ಪಾಟ್ನಾ(ನ.11): ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿ ಮಹಾಘಟಬಂಧನದ ಕನಸನ್ನು ನುಚ್ಚು ನೂರುಗೊಳಿಸಿದೆ. ಹೀಗಿದ್ದರೂ ಈ ಫಲಿತಾಂಶ ಎಲ್ಲರಿಗಿಂತ ಹೆಚ್ಚು ಆಘಾತ ಮೂಡಿಸಿದ್ದು ಮಾತ್ರ ತೇಜಸ್ವಿ ನೇತೃತ್ವದ ಆರ್‌ಜೆಡಿಗೆ.ಈವರೆಗೂ ಮುಸ್ಲಿಂ ವೋಟ್ ಬ್ಯಾಂಕ್‌ ತನ್ನೊಂದಿಗೆ ಇರಿಸಿಕೊಂಡಿದ್ದ ಅಸಾದುದ್ದೀನ್ ಓವೈಸಿಯ ಪಕ್ಷ AIMIM ಬಹುದೊಡ್ಡ ಆಘಾತ ನೀಡಿದೆ ಓವೈಸಿಯ ಪಕ್ಷ ಇಲ್ಲಿನ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ, ಹೀಗಾಗಿ ಓವೈಸಿಯ ಹೈದರಾಬಾದ್‌ನಲ್ಲಿರುವ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

AIMIM ಆಟದೆದುರು ಸೋತ ಆರ್‌ಜೆಡಿ

AIMIM ಬಿಹಾರ ಚುನಾವಣೆಯಲ್ಲಿ ತನ್ನ ಇಪ್ಪತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಐವರು ಗೆಲುವು ಸಾಧಿಸಿದ್ದರೆ, ಇನ್ನುಳಿದ ಹದಿನೈದು ಮಂದಿ ಮತ ಒಡೆದು ಆರ್‌ಜೆಡಿಗೆ ಭಾರೀ ನಷ್ಟವುಂಟು ಮಾಡಿವೆ. AIMIM ಆಮೌರ್, ಕೋಚಾಧಮಾನ್, ಬಹಾದೂರ್ಘಂಜ್, ಬೈಸಿ ಹಾಗೂ ಜೋಕೀಹಾಟ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಆರ್‌ಜೆಡಿ ಕೋಟೆಯಲ್ಲಿ ಗೆದ್ದು ಬೀಗಿದ AIMIM ಅಭ್ಯರ್ಥಿಗಳು

ಆರ್‌ಜೆಡಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಬೈಸಿಯಲ್ಲಿ AIMIMಯ ಅಭ್ಯರ್ಥಿ ಸಯೀದ್ ರುಕುನುದ್ದೀನ್ ಆರ್‌ಜೆಡಿಯ ಅಭ್ಯರ್ಥಿ ಹಾಜಿ ಅಬ್ದುಲ್ ಸುಭಾನ್‌ರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಬಿಜೆಪಿ ಅಭ್ಯರ್ಥಿ ವಿನೋದ್ ಕುಮಾರ್ ಇಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಓವೈಸಿ ಈ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಾ  CAA ಹಾಗೂ NRC ವಿಚಾರದಲ್ಲಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇನ್ನು 2019 ರ ಕಿಶನ್‌ಗಂಜ್ ಉಪ ಚುನಾವಣೆಯಲ್ಲಿ AIMIM ಮೊದಲ ಬಾರಿ ಇಲ್ಲಿ ಗೆಲುವಿನ ಸಿಹಿ ಸವಿದಿತ್ತು.