ಮಂಗಳೂರು(ಮೇ.22): ಎಐಸಿಸಿ ರೀಸರ್ಚ್‌ ಡಿಪಾರ್ಟ್‌ಮೆಂಟ್‌ನ ಲೆಟರ್‌ ಹೆಡ್‌ನ ನಕಲಿ ಪತ್ರವನ್ನು ತಯಾರಿಸಿ ಕೋಮು ಸಾಮರಸ್ಯ ಕದಡುವ ಸಂದೇಶಗಳನ್ನು ಟೂಲ್‌ ಕಿಟ್‌ ಆ್ಯಪ್‌ ಸೇರಿದಂತೆ ಜಾಲ ತಾಣಗಳಲ್ಲಿ ಹರಡುತ್ತಿರುವ ಬಗ್ಗೆ ಬಿಜೆಪಿ ನಾಯಕರ ವಿರುದ್ಧವೇ ದೂರು ನೀಡಲಾಗಿದೆ ಎಂದು ಮಾಜಿ ಸಚಿವ, ಶಾಸಕ ಯು. ಟಿ. ಖಾದರ್‌ ಹೇಳಿದ್ದಾರೆ.

ಶುಕ್ರವಾರ ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮೃತಿ ಇರಾನಿ, ಪ್ರಧಾನ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಸೇರಿದಂತೆ ಇತರ ಹಲವರ ವಿರುದ್ಧ ದೆಹಲಿ ಪೊಲೀಸ್‌ ಕಮಿಷನರಿಗೆ ದೂರು ನೀಡಿ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿಸಿದರು.

ದೇಶದ ಜನರಿಗೆ ಲಸಿಕೆ ಕೊರತೆ ಇರುವಾಗ ಪಾಕಿಸ್ತಾನಕ್ಕೆ ಲಸಿಕೆ ಪೂರೈಕೆ ಮಾಡಲಾಗಿದೆ. ಪಾಕ್‌ಗೆ ಲಸಿಕೆ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚು ಆಸಕ್ತಿ ವಹಿಸಲು ಕಾರಣವೇನು ಎನ್ನುವುದನ್ನು ದೇಶದ ಜನತೆ ಪ್ರಧಾನಿ ಉತ್ತರಿಸಬೇಕು ಯು. ಟಿ. ಖಾದರ್‌ ಆಗ್ರಹಿಸಿದರು.

ಇಸ್ರೋದಿಂದ ಆಕ್ಸಿಜನ್‌ ಪಡೀರಿ ಎಂದ HK ಪಾಟೀಲ್‌ಗೆ ಹೈಕೋರ್ಟ್‌ ತರಾಟೆ

ಕರಾವಳಿಗೆ ಪ್ಯಾಕೇಜ್‌ ಅನ್ಯಾಯ: 

ಕೋವಿಡ್‌ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಕರಾವಳಿ ಜನರನ್ನು ನಿರ್ಲಕ್ಷಿಸಲಾಗಿದೆ. ಮೀನುಗಾರರಿಗೆ ನೀಡಬೇಕಾದ ಡೀಸೆಲ್‌ ಸಬ್ಸಿಡಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕರಾವಳಿಯ ಮೀನುಗಾರರಿಗೆ, ಬೀಡಿ ಕಾರ್ಮಿಕರಿಗೆ, ಹೊಟೇಲ್‌ ಕಾರ್ಮಿಕರು, ಬಸ್ಸು, ಕ್ಯಾಬ್‌ ವಾಹನಗಳ ಚಾಲಕರಿಗೆ, ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್‌ ಘೋಷಿಸಿಲ್ಲ ಎಂದು ಖಾದರ್‌ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಘೋಷಿಸಿರುವುದು ಕೇವಲ ಪ್ರಚಾರದ ಪ್ಯಾಕೇಜ್‌. ಕನಿಷ್ಠ 10 ಸಾವಿರ ರು. ಕಾರ್ಮಿಕರಿಗೆ ನೀಡಬೇಕು ಎಂದು ಕಾಂಗ್ರೆಸ್‌ ಸಲಹೆ ನೀಡಿತ್ತು. ಆದರೆ ಸರ್ಕಾರ ಜುಜುಬಿ ಪ್ಯಾಕೇಜ್‌ ಘೋಷಣೆ ಮಾಡಿದೆ. ಇದರಲ್ಲಿ ಖಾಸಗಿ ಶಿಕ್ಷಕರನ್ನು ಕೈಬಿಡಲಾಗಿದೆ. ಅವರ ಕ್ಷೇಮ ನಿ​ಧಿಯಿಂದಲೂ ಹಣ ನೀಡಲಾಗುತ್ತಿಲ್ಲ. ಮೊದಲು ಕೋವಿಡ್‌ ಕಂಟ್ರೋಲ್‌ ಮಾಡಿ ಸರ್ಕಾರದ ಹಣದಿಂದ ಮೋದಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಬಳಕೆ ಮಾಡಬೇಡಿ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಶಾಸಕ ಹರೀಶ್‌ ಕುಮಾರ್‌ ಹೇಳಿದರು. ಮುಖಂಡರಾದ ವಿನಯ ರಾಜ್‌, ಮುಹಮ್ಮದ್‌ ಮೋನು, ಸದಾಶಿವ ಉಳ್ಳಾಲ್‌, ಸುಭೋದಯ ಆಳ್ವ, ಅನಿಲ್‌ ಕುಮಾರ್‌, ಸಿ.ಎಂ.ಮುಸ್ತಫಾ ಇದ್ದರು.