ಮೈಸೂರು (ಮಾ.04):  ಪರಸತಿ,ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡ್ತಿದೆ, ರಾಸಲೀಲೆ, ರಸಲೀಲೆ, ಕರ್ಮಕಾಂಡಗಳ ನಡುವೆ ರಾಜಕಾರಣ ಇದೆ. ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರೋದು ರಾಜ್ಯಕ್ಕೆ ದುರ್ದೈವ ಎಂದು ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ಘಟನೆಯನ್ನು ವಿಪ ಸದಸ್ಯ ಸಿ.ಎಂ.ಇಬ್ರಾಹಿಂ ವಿಮರ್ಶೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂಗೆ ತಕ್ಕನಾದ ಮಂತ್ರಿ ಅದಕ್ಕೊಂದು ಪಾರ್ಟಿ ಬೇರೆ, ಇವರ ಮಧ್ಯೆ ಸಿಲುಕಿ ಕೇಶವಕೃಪ, ಬಸವ ಕೃಪ ಒದ್ದಾಡುತ್ತಿವೆ. ಇದು ದಿಕ್ಕತಪ್ಪಿನ ರಾಜಕಾರಣ. ಹಿಂದೆ ಜನ ಓಟು ಕೊಡಬೇಕಾದ್ರೆ ಕುಲ ಕಸಬು ನೋಡೋರು, ಒಂದು ಎತ್ತು ತಗೋಬೇಕಾದ್ರು ಅದರ ತಳಿ ಯಾವುದು ಅಂತ ನೋಡ್ತಿವಿ. ರೇಸ್‌ನಲ್ಲಿ ಈ ಕುದುರೆಗೆ ದುಡ್ಡು ಕಟ್ಟೋಕೂ ಮುನ್ನ ಅದರ ಅಪ್ಪ ಅಮ್ಮ ಎಷ್ಟುರೇಸ್‌ ಗೆದ್ದಿವೆ ಅಂತ ನೋಡ್ತಿವಿ, ಆದ್ರೆ ಈಗೀನ ರೇಸ್‌ಗಳು ಎಷ್ಟುದುಡ್ಡು ತಂದಿದ್ದಾರೆ ಅಂತ ಮಾತ್ರ ನೋಡ್ತಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದ ತನ್ವೀರ್ ಸೇಠ್ : ಕಾರಣ? ..

ನಾನು ಕಾಂಗ್ರೆಸ್‌ನಲ್ಲಿ ಉಳಿಯೋಕೆ ಒಂದೇ ಒಂದು ಡಿಮ್ಯಾಂಡ್‌ ಇದೆ. ಅದು ಕಾಂಗ್ರೆಸ್‌ನಲ್ಲಿ ಸಜ್ಜನರಿಗೆ ಅವಕಾಶ ಕೊಡಬೇಕು. ನಿರ್ಧಾರ ಕೈಗೊಳ್ಳಲು ಸಜ್ಜನರಿಗೆ ಅಧಿಕಾರ ಕೊಡಬೇಕು ಅನ್ನೊದಷ್ಟೇ ನನ್ನ ಡಿಮ್ಯಾಂಡ್‌, ನಾನು ಅಧಿಕಾರದ ಆಸೆಯಲ್ಲಿಲ್ಲ, ಒಂದು ವರ್ಷ ಆದ್ಮೇಲೆ ಸಿದ್ದರಾಮಯ್ಯ ನಾವು ಭೇಟಿಯಾಗಿದ್ದೇವೆ. ದೆಹಲಿಗೆ ಹೋಗಿ ಮೇಡಂ ಅವರನ್ನ ಭೇಟಿ ಮಾಡಿ ಬರ್ತಿನಿ. ಆ ನಂತರ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದೇನೆ ಎಂದು ತಮ್ಮ ರಾಜಕೀಯದ ಬಗ್ಗೆ ಮಾತನಾಡಿದರು.

ನಾನು ಸಿದ್ದರಾಮಯ್ಯ ರಾಜಕೀಯ ವಿಚಾರ ಮಾತ್ರ ಮಾತನಾಡಿದ್ದೇವೆ. ನಮ್ಮಿಬ್ಬರ ಮಧ್ಯೆ ಯಾವುದೇ ವ್ಯಾಪರ ಇಲ್ಲ, ನಾನು ದೇವೇಗೌಡರನ್ನು ಭೇಟಿ ಮಾಡಿದ್ದೆ, ಅಡ್ವಾಣಿ ಮನೆಗೂ ಹೋಗಿದ್ದೆ. ವಿಶ್ವಾಸಕ್ಕೆ ಜಾತಿ ಪಕ್ಷ ಇಲ್ಲ, ಆರ್‌ಎಸ್‌ಎಸ್‌ನಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ಆದ್ರೆ ಅವರ ವಿಚಾರಧಾರೆ ಬೇರೆ ನಮ್ಮದೆ ಬೇರೆ ಇರುತ್ತೆ. ದೇಶಕ್ಕೆ ಒಳ್ಳೆಯದಾಗಬೇಕು ಅನ್ನೋದೆ ನಮ್ಮ ಉದ್ದೇಶ. ಕಾಂಗ್ರೆಸ್‌ನಲ್ಲಿ ಉಳಿಯೋದು ಕಾಲಯ ತಸ್ಮೈ ನಮಹ, ನಮಗೂ ಸಿದ್ದರಾಮಯ್ಯನವರಿಗೂ ಸ್ನೇಹ ಸಂಬಂಧ ಇದ್ದೆ ಇರುತ್ತೆ. ರಾಜಕೀಯ ನಡೆಗಳನ್ನ ಮುಂದೆ ನೋಡೋಣ ಎಂದರು.