Asianet Suvarna News Asianet Suvarna News

ಸಿಎಂ ಬೊಮ್ಮಾಯಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಕಳಸಾ ಬಂಡೂರಿ ಹೋರಾಟಗಾರರು

* ಕೃಷಿ ಸಾಲ ಮನ್ನಾ ಮಾಡದಿದ್ರೆ ಉಗ್ರ ಹೋರಾಟ
*  ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ನೂರಾರು ರೈತರು
* ರೈತರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುವ ಪರಿಸ್ಥಿತಿ 
 

Kalasa Banduri Fighters Talks Over CM Basavaraj Bommai grg
Author
Bengaluru, First Published Aug 2, 2021, 3:01 PM IST

ನರಗುಂದ(ಆ.02):  ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಕೈಗೊಳ್ಳುವ ಮೂಲಕ ರೈತರು ಮಾಡಿರುವ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.

ಅವರು ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2019ರಿಂದ 2021ರ ವರಗೆ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ನದಿ ಹಾಗೂ ಹಳ್ಳಗಳಿಗೆ ನೀರು ಬಂದು ಪ್ರವಾಹಕ್ಕೆ ಲಕ್ಷಾಂತರ ಹೆಕ್ಟೇರ್‌ ಪ್ರದೇಶದ ಬೆಳೆಗಳು ಹಾನಿಯಾಗಿವೆ. ಮತ್ತೊಂದು ಕಡೆ ಅತಿಯಾದ ಮಳೆಯಾಗಿ ತೇವಾಂಶ ಹೆಚ್ಚಾಗಿ ರೈತ ಬಿತ್ತನೆ ಮಾಡಿದ ಬೆಳೆಗಳು ಜಮೀನುಗಳಲ್ಲಿಯೇ ಕೊಳೆಯುವಂತಾಗಿವೆ. ಇನ್ನು ರಾಜ್ಯದ ಕೆಲವು ತಾಲೂಕುಗಳಲ್ಲಿ ಅನಾವೃಷ್ಟಿ ಸಂಭವಿಸಿ ಅಲ್ಪ ಸ್ವಲ್ಪ ಮಳೆಗೆ ಬಿತ್ತನೆ ಮಾಡಿದ ಬೆಳೆಗಳು ತೇವಾಂಶದ ಕೊರತೆಯಿಂದ ನಷ್ಟವಾಗಿ ರೈತ ಸಮುದಾಯ ತೀವ್ರ ತೊಂದರೆಗೆ ಸಿಲುಕುವಂತಾಯಿತು.

'ಮಹದಾಯಿ ಹೋರಾಟಗಾರರೊಬ್ಬ ಸಿಎಂ ಆಗಿದ್ದು ಸಂತಸ ತಂದಿದೆ'

ಈ ಮೂರು ವರ್ಷದ ಅವಧಿಯಲ್ಲಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಆದರಿಂದ ಸರ್ಕಾರ ರೈತರ ಬೆನ್ನಿಗಿದೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ರೈತರ ಕಷ್ಟವನ್ನು ಅರಿತು ಅವರ ನೋವು, ನಲಿವಿಗೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ. ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಎಲ್ಲ ರೀತಿಯ ಕೃಷಿ ಸಾಲವನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ. 15ರೊಳಗೆ ಮನ್ನಾ ಮಾಡಿ ಘೋಷಣೆ ಹೊರಡಿಸಬೇಕು. ಒಂದು ವೇಳೆ ಮುಖ್ಯಮಂತ್ರಿ ಈ ಕುರಿತು ತೀರ್ಮಾನ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಸಾವಿರಾರು ರೈತರ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕಳಸಾ ಬಂಡೂರಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ನಾಗೇಶ ಅಪೋಜಿ, ಗ್ರಾಮೀಣ ಭಾಗದ ಅಧ್ಯಕ್ಷ ವಿಜಯ ಕೋತಿನ, ಡಾ. ಶಿವಯೋಗಿ ಹಿರೇಮಠ, ಅಣ್ಣಪ್ಪಗೌಡ ಪಾಟೀಲ, ರುದ್ರಪ್ಪ ಬಾರಕೇರ, ಮಲ್ಲಪ್ಪ ಅರೇಬೆಂಚಿ ಇದ್ದರು.
 

Follow Us:
Download App:
  • android
  • ios