ರಾಜ್ಯದಲ್ಲಿ  ಸಾಕಷ್ಟು ಸದ್ದು ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಹಗರಣದ ಚರ್ಚೆಗಳು ಮುಂದುವರಿದಿದೆ. ಈ ಸಂಬಂಧ ಪರಸ್ಪರ ಆರೋಪ ಪ್ರತ್ಯಾರೋಪಗಳು ಆಗುತ್ತಿದೆ. ಇದೀಗ ಇದರಿಂದ ತಲೆತಗ್ಗಿಸುವಂತಾಗಿದೆ ಎಂದು ಕೈ ನಾಯಕ ಅಸಮಾಧಾನ ಹೊರಹಾಕಿದ್ದಾರೆ. 

ಸರಗೂರು (ಮಾ.23): ಕಳೆದ ಎರಡು ವರ್ಷದಿಂದ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಸಿಡಿ ಹಗರಣ, ಭ್ರಷ್ಟಾಚಾರ ಆಡಳಿತ ನೀಡುವ ಮೂಲಕ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಆರೋಪಿಸಿದರು.

ಪಟ್ಟಣದ ನಾಮಾಧಾರಿಗೌಡ ಸಮುದಾಯ ಭವನದಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯ ಕಾಂಗ್ರೆಸ್‌ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರಗೂರು ನೂತನ ತಾಲೂಕಾಗಿ ನಿರ್ಮಾಣ ಮಾಡಲು ಕಾಂಗ್ರೆಸ್‌ ಪಕ್ಷ ಶ್ರಮಿಸಿದೆ. ಅಲ್ಲದೇ ಈ ತಾಲೂಕಿಗೆ ಸಿದ್ಧರಾಮಯ್ಯ ಸರ್ಕಾರವಿದ್ದಾಗ ಸಾಕಷ್ಟುಅನುಧಾನದ ಜೊತೆಗೆ ಹೆಚ್ಚುವರಿಯಾಗಿ ಸುಮಾರು . 5 ಕೋಟಿ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇವೆ. ಆದರೆ, ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಈ ತಾಲೂಕಿಗೆ ಏನು ಕೊಡುಗೆ ನೀಡಿದೆ ಎಂಬುದನ್ನು ಜನರು ಪ್ರಶ್ನಿಸಬೇಕು ಎಂದರು.

ಸಿದ್ದಾರಾಮಯ್ಯ ಸರ್ಕಾರ ನೀಡಿದ ಅನ್ನಭಾಗ್ಯದಲ್ಲೂ ಬಿಜೆಪಿ ಸರ್ಕಾರ ಕಡಿತಗೊಳಿಸಿದೆ. ಅಲ್ಲದೆ, ಜನ ಸಾಮಾನ್ಯರ ದಿನ ಬಳಕೆಯ ಪೆಟ್ರೋಲ್‌, ಡೀಸಲ್‌, ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಅಡುಗೆ ಎಣ್ಣೆಯ ಬೆಲೆಯನ್ನು ಏರಿಸಿ ಜನರಿಗೆ ಹೊರೆಯನ್ನುಂಟು ಮಾಡಿದೆ ಎಂದು ಅವರು ಕಿಡಿಕಾರಿದರು.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ..

ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ಗಾಗಿ 49 ಅರ್ಜಿಗಳು ಬಂದಿದ್ದರು ಸಹ ನಾವು 12 ಜನರಿಗೆ ಮಾತ್ರ ಅವಕಾಶ ನೀಡಬೇಕಿತ್ತು. ಆದ್ದರಿಂದ ಟಿಕೆಟ್‌ ಸಿಗದೆ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಬಂಡಾಯವಾಗಿ ಸ್ಪರ್ಧಿಸಿದ್ದು ಕೇಳಿ ಬೇಸರವಾಯಿತು. ಆದ್ದರಿಂದ ಉಳಿದ ಎಲ್ಲಾ ಕಾರ್ಯಕರ್ತರು ಯಾವುದೇ ಮನಸ್ಥಾಪವಿಲ್ಲದೇ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಸಹಕರಿಸಿ 12 ಸ್ಥಾನಗಳಲ್ಲೂ ಕಾಂಗ್ರೆಸ್‌ ಗೆÜಲುವಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ 10- 12 ಸ್ಥಾನಗಳನ್ನು ಗೆಲ್ಲುವ ಮೂಲಕ ತಾಲೂಕಿನಲ್ಲಿ ಅಧಿಕಾರ ಹಿಡಿಯಲು ಪಕ್ಷದ ಎಲ್ಲಾ ಕಾರ್ಯಕರ್ತರು ಒಮ್ಮತದಿಂದ ಸಹಕರಿಸಬೇಕು. ಅಲ್ಲದೆ, ಬುಧವಾರದಿಂದ ರೋಡ್‌ ಶೋ ಮಾಡಲು ಪ್ರಾರಂಭಿಸಿ ಪಕ್ಷದ ಗೆಲುವಿಗೆ ಹಗಲು ರಾತ್ರಿ ಶ್ರಮಿಸಬೇಕು ಎಂದು ಕೋರಿದರು.

ಕಾಂಗ್ರೆಸ್‌ ಪಕ್ಷದ ವಾರ್ಡಿನ ಅಭ್ಯರ್ಥಿಗಳಾದ ಶ್ರೀನಿವಾಸ್‌, ರೇಖಾ ಗೋವಿಂದ್‌ರಾಜು, ಭಾರತಿ ತಿಮ್ಮರಾಜು, ವಯಿದಾಬಾನು, ಲಕ್ಷ್ಮೀ ಜಯಕುಮಾರ್‌, ಬಿಲ್ಲಯ್ಯ, ಎಸ್‌.ಎನ್‌. ನಾಗರಾಜು, ಮಹೇಶ್‌, ಶಿವಲಿಂಗಶೆಟ್ಟಿ, ಭಾರತಿ ನಾಗರಾಜು, ಚಲುವಕೃಷ್ಣ, ಎಸ್‌.ಪಿ. ಯೋಗೀಶ್‌, ಜಿಪಂ ಮಾಜಿ ಸದಸ್ಯ ಕೆ. ಚಿಕ್ಕವೀರನಾಯಕ, ಪಪಂ ಮಾಜಿ ಅಧ್ಯಕ್ಷೆ ಜ್ಯೋತಿ ಯೋಗೀಶ್‌, ಕಾಂಗ್ರೆಸ್‌ ಎಚ್‌.ಡಿ. ಕೋಟೆ ತಾಲೂಕು ಅಧ್ಯಕ್ಷ ಏಜಾಷ್‌ ಪಾಷ, ಸರಗೂರು ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ ಮೊದಲಾದವರು ಇದ್ದರು.