ಮತಾಂಧ ಶಕ್ತಿಗಳಿಗೆ ಹೆದರಿ ಸಿಎಂ ಪರಿಹಾರ ತಾರತಮ್ಯ: ಖಾದರ್‌

ಮಂಗಳೂರು(ಜು.30): ಜಿಲ್ಲೆಯಲ್ಲಿ ಮೃತಪಟ್ಟ ಯುವಕರ ಮನೆಯವರಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾರತಮ್ಯ ಎಸಗಿದ್ದಾರೆ. ಮತಾಂಧ ಶಕ್ತಿಗಳಿಗೆ ಹೆದರಿ ಈ ರೀತಿ ಮಾಡಿದ್ದಾರೆ. ಸತ್ತ ಮೂವರೂ ಅಮಾಯಕರು. ಆದರೆ ಸಿಎಂ ಒಬ್ಬರ ಮನೆಗೆ ಮಾತ್ರ ಹೋಗಿ ಪರಿಹಾರ ನೀಡಿದ್ದಾರೆ. ಮೃತಪಟ್ಟ ಎಲ್ಲ ಯುವಕರ ಮನೆಯವರಿಗೂ ಸಮಾನವಾಗಿ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಯು.ಟಿ. ಖಾದರ್‌ ಒತ್ತಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವಾಗ ಎಲ್ಲರನ್ನೂ ಸಮಾನವಾಗಿ ನೋಡುವ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಈಗ ಅವರ ನಿಲುವು ನೋಡುವಾಗ ನಾಚಿಕೆಯಾಗುತ್ತದೆ. ಮುಖ್ಯಮಂತ್ರಿ ಪರಿಹಾರ ನೀಡುವುದು ತನ್ನ ಕಿಸೆಯಿಂದಲ್ಲ, ಜನರ ತೆರಿಗೆ ಹಣದಿಂದ. ಆದರೆ ಅವರು ಒಂದು ಕಡೆ ಮಾತ್ರ ಹೋಗಿ ಪರಿಹಾರ ನೀಡಿದ್ದಾರೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಸರ್ಕಾರ ಎಂದು ಪ್ರಶ್ನಿಸಿದರು.

Praveen Nettaru Murder Case: ಬಿಜೆಪಿಗೆ ಪರ್ಯಾಯ ಹಿಂದು ಪಕ್ಷ ಕಟ್ಟಬೇಕಾಗುತ್ತದೆ: ಮುತಾಲಿಕ್‌ ಎಚ್ಚರಿಕೆ

ಸಿಎಂ ಸ್ಥಾನಕ್ಕೆ ಕಪ್ಪುಚುಕ್ಕೆ: 

ಸ್ವತಃ ಸಿಎಂ ಪಕ್ಷಪಾತದ ತೀರ್ಮಾನ ಮಾಡಿದರೆ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ತನಿಖೆ ನಡೆಸುವ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ ಯು.ಟಿ. ಖಾದರ್‌, ಇಂಥ ತಾರತಮ್ಯ ಮಾಡಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕೆ ಕಪ್ಪುಚುಕ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಬರುವಾಗ ಎಲ್ಲವೂ ಸರಿಯಾಗುತ್ತದೆ ಎನ್ನುವ ನಂಬಿಕೆ ಜನರದ್ದು. ಆದರೆ ಸಿಎಂ ಜಿಲ್ಲೆಯಲ್ಲಿರುವಾಗಲೇ ಮತ್ತೊಂದು ಹತ್ಯೆ ನಡೆದಿದೆ. ಇದು ಯಾರ ವೈಫಲ್ಯ? ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದಿರುವುದೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.

ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಈ ಹತ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಯಾವ ಮತಾಂಧ ಶಕ್ತಿಗಳು ಇದರ ಹಿಂದೆ ಇದ್ದರೂ ಮಟ್ಟಹಾಕಬೇಕು. ಮುಂದೆ ಇಂಥ ಕೃತ್ಯ ಆಗದಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.