ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.05): ತೆಲಂಗಾಣ, ಹೈದ್ರಾಬಾದ್‌ ಸೇರಿದಂತೆ ಕೆಲ ರಾಜ್ಯಗಳಿಗೆ ಸೀಮಿತವಾಗಿದ್ದ ಅಸಾದುದ್ದೀನ್‌ ಓವೈಸಿ ಪಕ್ಷವಾಗಿರುವ ಎಐಎಂಐಎಂ (ಅಖಿಲ ಭಾರತ ಮುಸಲೀಸ್‌ ಇತೆಹಾದುಲ್‌ ಮುಸ್ಲಿಮಿನ್‌) ಸಣ್ಣದಾಗಿ ಧಾರವಾಡ ಜಿಲ್ಲೆಯಲ್ಲೂ ಸಂಘಟನೆಯಾಗುತ್ತಿದೆ. ಕಾಂಗ್ರೆಸ್‌ನಲ್ಲಿನ ಅತೃಪ್ತರೆಲ್ಲರೂ ಓವೈಸಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ತಳಮಳ ಹುಟ್ಟಿಸಿದೆ. ಇದು ಪರೋಕ್ಷವಾಗಿ ಬಿಜೆಪಿಗೆ ಲಾಭವಾಗುತ್ತಿದೆ.

ಓವೈಸಿ ಪಕ್ಷ ಮೊದಲು ಇಲ್ಲಿ ಇರಲಿಲ್ಲ ಅಂತೇನೂ ಇಲ್ಲ. ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳ ಕೆಲ ನಾಯಕರಷ್ಟೇ ಓವೈಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಇದೀಗ ಕಳೆದ ಎರಡು ತಿಂಗಳಿನಿಂದ ಹುಬ್ಬಳ್ಳಿ- ಧಾರವಾಡ ಜಿಲ್ಲೆಗಳ ಹಲವು ಮುಖಂಡರು ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಸ್ಥಾನಮಾನ ದೊರೆಯದ, ಕೆಲ ಕಾರಣಗಳಿಂದ ಮುಖಂಡರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ, ಪಕ್ಷದಲ್ಲಿನ ಗುಂಪುಗಾರಿಕೆ, ಕಾಲೆಳೆಯುವ ಸಂಸ್ಕೃತಿಯಿಂದ ಬೇಸತ್ತು ಸಾಕಷ್ಟುಜನ ಓವೈಸಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ವಿಜಯ್‌ ಗುಂಟ್ರಾಳ್‌, ಪಾಲಿಕೆಯ ನಾಮನಿರ್ದೇಶಿತ ಮಾಜಿ ಸದಸ್ಯ ನಜೀರ ಹೊನ್ಯಾಳ, ದಾದಾಪೀರ ಸೇರಿದಂತೆ ಹಲವರು ಕಾಂಗ್ರೆಸ್‌ ಪಕ್ಷ ಬಿಟ್ಟು ಓವೈಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದುಂಟು. ಇದರೊಂದಿಗೆ ಇನ್ನೂ ಕೆಲ ಮುಸ್ಲಿಂ ಮುಖಂಡರು, ದಲಿತರು ಓವೈಸಿ ಪಕ್ಷದತ್ತ ದೃಷ್ಟಿನೆಟ್ಟಿದ್ದಾರೆ.

ಕಾಂಗ್ರೆಸ್‌ಗೆ ಹಾನಿ:

ಹೀಗೆ ಸಣ್ಣದಾಗಿ ಮುಸ್ಲಿಂ ಮುಖಂಡರು, ದಲಿತರು ಓವೈಸಿ ಪಕ್ಷದತ್ತ ಚಿತ್ತ ಹರಿಸುತ್ತಿದ್ದಾರೆ. ಓವೈಸಿ ಪಕ್ಷ ಕೂಡ ಬಡಾವಣೆಗಳಲ್ಲಿ ಸಭೆ ನಡೆಸುತ್ತಾ ಪಕ್ಷ ಸಂಘಟನೆಯತ್ತ ಗಮನಹರಿಸಿದೆ. ಎಲ್ಲೆಡೆ ಮುಸ್ಲಿಂ ಸಮುದಾಯದ ಕಾಂಗ್ರೆಸ್‌ ಮುಖಂಡರನ್ನೇ ಟಾರ್ಗೆಟ್‌ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಸುವುದರ ಜೊತೆಗೆ ಮುಸ್ಲಿಂ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ. ಮುಸ್ಲಿಂ ಹಾಗೂ ದಲಿತರು ಕಾಂಗ್ರೆಸ್‌ ಪಕ್ಷವನ್ನೇ ನೆಚ್ಚಿಕೊಂಡವರು. ಇವರು ಇದೀಗ ಓವೈಸಿ ಪಕ್ಷದತ್ತ ದೃಷ್ಟಿನೆಟ್ಟಿರುವುದು ಕಾಂಗ್ರೆಸ್‌ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ.

ಬಿಹಾರದಲ್ಲಿ ಗೆಲುವು, ಹೈದರಾಬಾದ್‌ನಲ್ಲಿ ಸಂಭ್ರಮ: ತೇಜಸ್ವಿಗೆ ಮುಳುವಾದ ಓವೈಸಿ ಫ್ಯಾಕ್ಟರ್!

ಮುಂಬರುವ ಪಾಲಿಕೆ, ತಾಪಂ, ಜಿಪಂ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಓವೈಸಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಒಂದು ವೇಳೆ ಓವೈಸಿ ಪಕ್ಷ ಸಂಘಟನೆಯಾದರೆ ಅದು ಕಾಂಗ್ರೆಸ್‌ಗೆ ಮತ್ತಷ್ಟುಹಾನಿಯನ್ನುಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ವೇಳೆ ಓವೈಸಿ ಪಕ್ಷವೇನಾದರೂ ಸಂಘಟಿತವಾದರೆ, ಚುನಾವಣೆಗೆ ಇಳಿದರೆ ಅದು ಸಹಜವಾಗಿ ಕಾಂಗ್ರೆಸ್‌ ಪಕ್ಷದ ಮತಗಳನ್ನೇ ಪಡೆಯುವುದು ಗ್ಯಾರಂಟಿ. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯಾಗುತ್ತದೆ. ಇದು ಸಹಜವಾಗಿ ಬಿಜೆಪಿಗೆ ಮತ್ತಷ್ಟುಲಾಭವಾಗುತ್ತದೆ ಎಂದು ರಾಜಕೀಯ ವಿಶ್ಲೇಷಣೆ ಜಿಲ್ಲೆಯಲ್ಲಿ ಶುರುವಾಗಿದೆ. ಕಾಂಗ್ರೆಸ್‌ ಪಕ್ಷದ ಮುಖಂಡರು ಓವೈಸಿ ಪಕ್ಷದತ್ತ ಚಿತ್ತ ಹರಿಸಿರುವುದು ಕಾಂಗ್ರೆಸ್‌ನಲ್ಲಿ ತಳಮಳ ಶುರು ಮಾಡಿರುವುದಂತೂ ಸತ್ಯ.

ಓವೈಸಿ ಪಕ್ಷಕ್ಕೆ ಕಾಂಗ್ರೆಸ್‌ನಲ್ಲಿದ್ದ ಕೆಲವರು ಸೇರ್ಪಡೆಯಾಗಿದ್ದಾರೆ. ಆದರೆ ಇಲ್ಲಿನ ಭಿನ್ನಮತದಿಂದ ಅಲ್ಲ. ಕೆಲವರು ನಮ್ಮ ಪಕ್ಷದಲ್ಲಿ ಸಲ್ಲದವರು ಅಂಥವರು ಸೇರ್ಪಡೆಯಾಗಿದ್ದರೆ, ಕೆಲವರು ಪಾಲಿಕೆಯ ಚುನಾವಣೆ ಟಿಕೆಟ್‌ ಆಸೆಗಾಗಿ ಅಲ್ಲಿ ಹೋಗಿದ್ದಾರೆ. ಆ ಪಕ್ಷದಿಂದ ಕಾಂಗ್ರೆಸ್‌ಗೇನೂ ಹಾನಿಯಾಗಲ್ಲ. ಆದರೂ ಆ ಪಕ್ಷವನ್ನು ಯಾವ ರೀತಿ ಎದುರಿಸಬೇಕೆಂಬುದನ್ನು ಹಿರಿಯರು ಕಾರ್ಯತಂತ್ರ ರೂಪಿಸುತ್ತಾರೆ ಎಂದು ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ತಿಳಿಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲ. ವಿನಾಕಾರಣ ನನ್ನನ್ನು ಉಚ್ಛಾಟನೆ ಮಾಡಿದರು. ಅಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ, ಆ ಪಕ್ಷವನ್ನು ತೊರೆದು ಓವೈಸಿ ಪಕ್ಷವನ್ನು ಸೇರ್ಪಡೆಯಾಗಿದ್ದೇನೆ. ಈ ಪಕ್ಷವನ್ನು ಸಂಘಟಿಸುತ್ತಿದ್ದೇವೆ. ಜನರಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಓವೈಸಿ ಪಕ್ಷಕ್ಕೆ ಸೇರ್ಪಡೆಯಾದ ಕೈ ಮುಖಂಡ ವಿಜಯ ಗುಂಟ್ರಾಳ್‌ ಹೇಳಿದ್ದಾರೆ.