Asianet Suvarna News Asianet Suvarna News

ಕಾಂಗ್ರೆಸ್ಸಿಗರು ಈಗಿನ ಮೊಘಲರಿದ್ದಂತೆ: ಅಸ್ಸಾಂ ಸಿಎಂ ಶರ್ಮಾ

ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟರು ಭಾರತದ ಇತಿಹಾಸವನ್ನು ತಿರುಚಿ ಬಾಬರ, ಔರಂಗಜೇಬರನ್ನು ಹೀರೋ ಮಾಡಲು ಹೊರಟಿರುವ ಮೊಘಲ ಸಂತಾನರು ಎಂದು ದೂರಿದ ಹಿಮಂತ್‌ ಬಿಸ್ವಾ ಶರ್ಮಾ. 

Congress Leaders are Like Present day Mughals Says Assam CM Himanta Biswa Sarma grg
Author
First Published Mar 18, 2023, 12:48 PM IST

ಬೆಳಗಾವಿ(ಮಾ.18):  ಕಾಂಗ್ರೆಸ್‌ನವರು ಈಗಿನ ಹೊಸ ಮೊಘಲರಿದ್ದಂತೆ. ರಾಮಮಂದಿರ ನಿರ್ಮಾಣ ಆಗುತ್ತದೆ ಎಂದರೆ ಇವರಿಗೆ ಆಪತ್ತು ಎದುರಾಗುತ್ತದೆ. ನೀವೇನು ಮೊಘಲರ ಮಕ್ಕಳಿದ್ದೀರಾ? ನೀವು ಬಾಬರಿ ಮಸೀದಿ ಬಗ್ಗೆ ಏಕೆ ಮಾತನಾಡುತ್ತೀರಿ? ರಾಮಮಂದಿರ ಬಗ್ಗೆ ಏಕೆ ಮಾತನಾಡಲ್ಲ? ಮೊದಲು ಮೊಘಲರು ಭಾರತ ದುರ್ಬಲಗೊಳಿಸಲು ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್‌ವರು ಹೊಸ ಮೊಘಲರಿದ್ದು ದೇಶ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದರು.

ನಗರದ ಶಹಪೂರದಲ್ಲಿ ನಿರ್ಮಿಸಲಾಗಿರುವ ಶಿವಚರಿತ್ರೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಮೊಘಲರ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ನಾವು ತಿಳಿದುಕೊಳ್ಳಬೇಕು. ಆಗ ಜನಿಸಿದ ಶಿವಾಜಿ ಮಹಾರಾಜರು ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿದವರು. ಆದರೆ ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟರು ಭಾರತದ ಇತಿಹಾಸವನ್ನು ತಿರುಚಿ ಬಾಬರ, ಔರಂಗಜೇಬರನ್ನು ಹೀರೋ ಮಾಡಲು ಹೊರಟಿರುವ ಮೊಘಲ ಸಂತಾನರು ಎಂದು ದೂರಿದರು.

ಚುನಾವಣಾ ಅಕ್ರಮ: ಬೆಳಗಾವಿಯಲ್ಲಿ ಮೊದಲ ಕೇಸು ದಾಖಲು

ನವ ಭಾರತ ನಿರ್ಮಾಣದಲ್ಲಿ ದಿಟ್ಟಹೆಜ್ಜೆ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಥ್‌ ನೀಡಬೇಕು ಎಂದ ಅವರು, ನವ ಭಾರತದ ಶೈಕ್ಷಣಿಕ ಪ್ರಗತಿಗೆ ಮದರಸಾಗಳ ಬದಲು ಶಾಲೆ, ಕಾಲೇಜುಗಳನ್ನು ನಿರ್ಮಿಸಬೇಕು. ಇದೇ ಕಾರಣಕ್ಕೇ ಅಸ್ಸಾಂನಲ್ಲಿ ಈಗಾಗಲೇ 600 ಮದರಸಾಗಳನ್ನು ಮುಚ್ಚಿದ್ದು, ಮುಂಬರುವ ದಿನಗಳಲ್ಲಿ ಇನ್ನುಳಿದ ಎಲ್ಲವನ್ನೂ ಮುಚ್ಚುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.

ಅಯೋಧ್ಯೆಯ ನೂತನ ರಾಮಮಂದಿರ, ಕಾಶಿ ವಿಶ್ವನಾಥದಲ್ಲಿನ ಕಾರಿಡಾರ, ಉಜ್ಜಯಿನಿ ಮಹಾಕಾಳಿ ಕಾರಿಡಾರ ಮಾದರಿಯಂತೆ ಅಸ್ಸಾಂನಲ್ಲಿಯೂ ‘ಕಾಮಾಕ್ಯ ಮಂದಿರ ಕಾರಿಡಾರ’ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡಿ ಬಜೆಟ್‌ಮಂಡನೆ ಮಾಡಿರುವೆ ಎಂದರು.

ಇಂದು ನಮ್ಮ ಭಾರತ ಹೊಸ ದಿಶೆಯಲ್ಲಿ ಹೋಗಲು ತಯಾರಾಗಿದೆ. ನಮ್ಮ ಜೀವಮಾನದಲ್ಲಿ ಯಾರೂ ರಾಮಮಂದಿರ ನಿರ್ಮಾಣ ಆಗುತ್ತದೆ ಎಂದು ಯೋಚಿಸಿರಲಿಲ್ಲ. ಮೋದಿ ಸರ್ಕಾರದಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿದೆ. ನವಭಾರತ ಆರ್ಥಿಕತೆ ಬ್ರಿಟನ್‌ಗಿಂತ ಹೆಚ್ಚಿದೆ. ಅಲ್ಲದೆ ಪಾಕಿಸ್ತಾನಕ್ಕೆ ಒಳನುಗ್ಗಿ ಉಗ್ರರ ಸದೆಬಡೆಯುತ್ತಿರೋದು ನವಭಾರತ. ನವಭಾರತ ದುರ್ಬಲಗೊಳಿಸುವ ಕೆಲಸ ಕಾಂಗ್ರೆಸ್‌ ಮಾಡುತ್ತಿದೆ ಎಂದು ದೂರಿದರು.

ನೀವು 600 ಮದರಸಾ ಬಂದ್‌ ಮಾಡಿದ್ದು, ನಿಮ್ಮ ಉದ್ದೇಶ ಏನು ಎಂದು ನನ್ನ ದೆಹಲಿಯ ಮಾಧ್ಯಮದವರು ಸಂದರ್ಶನದಲ್ಲಿ ಕೇಳಿದ್ದರು, ಎಲ್ಲ ಮದರಸಾ ಬಂದ್‌ ಮಾಡೋದು ನನ್ನ ಉದ್ದೇಶ ಎಂದಿದ್ದೆ. ನಮಗೆ ಮದರಸಾ ಅವಶ್ಯಕತೆ ಇಲ್ಲ. ಡಾಕ್ಟರ್‌ ಇಂಜಿನಿಯರ ಮಾಡುವ ಶಾಲಾ, ಕಾಲೇಜುಗಳ ಅವಶ್ಯಕತೆ ಇದೆ. ತಿರುಚಿದ ಇತಿಹಾಸವನ್ನು ಹೊಸ ಇತಿಹಾಸ ಬರೆಯುವ ಸಮಯ ಬಂದಿದೆ. ಅಸ್ಸಾಂಗೂ ಬೆಳಗಾವಿಗೂ 3 ಸಾವಿರ ಕಿ.ಮೀಗೂ ಹೆಚ್ಚು ಅಂತರವಿದೆ. ಆದರೆ ನನಗೆ ಇಲ್ಲಿ ಬಂದು ಒಂದು ತೀರ್ಥಯಾತ್ರೆಗೆ ಬಂದ ರೀತಿ ಅನುಭವ ಇದೆ ಎಂದು ತಮ್ಮ ಅನುಭವ ಹೇಳಿಕೊಂಡರು.

Karnataka Politics : ಚುನಾವಣೆಗೂ ಮುನ್ನ ಪ್ರಚಾರ ಅಬ್ಬರ

ಭಾರತದ ಇತಿಹಾಸ ಬಗ್ಗೆ ಇತಿಹಾಸಕಾರರು ತಪ್ಪಾಗಿ ಬರೆದಿದ್ದಾರೆ. ಔರಂಗಜೇಬ ದೆಹಲಿ ಸುಲ್ತಾನ್‌ ಆಗಿದ್ದ ಹೊರತು ಇಡೀ ಭಾರತ ವಶಕ್ಕೆ ಪಡೆದಿರಲಿಲ್ಲ. ಅಸ್ಸಾಂನಿಂದ ಉತ್ತರವರೆಗೂ ಔರಂಗಜೇಬ ಅಧೀನದಲ್ಲಿ ಇರಲಿಲ್ಲ. ಭಾರತದ ಕಮ್ಯುನಿಸ್ಟ್‌ ಇತಿಹಾಸಕಾರರು ಭಾರತ ಔರಂಗಜೇಬನ ನಿಯಂತ್ರಣದಲ್ಲಿತ್ತೆಂದು ತೋರಿಸಲು ಯತ್ನಿಸಿದ್ದಾರೆ. ನಾವು ಹೊಸ ಇತಿಹಾಸ ಬರೆದು ಜನರಿಗೆ ತಿಳಿಸಬೇಕಾಗಿದೆ. ಔರಂಗಜೇಬನಿಗಿಂತ ನೂರು ಪಟ್ಟು ಪರಾಕ್ರಮಿ ಶಿವಾಜಿ ಮಹಾರಾಜರಾಗಿದ್ದರು. ಭಾರತ ಇತಿಹಾಸ ಛತ್ರಪತಿ ಶಿವಾಜಿ ಮಹಾರಾಜರು ಸೇರಿ ಹಲವು ಮಹನಿಯರದ್ದಿತ್ತು. ಕಾಂಗ್ರೆಸ್‌, ಕಮ್ಯುನಿಸ್ಟರು ಭಾರತದ ಇತಿಹಾಸ ಔರಂಗಜೇಬ, ಬಾಬರ, ಶಹಜಹಾನ್‌ ಎಂಬಂತೆ ಮಾಡಿದ್ದರು ವಾಗ್ದಾಳಿ ನಡೆಸಿದರು.

ಹಿಂದೂ ಸ್ವರಾಜ್‌ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಆಯ್ದ ಪ್ರಸಂಗಗಳನ್ನು ಆಧರಿಸಿದ ಶಿವಚರಿತ್ರೆ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಧ್ವನಿ​ ಬೆಳಕು ಯೋಜನೆ ಆಧರಿಸಿ ಛತ್ರಪತಿ ಶಿವರಾಯರ ಜೀವನದ ಕುರಿತು ಪ್ರದರ್ಶನ ನೀಡಲಾಗುವುದು. ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ಶಿವಚರಿತ್ರೆಗೆ ಭೇಟಿ ನೀಡಬಹುದು. ಸಂಜೆ 6.30ರ ನಂತರ ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಪ್ರತಿ 40 ನಿಮಿಷಗಳ ಕಾರ್ಯಕ್ರಮವು ಬ್ಲೂ ಟೂತ್‌ ಮತ್ತು ವಾಕ್‌ಮ್ಯಾನ್‌ ಸಹಾಯದಿಂದ ಶಿವರಾಯರ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಒಂದೇ ಬಾರಿಗೆ 400 ಮಂದಿ ಒಟ್ಟಿಗೆ ಕುಳಿತು ಕೇಳಬಹುದು. ಅಲ್ಲದೇ ದೇಶದಲ್ಲೇ ಪ್ರಥಮ ಬಾರಿಗೆ ನೀರಿನ ಕಾರಂಜಿಗಳ ಆಧಾರದ ಮೇಲೆ ಶಿವನ ಜೀವನದ ಘಟನೆಗಳನ್ನು ವೀಕ್ಷಿಸುವ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ.

Follow Us:
Download App:
  • android
  • ios