ತುಮಕೂರು (ಅ.08): ಶಿರಾ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದ್ದು ಕಾಂಗ್ರೆಸ್‌ ನೂರಕ್ಕೆ ನೂರರಷ್ಟುಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶಿರಾದಲ್ಲಿ ಬಿಜೆಪಿಗೆ ಬಲ ಬಂದಿದೆ. ಹೀಗಾಗಿ ಅಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಸತ್ಯ. ಆದರೂ ಜಯಚಂದ್ರ ಈ ಬಾರಿ ಗೆಲ್ಲಲಿದ್ದಾರೆ ಎಂದರು.

ಈ ಉಪ ಚುನಾವಣೆಯಲ್ಲಿ ಎಲ್ಲ ಮುಖಂಡರು ಶಿರಾದಲ್ಲೇ ಇದ್ದು ಕೆಲಸ ಮಾಡುತ್ತೇವೆ. ನಾನೂ ಕೂಡ ನಾಲ್ಕು ದಿನ ತುಮಕೂರಲ್ಲೇ ಇದ್ದು ಪ್ರಚಾರ ಮಾಡುವೆ. ಶಿರಾ ಉಪಚುನಾವಣೆಯಲ್ಲಿ ಯಾವುದೇ ಒಳ ಏಟು, ಹೊರ ಏಟು ಇಲ್ಲ. ಶಿರಾದಲ್ಲಿ ಗೆಲ್ಲಲ್ಲೇ ಬೇಕು ಎಂಬುದು ಒಂದೇ ಏಟು ಎಂದರು.

ಪರಿಷತ್‌ ಚುನಾವಣೆ: 17 ನಾಮಪತ್ರ ಸಲ್ಲಿಕೆ ...

ನಮ್ಮ ಅವಧಿಯ ಅಭಿವೃದ್ಧಿ ಕೆಲಸವನ್ನು ಜನ ಇನ್ನೂ ಮರೆತಿಲ್ಲ. ಅದನ್ನು ನೆನಪಿಸಿಕೊಂಡು ಈ ಬಾರಿ ಮತ ಹಾಕುತ್ತಾರೆ. ಕಳೆದ ಬಾರಿ ಜಯಚಂದ್ರ ವಿರುದ್ಧ ಅಪಪ್ರಚಾರ ಜಾಸ್ತಿ ಆಗಿತ್ತು. ಅಲ್ಲದೇ ಜಾತಿ ರಾಜಕಾರಣ ಕೂಡ ಹೆಚ್ಚಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಅವೆಲ್ಲ ನಡೆಯುವುದಿಲ್ಲ ಎಂದರು.