Asianet Suvarna News Asianet Suvarna News

ಮೇಕೆದಾಟು ಸರ್ಕಾರದ ನಿಲುವು, ಬಿಜೆಪಿ ನಿಲುವು ಬೇರೆಯೇ ಆಗಿದೆ: ಎಚ್‌.ಕೆ.ಪಾಟೀಲ

* ಪ್ರಶಸ್ತಿ ಹೆಸರು ಬದಲಾವಣೆ ಸರಿಯಲ್ಲ
* ರಾಜ್ಯದ ಜನತೆಯನ್ನು ಗೊಂದಲಕ್ಕೀಡು ಮಾಡುತ್ತಿರುವ ಬಿಜೆಪಿ ಸರ್ಕಾರ 
* ಸರ್ಕಾರ ಕೂಡಲೇ ಅಟಾಟೋಪ ನಿಲ್ಲಿಸಿ ಜನತೆಯ ನೆರವಿಗೆ ಧಾವಿಸಬೇಕು
 

Congress Leader HK Patil Slams BJP Government grg
Author
Bengaluru, First Published Aug 11, 2021, 1:40 PM IST
  • Facebook
  • Twitter
  • Whatsapp

ಗದಗ(ಆ.11):  ಮೇಕೆದಾಟು ವಿಷಯದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಮಿಳುನಾಡು ಹೋರಾಟ ಬೆಂಬಲಿಸಿ ಟ್ವೀಟ್‌ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆ ಪರವಾಗಿ ಮಾತನಾಡುತ್ತಿದ್ದಾರೆ ಇದರಿಂದ ರಾಜ್ಯ ಸರ್ಕಾರದ ಮತ್ತು ಬಿಜೆಪಿ ಪಕ್ಷದ ನಿಲುವುಗಳು ಪ್ರತ್ಯೇಕವಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕುರಿತು ಕೂಡಲೇ ಇಬ್ಬರೂ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದ್ದಾರೆ. 

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನೀರಾವರಿ ಯೋಜನೆಯಲ್ಲಿ ಮಹತ್ವದ್ದಾಗಿರುವ ಮೇಕೆದಾಟು ವಿಷಯದಲ್ಲಿ ತಮ್ಮ ತಮ್ಮ ಪ್ರತ್ಯೇಕ ನಿಲುವುಗಳನ್ನು ವ್ಯಕ್ತಪಡಿಸುವ ಮೂಲಕ ರಾಜ್ಯದ ಜನತೆಯನ್ನು ಗೊಂದಲಕ್ಕೀಡು ಮಾಡಿ, ಮೋಸಗೊಳಿಸುವ ತಂತ್ರಗಾರಿಕೆಯನ್ನು ಬಿಜೆಪಿ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ. ಇದನ್ನು ತಕ್ಷಣವೇ ಕೈ ಬಿಡಬೇಕು. ಸಿ.ಟಿ. ರವಿ ಅವರು ನಮ್ಮ ರಾಜ್ಯದವರಾಗಿ ನಿವೃತ್ತ ಐಪಿಎಸ್‌ ಅಧಿಕಾರಿ ಹೋರಾಟಕ್ಕೆ ಬೆಂಬಲಿಸಿ ಟ್ವೀಟ್‌ ಮಾಡಿರುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊರೋನಾದ ವಿಷಯದಲ್ಲಿಯೂ ಅಷ್ಟೇ, ಆಗಷ್ಟ15ರ ನಂತರ ಬೆಂಗಳೂರಿನಲ್ಲಿ ಟಫ್‌ ರೂಲ್ಸ್‌ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್‌. ಅಶೋಕ ಹೇಳುತ್ತಿದ್ದಾರೆ, ಇನ್ನೊಂದೆಡೆ ಆರೋಗ್ಯ ಸಚಿವರು Óದ್ಯ್ಯ ಲಾಕ್‌ಡೌನ್‌ ಬಗ್ಗೆ ಯಾವುದೇ ಚಿಂತನೆ ಇಲ್ಲ ಎನ್ನುತ್ತಾರೆ. ಇದೆಲ್ಲ ರಾಜ್ಯದ ಜನತೆಗೆ ಮತ್ತಷ್ಟುಗೊಂದಲ, ಆತಂಕ ಸೃಷ್ಠಿಸುವ ಕೆಲಸವಾಗಿದೆ ಎಂದು ವಿಷಾಧಿಸಿದರು.

ಸಿಎಂ ಬೊಮ್ಮಾಯಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಕಳಸಾ ಬಂಡೂರಿ ಹೋರಾಟಗಾರರು

ಕೊರೋನಾ ಹತೋಟಿಗೆ ಕ್ರಮ ಕೈಗೊಳ್ಳಿ:

ಕಂದಾಯ ಸಚಿವರೇ ಹೇಳುವಂತೆ ಬೆಂಗಳೂರು ಸೇರಿದಂತೆ ಹಲವೆಡೆ ಕೊರೋನಾ ಸಂಕಷ್ಟವಿದೆ ಎನ್ನುತ್ತಾರೆ, ಟಫ್‌ ರೂಲ್ಸ್‌ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ ಕೆಲ ಸಚಿವ, ಶಾಸಕರು ಮಂತ್ರಿ ಸ್ಥಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಗಡುವು ಕೊಡುತ್ತಾರೆ. ಇನ್ನು ನಾಲ್ಕೈದು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸುತ್ತಾರೆ. ಇದನ್ನೆಲ್ಲಾ ಚರ್ಚಿಸಲು ಸಿಎಂ ದೆಹಲಿಗೆ ದೌಡಾಯಿಸುತ್ತಾರೆ. ಸರ್ಕಾರ ಕೂಡಲೇ ಈ ಎಲ್ಲ ಅಟಾಟೋಪಗಳನ್ನು ನಿಲ್ಲಿಸಿ ಜನತೆಯ ನೆರವಿಗೆ ಧಾವಿಸಬೇಕು, ಕೊರೋನಾ ಹತೋಟಿಗೆ ತರುವತ್ತ ಗಮನ ನೀಡಬೇಕು ಎಂದರು.

ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಸಾರ್ವಜನಿಕರ ಜೀವನ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವವರು ಮಾತಿನ ಮೇಲೆ ಹಿಡಿತವಿರಬೇಕು. ಐಟಿ ರೇಡ್‌ಗಳು ರಾಜಕೀಯ ಪ್ರೇರಿತವಾಗಿ ನಡೆಯುತ್ತಿವೆ ಎನ್ನುವುದು ಹಲವಾರು ಚುನಾವಣೆಗಳಲ್ಲಿ ನಡೆದ ರೇಡ್‌ಗಳೇ ಸಾಕ್ಷಿಯಾಗಿವೆ, ಇದರಿಂದಾಗಿ ಕೇಂದ್ರ ಸರ್ಕಾರದ ಮೇಲಿನ ವಿಶ್ವಾರ್ಹತೆ ಕಡಿಮೆಯಾಗಿದೆ.

ಪ್ರಶಸ್ತಿ ಹೆಸರು ಬದಲಾವಣೆ ಸರಿಯಲ್ಲ:

ರಾಜೀವ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಹೆಸರು ಬದಲಾಯಿಸಿರುವುದು ಪ್ರಧಾನ ಮಂತ್ರಿಗಳ ಹಂತದವರು ತೀರಾ ಕೆಳ ಮಟ್ಟಕ್ಕೆ ಇಳಿದು ಮಾಡುತ್ತಿರುವ ಸಣ್ಣ ರಾಜಕೀಯವಾಗುತ್ತದೆ. ನೀವು ಅದಕ್ಕಿಂತಲೂ ದೊಡ್ಡ ಪ್ರಶಸ್ತಿಯನ್ನು ನೀಡಿ, ಯಾರು ಬೇಡಾ ಅಂದ್ರು... ಆದರೆ, ಇದ್ದ ಪ್ರಶಸ್ತಿ ಹೆಸರು ಬದಲಿಸಿದ್ದು ಸರಿಯಲ್ಲ ಎಂದರು.

ನುಣಿಚಿಕೊಳ್ಳುವ ಕೆಲಸ:

ಒಬಿಸಿ ಮೀಸಲಾತಿ ಅಧಿಕಾರ ರಾಜ್ಯಗಳಿಗೆ ನೀಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸವಾಗಿದೆ, ಬೇರೆ ಬೇರೆ ಹಲವಾರು ಪ್ರಮುಖ ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಕಿತ್ತುಕೊಂಡು ತಮ್ಮ ಬಳಿ ಇಟ್ಟುಕೊಳ್ಳುವುದು, ಈ ರೀತಿಯ ಜಾತಿ ಮತ್ತು ಕೋಮು ಆಧಾರದಲ್ಲಿ ಆಗಬೇಕಾಗಿರುವ ಹೊಣೆಯನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿರುವುದು ವಿಚಿತ್ರವಾದ ಬೆಳವಣಿಗೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಶಹರ ಕಾಂಗ್ರೆಸ್‌ ಅಧ್ಯಕ್ಷ ಗುರಣ್ಣ ಬಳಗಾನೂರ, ಪ್ರಭು ಬುರಬುರೆ, ತಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉಮರ್‌ಫಾರೂಕ್‌ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು.
 

Follow Us:
Download App:
  • android
  • ios