Asianet Suvarna News Asianet Suvarna News

'ಸಚಿವ ಶ್ರೀರಾಮುಲು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದರೆ ಸ್ವಾಗತ'

ವಿಜಯನಗರ: 2023ರಲ್ಲಿ ಕಾಂಗ್ರೆಸ್‌ ಬಾವುಟ ಹಾರಲಿದೆ| ಕಾಂಗ್ರೆಸ್‌ ಹಿರಿಯ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ| ಉಪಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡದೇ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ 55 ಸಾವಿರ ಮತಗಳನ್ನು ಪಡೆದಿದ್ದಾರೆ| ಒಂದೊಮ್ಮೆ ಬಿಜೆಪಿಯಂತೆ ಕಾಂಗ್ರೆಸ್‌ ಹಣ ಖರ್ಚು ಮಾಡಿದ್ದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಿದ್ದರು| 

Congress Leader Nara Suryanarayana Reddy talks Over B Sriramulu
Author
Bengaluru, First Published Dec 16, 2019, 8:41 AM IST

ಹೊಸಪೇಟೆ(ಡಿ.16): ಮುಂಬರುವ 2023ರಲ್ಲಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಲಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಡಿ. 5ರ ಉಪಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡದೇ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ 55 ಸಾವಿರ ಮತಗಳನ್ನು ಪಡೆದಿದ್ದಾರೆ. ಒಂದೊಮ್ಮೆ ಬಿಜೆಪಿಯಂತೆ ಕಾಂಗ್ರೆಸ್‌ ಹಣ ಖರ್ಚು ಮಾಡಿದ್ದರೆ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಿದ್ದರು. ಹೀಗಾಗಿ, ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರೆ ಅಲೆಯಿದೆ. ಈ ಕ್ಷೇತ್ರದಲ್ಲಿ ಮುಂದಿನ 2023ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲವು ನೂರಕ್ಕೆ ನೂರಷ್ಟು ಖಚಿತವಾಗಿದ್ದು, ಕಾಂಗ್ರೆಸ್‌ ಬಾವುಟ ಹಾರಲಿದೆ ಎಂದರು.

ನಾನು ಎಂಎಲ್‌ಎಗಳನ್ನು ತಯಾರಿಸುವ ಫ್ಯಾಕ್ಟರಿ ಇದ್ದಂತೆ. ಒಂದೇ ಕ್ಷೇತ್ರಕ್ಕೆ ಸಿಮೀತವಾಗುವುದಿಲ್ಲ. ಒಂದು ವೇಳೆ ಪಕ್ಷ ನಿರ್ಣಯ ಮಾಡಿದರೇ, ನಿಲ್ಲುತ್ತೇನೆ ಎಂದು ಹೇಳಿದರು.ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದೆ. ಹಾಗಾಗಿ, ನನ್ನ ಪ್ಯಾಂಟ್‌ ಲೂಸ್‌ ಆಗಿದೆ ಎನ್ನುತ್ತಿದ್ದಂತೆ ಕಾರ್ಯಕರ್ತರು ಗೊಲ್ಲನೆ ನಕ್ಕರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯ, ಗಂಡೂರಾವ್‌ ಭಾಷಣ ಹೊಡೆದು ಹೋದರು. ಆದರೂ ಮತಗಳ ಗಳಿಕೆಯಲ್ಲಿ ಹೊಡೆತ ಬಿತ್ತು. 11 ಸುತ್ತಿನ ಎಣಿಕೆಯಲ್ಲಿ ಆನಂದ ಸಿಂಗ್‌ 4,500 ಮತಗಳಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ, 12 ಸುತ್ತಿನ ಎಣಿಕೆಯಿಂದ ಮತಗಳ ಅಂತರ ಅಧಿಕವಾಯಿತು. ಒಳಗಡೆ ಏನಾದರೂ ಗೋಲ್‌ಮಾಲ್‌ ನಡೆದಿಯಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಬಿಜೆಪಿ ಹಣದಿಂದ ಗೆದ್ದಿದೆ. ಕಾಂಗ್ರೆಸ್‌ ಒಂದು ರೂಪಾಯಿನೂ ಹಂಚದೇ 55 ಸಾವಿರ ಮತಗಳನ್ನು ಪಡೆದುಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 50 ಸಾವಿರ ಮತಗಳಿಂದ ಗೆಲ್ಲಲಿದೆ. ಹೊಸಪೇಟೆಯಲ್ಲಿ ಕಾಂಗ್ರೆಸ್‌ ಚೆನ್ನಾಗಿ ಇದೆ ಎಂದರು.

ಶಾಸಕ ಜೆ.ಎನ್‌. ಗಣೇಶ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌.ಎನ್‌.ಎಫ್‌. ಇಮಾಮ ನಿಯಾಜಿ, ವಿ. ಸೋಮಣ್ಣ, ಗುಜ್ಜಲ ರಘು, ಗುಜ್ಜಲ ನಾಗರಾಜ, ಭಾಗ್ಯಲಕ್ಷ್ಮೀ ಭರಾಡೆ, ತಾರಿಹಳ್ಳಿ ವೆಂಕಟೇಶ, ನಿಂಬಗಲ್‌ ರಾಮಕೃಷ್ಣ ಇನ್ನಿತರರಿದ್ದರು.

ಕಾರ್ಯಕರ್ತನ ಆಕ್ರೋಶ

ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ಮುಖಂಡರು, ತಳ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸಿದ ಪರಿಣಾಮವಾಗಿ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ. ಹೀಗಾದರೆ, ನಾವು ಬಿಜೆಪಿ ಸೇರುತ್ತೇವೆ ಎಂದು ಕಾರ್ಯಕರ್ತ ಸತ್ಯನಾರಾಯಣಪ್ಪ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ನಡುವೆ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವೊಬ್ಬ ಮುಖಂಡರು ವಾರ್ಡ್‌ನೊಳಗೆ ಬಂದಿಲ್ಲ. ಪಕ್ಷ ಬೆಳೆಯಲು ಹೇಗೆ ಸಾಧ್ಯ. ಸಭೆಯೊಳಗೆ ಕಾರ್ಯಕರ್ತರಿಗೆ ಮಾತನಾಡುವುದಕ್ಕೆ ಅವಕಾಶ ನೀಡಬೇಕು. ಕಾರ್ಯಕರ್ತ ಕಷ್ಟ-ಸುಖಗಳನ್ನು ಆಲಿಸಬೇಕು. ಕೇವಲ ಮುಖಂಡರು ಮಾತನಾಡಿಸಿದರೇ ಹೇಗೆ? ನಾರಾ ಸೂರ್ಯನಾರಾಯಣ ರೆಡ್ಡಿಯವರು ಇಲ್ಲಿಯೇ ಮನೆ ಮಾಡಲಿ. ಜೀವು ಕೊಟ್ಟು ಅವರನ್ನು ಗೆಲ್ಲಿಸಲಾಗುವುದು ಎಂದರು.

ಶ್ರೀರಾಮುಲು ಕಾಂಗ್ರೆಸ್‌ಗೆ ಬಂದರ ಸ್ವಾಗತ

ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದ ಮೇಲೆ ಅಸಮಾಧಾನಗೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು ಒಂದೊಮ್ಮೆ ಕಾಂಗ್ರೆಸ್‌ ಬಂದರೆ ಅವರನ್ನು ಸ್ವಾಗತ ಮಾಡುವುದಾಗಿ ನಾರಾ ಸೂರ್ಯನಾರಾಯಣ ರೆಡ್ಡಿ ತಿಳಿಸಿದರು. ಬಿಜೆಪಿಗೆ ಯಾರೂ ಆಪರೇಷನ್‌ ಮಾಡೋದು ಬೇಡ. ಬಿಜೆಪಿಯವರು ಸ್ವತಃ ತಾವೇ ಅಪರೇಷನ್‌ ಮಾಡಿಕೊಳ್ಳುತ್ತಾರೆ. ಒಟ್ಟಾರೆ ರಾಜ್ಯದಲ್ಲಿ ಬಿಜೆಪಿಯದು ಸುಭದ್ರ ಸರ್ಕಾರವಲ್ಲ. ಸಚಿವ ಸಂಪುಟ ರಚನೆ ನಂತರ ಏನೇನು ಆಗುವುದು ಕಾದು ನೋಡಬೇಕು ಎಂದರು.
 

Follow Us:
Download App:
  • android
  • ios