ಹಲಸಿನ ಹಣ್ಣು ತಿಂದಿದ್ದಕ್ಕೆ ಕಾಂಗ್ರೆಸ್ ಮುಖಂಡನಿಂದ ಫೈರಿಂಗ್..!
ಹಲಸಿನ ಹಣ್ಣಿನ ವಿಚಾರಕ್ಕೆ ಸಂಬಂಧಿಸಿದಂತೆ ಫೈರಿಂಗ್| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಅಡ್ಲೂರು ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಅಂಕೋಲಾ(ಮೇ.04): ಹಲಸಿನ ಹಣ್ಣಿನ ವಿಚಾರಕ್ಕೆ ಸಂಬಂಧಿಸಿದಂತೆ ಬುಲೆಟ್ ಫೈರಿಂಗ್ ಆದ ಘಟನೆ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಅಡ್ಲೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಅಡ್ಲೂರು ಗ್ರಾಮದವರಾದ ಕಾಂಗ್ರೆಸ್ ಪ್ರಮುಖ ಗೋಪಾಲಕೃಷ್ಣ ನಾಯಕ, ಶ್ರೀನಿವಾಸ ಆರ್. ನಾಯಕ, ರಾಘವೇಂದ್ರ ಗಣಪತಿ ನಾಯಕ, ಪ್ರವೀಣ ಭೀಮಪ್ಪ ಕಟ್ಟಿಮನಿ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ:
ಗೋಪಾಲಕೃಷ್ಣ ನಾಯ್ಕ ಅವರ ಬಳಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದವರು, ಪಕ್ಕದ ಮನೆಯ ಮರದಿಂದ ಹಲಸಿನ ಹಣ್ಣು ಕಿತ್ತು ತಿಂದಿದ್ದರು. ಅನುಮತಿ ಪಡೆಯದೆ ಹಲಸಿನ ಹಣ್ಣು ತಿಂದಿದ್ದಕ್ಕೆ ವಸಂತ ಮಾಣಿ ಗೌಡ ಅವರು ಈ ಕಾರ್ಮಿಕರನ್ನು ಪ್ರಶ್ನಿಸಿದ್ದರು. ಈ ವಿಷಯವನ್ನು ಗೋಪಾಲಕೃಷ್ಣ ಅವರಲ್ಲಿ ಕೆಲಸದವರು ಹೇಳಿಕೊಂಡಿದ್ದರು. ಸ್ಥಳಕ್ಕೆ ಬಂದ ಗೋಪಾಲಕೃಷ್ಣ ಹಾಗೂ ವಸಂತ ಮಾಣಿಗೌಡ ನಡುವೆ ಮಾತುಕತೆ ಬೆಳೆದಿತ್ತು. ಈ ವೇಳೆ ಗೋಪಾಲಕೃಷ್ಣ ನಾಯಕ ಅವರು ಹಲ್ಲೆ ನಡೆಸಿದರು. ಅವಾಚ್ಯವಾಗಿ ಬೈದರು. ಜೀವ ಬೆದರಿಕೆಯೊಡ್ಡಿ, ಕಾಲಿಗೆ ಗುರಿ ಮಾಡಿ 2 ರೌಂಡ್ ಬುಲೆಟ್ ಫೈರ್ ನಡೆಸಿದರು ಎಂದು ವಸಂತ ಗೌಡ ಪೊಲೀಸ್ ದೂರು ನೀಡಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ: 24 ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ
ಫೈರ್ ಮಾಡುತ್ತಿದ್ದಂತೆ ತಾವು ಓಡಿಹೋಗಲು ನೋಡಿದಾಗ ಮತ್ತಿಬ್ಬರು ಹಿಡಿದರು. ಆಗ ಗೋಪಾಲಕೃಷ್ಣ ನಾಯಕ ಎಡಗಣ್ಣಿನ ಹತ್ತಿರ ಪಿಸ್ತೂಲಿನ ಹಿಂಬದಿಯಿಂದ ಗುದ್ದಿದರು. ಶ್ರೀನಿವಾಸ ನಾಯಕ ಟಿಪ್ಪರ್ ಅನ್ನು ತಮ್ಮ ಮೇಲೆ ಹತ್ತಿಸುವುದಾಗಿ ಹೇಳಿದರು. ಆಗ ಸ್ಥಳೀಯರು ಬರುತ್ತಿದ್ದಂತೆ ಮತ್ತೆ ಗೋಪಾಲಕೃಷ್ಣ ನಾಯಕ ಪಿಸ್ತೂಲನ್ನು ಗುರಿ ಮಾಡಿ ಹಿಡಿದು ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಿಎಸ್‌ಐ ಎ.ವೈ. ಕಾಂಬಳೆ ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಿಐ ಕೃಷ್ಣಾನಂದ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳ ಮೇಲೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಗೋಪಾಲಕೃಷ್ಣ ನಾಯಕ ಹೊರತುಪಡಿಸಿ ಉಳಿದವರನ್ನು ಬಂಧಿಸಲಾಗಿದೆ. ಗೋಪಾಲಕೃಷ್ಣ ನಾಯಕ ಪತ್ತೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.