಗುತ್ತಿದೆ. 

Congress Leaders Will Be Meet Tourism Minister HK Patil For Aihole Relocation grg

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಅ.09): ಅದೊಂದು ಸುಪ್ರಸಿದ್ಧ ಐತಿಹಾಸಿಕ ಸ್ಥಳ. ಆ ಸ್ಥಳದ  ಜನ್ರು ಅತ್ತ ಬಿದ್ದ ಮನೆಗಳನ್ನು ದುರಸ್ಥಿ ಮಾಡಿಕೊಳ್ಳುವಂತಿಲ್ಲ, ಇತ್ತ ನೂತನ ಮನೆಗಳ ನಿರ್ಮಾಣ ಸಹ ಮಾಡುವಂತಿಲ್ಲ. ಬೇರೆ ಗ್ರಾಮದ ಸುಂದರ ಮನೆಗಳನ್ನು ಕಂಡು ಇಂತಹ ಮನೆ ಕಟ್ಟಿಸಬಹುದೆಂದು ಅವರು ಕೇವಲ ಕನಸನ್ನು ಮಾತ್ರ ಕಾಣಬಹುದು. ಈ ನಡುವೆ ಪ್ರತಿ ಬಾರಿ ಬರುವ ಪ್ರವಾಹ  ಇವರನ್ನು ಹೈರಾಣಾಗಿಸಿದೆ. ಇವುಗಳ ಮಧ್ಯೆ ಈ ಬಾರಿ ಬಾಗಲಕೋಟೆ ಜಿಲ್ಲೆಯ ಕೈ ನಾಯಕರೇ ಐಹೊಳೆ ಸ್ಥಳಾಂತರ ಕೂಗೆಬ್ಬಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ...

ಒಂದೆಡೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ದೇಗುಲಗಳು, ದೇಗುಲದ ಬಳಿ ಹಳೆ ಮಣ್ಣಿನ ಮೇಲ್ಚಾವಣಿಯ ಮನೆಗಳು, ಶಿಥಿಲಾವಸ್ಥೆಗೆ ತಲುಪುತ್ತಿರುವ ಗೋಡೆಗಳು. ದೇಗುಲಗಳ ಪಕ್ಕದಲ್ಲೇ ಚಿಕ್ಕದಾದ ಮನೆಗಳಲ್ಲಿಯೇ ದನಕರುಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿರುವ ರೈತರು. ಅಂದಹಾಗೆ ಈ ಸಂದರ್ಭ ಎದುರಾಗಿರೋದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮದಲ್ಲಿ. 

ಕಾಂಗ್ರೆಸ್‌ ಅಧಿಕಾರದಲ್ಲಿ ಮುಸ್ಲಿಂ ಅಧಿಕಾರಿಯ ದರ್ಪ: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದ ಶಾಸಕ

ಹೌದು ಐಹೊಳೆ ಅಂದರೆ ತಕ್ಷಣ ಎಲ್ಲರಿಗೂ ನೆನಪಾಗೋದು ಚಾಲುಕ್ಯರ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲೆಂದೆ ಹೆಸರಾದ ಐತಿಹಾಸಿಕ ಐಹೊಳೆ ಎನ್ನೋದು. ಇಲ್ಲಿ ಚಾಲುಕ್ಯರ ಕಾಲದ 120 ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕ ದೇಗುಲಗಳಿವೆ. ಆದರೆ ಈ ದೇಗುಲಗಳೇ ಈ ಗ್ರಾಮಸ್ಥರ ಸಂಕಷ್ಟಕ್ಕೆ ಕಾರಣವಾಗಿವೆ. ಹೌದು, ಈ ಎಲ್ಲ ದೇಗುಲಗಳು ಪುರಾತತ್ವ ಇಲಾಖೆಗೆ ಸೇರಿದ್ದರಿಂದ ಇಲ್ಲಿನ ಸ್ಥಿತಿಗತಿಯನ್ನು ಯಥಾವತ್ತಾಗಿ ಕಾಪಾಡಬೇಕಾಗುತ್ತದೆ. ಈ ನಡುವೆ 40ಕ್ಕೂ ಅಧಿಕ ದೇಗುಲಗಳೇ ಮನೆಗಳಂತಾಗಿದ್ದು, ಮನೆಗಳೇ ದೇವಾಲಯಗಳ ರೀತಿಯಲ್ಲಿ ಆಗಿವೆ, ಅಂದ್ರೆ ಮನೆಯ ಪಕ್ಕದಲ್ಲಿಯೇ ದೇಗುಲ ಇರೋದ್ರಿಂದ ಈ ಸಮಸ್ಯೆ ಎದುರಾಗಿದೆ. 

ಪ್ರವಾಸೋಧ್ಯಮ ಸಚಿವರಿಗೆ ನಂಜಯ್ಯನಮಠ ನೇತೃತ್ವದಲ್ಲಿ ಕೈ ನಾಯಕರ ಭೇಟಿಗೆ ನಿರ್ಧಾರ.

ಇನ್ನು ಐಹೊಳೆಯಲ್ಲಿರೋ 800ಕ್ಕೂ ಅಧಿಕ ಮನೆಗಳ ನಿವಾಸಿಗಳಿಗೆ ಮನೆ ದುರಸ್ಥಿ ಮಾಡಲಾಗುತ್ತಿಲ್ಲ.  ಮನೆ ಬಿದ್ದರೆ ನೂತನ ಮನೆ ನಿರ್ಮಾಣ ಮಾಡಲು ಆಗುತ್ತಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಬಾರಿಯ ಭಾರಿ ಪ್ರವಾಹ ಬಂದಾಗಲೂ ಐಹೊಳೆ ಮುಳುಗಡೆಯಾಗುತ್ತಿದೆ.  ಆಗ ಮನೆ ಬಿದ್ದರೆ ಹೊಸ ಮನೆ ಕಟ್ಟಿಸೋಕೆ ಆಗೋದಿಲ್ಲ, ಮನೆ ದುರಸ್ಥಿ ಮಾಡೋಕೆ ಆಗೋದಿಲ್ಲ. ಎಲ್ಲದಕ್ಕೂ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತದೆ ಅನ್ನೋದು ಗ್ರಾಮಸ್ಥರ ನೋವಿನ ಮಾತು. ಹೀಗಾಗಿ ಈ ಬಾರಿ ಸ್ವತ: ಕಾಂಗ್ರೆಸ್​ ಪಕ್ಷದ ಜಿಲ್ಲಾಧ್ಯಕ್ಷ ಎಸ್​.ಜಿ.ನಂಜಯ್ಯನಮಠ ನೇತೃತ್ವದಲ್ಲಿ ಕೈ ನಾಯಕರ ತಂಡವೊಂದು ಪ್ರವಾಸೋಧ್ಯಮ ಸಚಿವ ಎಚ್​.ಕೆ.ಪಾಟೀಲ ಅವರ ಭೇಟಿಗೆ ಮುಂದಾಗುತ್ತಿದ್ದು, ಭೇಟಿಯಾಗಿ ಐಹೊಳೆ ಸಮಸ್ಯೆಗಳನ್ನ ಆದಷ್ಟು ಬೇಗ ಬಗೆ ಹರಿಸಿ ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಇಡಲಿದ್ದೇವೆ ಅಂತಾರೆ ಕಾಂಗ್ರೆಸ್​ ಪಕ್ಷದ ಜಿಲ್ಲಾಧ್ಯಕ್ಷ ಎಸ್​.ಜಿ.ನಂಜಯ್ಯನಮಠ. 

ಬಾಗಲಕೋಟೆ: ಅಪಾಯಕಾರಿ ಟ್ಯೂಮರ್ ಗಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ, ಮಕ್ಕಳಿಗೆ ಪುನರ್ಜನ್ಮ ನೀಡಿದ ವೈದ್ಯರು..!

ಐಹೊಳೆ ಸ್ಥಳಾಂತರಕ್ಕೆ ಇಚ್ಛಾಶಕ್ತಿ ತೋರಿಸಬೇಕಿದೆ ಕಾಂಗ್ರೆಸ್ ಸರ್ಕಾರ

ಇನ್ನು ಐಹೊಳೆ ಗ್ರಾಮವನ್ನು ಸ್ಥಳಾಂತರ ಮಾಡಿ ಎಂಬ ಬೇಡಿಕೆ ಬಹಳ ದಿನಗಳಿಂದಲೂ ಇದ್ದು, ಈ ಹಿಂದೆ ಬಿಜೆಪಿ ಸರಕಾರದಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸ್ಥಳಾಂತರಕ್ಕೆ ಮನಸ್ಸು ಮಾಡಿದ್ರು. ಆದ್ರೆ ನಂತರ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದಲ್ಲೂ  ಕ್ಷಿಪ್ರಗತಿಯ ಪ್ರಕ್ರಿಯೆಗಳು ನಡೆದಿಲ್ಲ. ಆದ್ರೆ ಈಗ ಮತ್ತೇ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರವಿದ್ದು, ಈ ಮಧ್ಯೆ ಅಂದು ಐಹೊಳೆ ಸ್ಥಳಾಂತರಕ್ಕೆ ಇಚ್ಚಾಶಕ್ತಿ ತೋರಿಸಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ಕಾಂಗ್ರೆಸ್​ ಪಕ್ಷದಲ್ಲಿಯೇ ಇದ್ದು, ಈ ನಡುವೆ ಬಾಗಲಕೋಟೆ ಜಿಲ್ಲೆಯ ಕೈ ನಾಯಕರು ಸ್ವತ: ಪ್ರವಾಸೋಧ್ಯಮ ಸಚಿವರನ್ನೇ ಭೇಟಿ ಮಾಡಿ ಸ್ಥಳಾಂತರ ಕಾರ್ಯಕ್ಕೆ ಒತ್ತಾಯಿಸುತ್ತಿದ್ದು, ಇದೀಗ ಸ್ವಪಕ್ಷೀಯರ ಮಾತಿಗಾದ್ರೂ ಕೈ ಸರ್ಕಾರ ಮಣೆ ಹಾಕುತ್ತಾ ಎಂಬ ಆಶಯ ವ್ಯಕ್ತವಾಗುತ್ತಿದೆ. ಈ ನಡುವೆ ಐಹೊಳೆ ಗ್ರಾಮದಲ್ಲಿ ರಸ್ತೆ ಕೂಡ ದುರಸ್ಥಿ ಮಾಡುವ ಹಾಗಿಲ್ಲ. ಮನೆಯ ಒಂದು ಕಲ್ಲನ್ನು ಬಿಚ್ಚಿದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಎಚ್ಚರಿಕೆ ನೀಡುತ್ತಾರೆ. ಇವುಗಳ ಮದ್ಯೆ ಏನಾದ್ರೂ ಆಗಲಿ ಆದಷ್ಟು ಬೇಗ ಸ್ಥಳಾಂತರವಾಗಲಿ ಅನ್ನೋದು ಗ್ರಾಮಸ್ಥರ ವಾದವಾಗಿದ್ದು, ಇದರೊಟ್ಟಿಗೆ ಕೈ ನಾಯಕರು ಸಹ ಐಹೊಳೆ ಸ್ಥಳಾಂತರಕ್ಕೆ ಇದೀಗ ಒತ್ತಾಸೆಯಾಗಿ ನಿಂತಿದ್ದು, ಸ್ಥಳಾಂತರ ಕಾರ್ಯಕ್ಕಾಗಿ ಸಚಿವರ ಭೇಟಿಗೆ ಮುಂದಾಗುತ್ತೇವೆ ಅಂತಾರೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಹದ್ಲಿ. 

ಒಟ್ಟಿನಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ಹೇಳಿಕೊಳ್ಳಲು ಹೆಸರುವಾಸಿಯಾಗಿರೋ ಚಾಲುಕ್ಯರ ನಾಡಿನಲ್ಲೊಂದಾದ ಐತಿಹಾಸಿಕ ಐಹೊಳೆಯಲ್ಲಿರೋ 800ಕ್ಕೂ ಅಧಿಕ ಮನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಬೇಕಿದೆ. ಇಷ್ಟಕ್ಕೂ ಬಾಗಲಕೋಟೆ ಜಿಲ್ಲೆಯ ಕೈ ನಾಯಕರೇ ಐಹೊಳೆ ಸ್ಥಳಾಂತರಕ್ಕೆ ಬೆನ್ನು ಬಿದ್ದಿದ್ದು, ಇದಕ್ಕೆ ಸರ್ಕಾರ ಸ್ಪಂದಿಸುತ್ತಾ ಅಂತ ಕಾದು ನೋಡಬೇಕಿದೆ..

Latest Videos
Follow Us:
Download App:
  • android
  • ios