ಕುಟುಂಬ ನಿರ್ವಹಣೆ ಕಷ್ಟ ಅನುಭವಿಸುತ್ತಿರುವ ಹನುಮಂತ| ವೈರಲ್ ಆಗಿರುವ ಸಾಮಾಜಿಕ ಜಾಲತಾಣದ ಪೋಸ್ಟ್| ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾರಿಗೆ ಡಿಪೋದಲ್ಲಿ ಬಸ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಕಾಲೇಗಾರ|
ಕುಷ್ಟಗಿ(ಫೆ.11): ಕಳೆದ 18 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ತಮಗೆ ಸಮಯಕ್ಕೆ ಸರಿಯಾಗಿ ಸಂಬಳ ಬರುತ್ತಿಲ್ಲ ಎಂದು ಮನನೊಂದು ತನ್ನ ಕುಟುಂಬ ನಿರ್ವಹಣೆಗಾಗಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಅದೀಗ ವೈರಲ್ ಆಗಿದೆ.
ಕುಷ್ಟಗಿಯಲ್ಲಿ ವಾಸವಾಗಿರುವ ಗಂಗಾವತಿಯ ಸಾರಿಗೆ ಡಿಪೋದಲ್ಲಿ ಬಸ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಕಾಲೇಗಾರ, 2002ರಲ್ಲಿ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಸೇರಿದ್ದಾರೆ. ಮೂಲತಃ ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕು ಕಾಚಾಪುರದ ಅವರು ಕಳೆದ ನಾಲ್ಕಾರು ತಿಂಗಳಿಂದ ಸಮಯಕ್ಕೆ ಸರಿಯಾಗಿ ವೇತನ ಬಾರದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಸಾಲ ಸಹ ಮಾಡಿಕೊಂಡಿದ್ದೇನೆ. ಆ ಹಿನ್ನೆಲೆಯಲ್ಲಿ ಕಿಡ್ನಿ ಮಾರಲು ಮುಂದಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಿ ಮಾರಾಟಕ್ಕಿಟ್ಟಿರುವ ಪೋಸ್ಟ್ ಹಾಕಿದ ವಿಷಯ ತಿಳಿದು ಸುದ್ದಿಗಾರರು ಭೇಟಿಯಾದಾಗ ಮಾತನಾಡಿ, ಕಳೆದ ಕೆಲ ತಿಂಗಳಿಂದ ಸಮಯಕ್ಕೆ ಸರಿಯಾಗಿ ವೇತನ ಬರುತ್ತಿಲ್ಲ. ಅದೂ ಪೂರ್ತಿ ಹಣ ಕೈಗೆ ಸಿಗುತ್ತಿಲ್ಲ. ಇದರಿಂದ ಮನೆ ಬಾಡಿಗೆ ಕಟ್ಟಲು, ರೇಶನ್ ತರಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ತಿಂಗಳಿಂದ ಕೇವಲ 3 ಸಾವಿರ ರು. ಮಾತ್ರ ವೇತನ ಬರುತ್ತಿದೆ. ಜೀವನ ನಡೆಸಲು ಕಷ್ಟವಾಗುತ್ತಿದೆ. ಈ ಮೊದಲು 16 ಸಾವಿರ ವೇತನ ಬರುತ್ತಿತ್ತು. ಆದರೆ, ಸದ್ಯ ಪ್ರತಿ ತಿಂಗಳು ಸಂಬಳ ಆಗುತ್ತಿಲ್ಲ. ಜೊತೆಗೆ ಬರುವ ಸಂಬಳ ಸಹ ಕುಟುಂಬ ನಿರ್ವಹಣೆಗೆ ಸಾಲುತ್ತಿಲ್ಲ ಎಂದು ಕಣ್ಣೀರಿಟ್ಟರು.
ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಸದ್ಯದ ಸಂಬಳದಿಂದ ಅನಾರೋಗ್ಯಪೀಡಿತ ತಾಯಿ ಮತ್ತು ಮೂರು ಮಕ್ಕಳನ್ನು ಸಾಕಲಾಗುತ್ತಿಲ್ಲ. ಈಗಾಗಲೇ ಎಲ್ಲ ಕಡೆ ಕೈ ಸಾಲ ತೆಗೆದುಕೊಂಡು ಹಣ ಕಟ್ಟಲೂ ಆಗುತ್ತಿಲ್ಲ. ವಯಸ್ಸಾದ ತಾಯಿಗೆ ಆಸ್ಪತ್ರೆಯ ಭಾಗ್ಯವಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ತಿಂಗಳಿಗೆ 3,500 ಮನೆ ಬಾಡಿಗೆ ಹಣ ಕಟ್ಟಬೇಕು. ವೇತನ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಪೂರ್ತಿ ವೇತನವೂ ಸಿಗದೇ ಇರುವುದರಿಂದ ಪ್ರತಿ ತಿಂಗಳು ಕಷ್ಟಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿನಗೊಬ್ಬನಿಗೇ ಅಲ್ಲ, ಎಲ್ಲರಿಗೂ ಇದೇ ಸಮಸ್ಯೆಯಾಗಿದೆ ಎಂದು ಅವರು ಜಾರಿಕೊಂಡರು. ಹಾಗಾಗಿ, ಅನಿವಾರ್ಯವಾಗಿ ತಾಯಿ-ಪತ್ನಿ, ಮಕ್ಕಳನ್ನು ಸಾಕುವ ಸಲುವಾಗಿ ಕಿಡ್ನಿ ಮಾರಟಕ್ಕಿಟ್ಟಿದ್ದೇನೆ. ಬೇರೆ ಯಾವುದೇ ಕಾರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನೊಬ್ಬ ಸರಕಾರಿ ನೌಕರರೆಂದು ಸರಕಾರ ನನಗೆ ರೇಷನ್ ಕೊಡುತ್ತಿಲ್ಲ. ಜೊತೆಗೆ ನನ್ನ ಸ್ವಂತ ಊರಲ್ಲಿದ್ದ ಜನತಾ ಮನೆಯೊಂದನ್ನು ಸಹ ಸರ್ಕಾರ ವಾಪಸ್ ಪಡೆದಿದೆ ಎಂದು ತನ್ನ ಅಳಲು ತೋಡಿಕೊಂಡರು. ಸರಿಯಾಗಿ ಮತ್ತು ಸಮರ್ಪಕವಾಗಿ ಸಂಬಳವಾಗದಿರುವುದರಿಂದ ನನ್ನಂತೆ ಇತರ ನೌಕಕರಿಗೂ ತೊಂದರೆಯಾಗುತ್ತಿದೆ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2021, 9:21 AM IST