ಮಂಗಳೂರು(ಮೇ.22): ಕೊರೋನಾ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲ ಆಗಿರುವುದನ್ನು ಮರೆಮಾಚಲು ಬಿಜೆಪಿಯು ನಕಲಿ ಟೂಲ್‌ ಕಿಟ್‌ ಕಥೆ ಕಟ್ಟಿ ನಾಚಿಗೇಡಿನ ಕುಕೃತ್ಯವೆಸಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹಾಗೂ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಸೋಶಿಯಲ್‌ ಮಿಡಿಯಾ ಟ್ವಿಟ್ಟರ್‌ ಈಗಾಗಲೇ ಬಿಜೆಪಿಯ ಜೋಕರ್‌ ಮತ್ತು ವಕ್ತಾರ ಸಂಬಿತ್‌ ಪಾತ್ರ ಅವರ ‘ಟೂಲ್‌ ಕಿಟ್‌’ ಟ್ವೀಟ್‌ ‘ತಿರುಚಲ್ಪಟ್ಟಿರುವ ಮೀಡಿಯಾ’ ಎಂದು ಹೇಳಿದೆ. ಬಿಜೆಪಿ ತನ್ನ ಸಕಲ ವೈಫಲ್ಯಗಳನ್ನು ಮುಚ್ಚಿಹಾಕಲು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅತ್ಯಂತ ನೀಚಮಟ್ಟಕ್ಕೆ ಇಳಿದಿದೆ ಎಂದು ಅವರುಗಳು ಹೇಳಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ದೂರು, ಖಾದರ್‌

ಮಾಧ್ಯಮ ಸಂಸ್ಥೆಗಳು ಈಗಾಗಲೇ ಬಿಜೆಪಿಯ ಮುಖಂಡರು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿವೆ. ಬಿಜೆಪಿ ಪ್ರಚಾರಕ್ಕೆ ತಂದಿರುವ ಟೂಲ್‌ ಕಿಟ್‌ ಕಟ್ಟು ಕಥೆಯಲ್ಲಿ ಕಾಂಗ್ರೆಸ್‌ ಪಕ್ಷದ ಯಾವುದೇ ಪಾತ್ರ ಇಲ್ಲ. ಬಿಜೆಪಿ ಇಂತಹ ಕೃತ್ಯದ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಸುಳ್ಳು ಮತ್ತು ಅಪಪ್ರಚಾರದ ಮೂಲಕವೇ ಅಧಿ​ಕಾರಕ್ಕೆ ಬಂದಿರುವ ಬಿಜೆಪಿಯಂತಹ ರಾಜಕೀಯ ಪಕ್ಷ ಜನಾಭಿಪ್ರಾಯ ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸಂಘಟನೆಗಳ ಜನಪರ ಸೇವೆಯನ್ನು ಸಹಿಸಲಾರದೆ ಬಿಜೆಪಿ ಇಂತಹ ನೀಚ ಕೃತ್ಯ ನಡೆಸಿದೆ. ಈಗಾಗಲೇ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದಿದ್ದಾರೆ.