ಬೆಂಗಳೂರು (ಡಿ.06): ಈರುಳ್ಳಿ ಬೆಲೆಯು ಚಿಕನ್‌ ದರಕ್ಕಿಂತ ಹೆಚ್ಚಾಗಿದೆ. ಈರುಳ್ಳಿ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ಹೆಚ್ಚು ಈರುಳ್ಳಿ ಖರೀದಿಸಿದರೆ ಆದಾಯ ತೆರಿಗೆ ದಾಳಿ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ವ್ಯಂಗ್ಯವಾಡಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜಿ. ಈರುಳ್ಳಿ ಬೆಲೆ 150 ರು. ತಲುಪಿದೆ. ಇನ್ನೂ ಏರುಗತಿಯಲ್ಲೇ ಸಾಗುತ್ತಿದ್ದು, ಚಿಕನ್‌ ದರಕ್ಕೆ ಸಮಾನವಾಗಿ ಮಾರಾಟವಾಗುತ್ತಿದೆ. ಈರುಳ್ಳಿ ಮಾತ್ರವಲ್ಲದೆ ದಿನಬಳಕೆ ವಸ್ತುಗಳ ಬೆಲೆ ಎಲ್ಲವೂ ಏರಿಕೆಯಾಗುತ್ತಿವೆ. ದೇಶದ ಆರ್ಥಿಕ ಸ್ಥಿತಿ ಕೆಟ್ಟಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಹೀಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮತ್ತೆ ಆಪರೇಷನ್‌ ನಡೆಸಿದ್ರೆ ಜನ ಅಟ್ಟಾಡಿಸಿ ಹೊಡೀತಾರೆ’...

ದೇಶದಲ್ಲಿ ಎಲ್ಲಾ ಕ್ಷೇತ್ರಗಳ ಮೇಲೆ ನೋಟು ಅಮಾನ್ಯೀಕರಣದ ಕೆಟ್ಟಪ್ರಭಾವ ಉಂಟಾಗಿದೆ. ಈರುಳ್ಳಿ ಬೆಲೆ ಏರುತ್ತಿದ್ದರೂ ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೇಶದ ಜನರಿಗೆ ಆದಾಯ ಇಲ್ಲ, ಉದ್ಯೋಗವೂ ಇಲ್ಲ. ದೇಶದ ಪ್ರಧಾನಮಂತ್ರಿ ಈ ಬಗ್ಗೆ ಒಂದು ದಿನವೂ ಮಾತನಾಡಿಲ್ಲ. ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ದೇಶದ ಆರ್ಥಿಕ ಸ್ಥಿತಿ ಕುರಿತು ಮಾತನಾಡಲು ಒದ್ದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಪ್ರಧಾನಿ ಮಧ್ಯಪ್ರವೇಶಿಸಿ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಗಳ ಈ ನಡೆ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ. ತಾನು ಮಾಡಿದ ಮಹಾ ತಪ್ಪು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಜಿಎಸ್‌ಟಿ, ನೋಟ್‌ ಬ್ಯಾನ್‌ ಸೇರಿದಂತೆ ಹಲವು ಕ್ರಮಗಳು ತಪ್ಪಾಗಿವೆ. ಆರ್ಥಿಕ ನೀತಿ ಸರಿಯಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಲೋಕಸಭೆಯಲ್ಲಿ ಆರ್ಥಿಕ ಸ್ಥಿತಿ ಕುರಿತ ಚರ್ಚೆಯಲ್ಲಿ ಪ್ರಧಾನಮಂತ್ರಿ ಸಹ ಭಾಗವಹಿಸಬೇಕು ಎಂದು ಒತ್ತಾಯಿಸಿದರು.