'ಬಿಜೆಪಿಯ ಅಂತ್ಯಸಂಸ್ಕಾರ ಮಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ'
* ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಹರಿಪ್ರಸಾದ ವಾಗ್ದಾಳಿ
* ಸ್ಮಶಾನದಲ್ಲೂ ತಮ್ಮ ಫೋಟೊ ಹಾಕಿಕೊಂಡು ಸಂಭ್ರಮಿಸುವ ವಿಕೃತ ಭಾವನೆ ಬಿಜೆಪಿಗರದ್ದು
* ಹೆಣದ ಮೇಲೂ ಹಣ ಗಳಿಸಿದ ಬಿಜೆಪಿ ಸರ್ಕಾರ
ಯಲ್ಲಾಪುರ(ಜು.18): ಜನರ ಹೆಣದ ಮೇಲೆಯೂ ಹಣ ಗಳಿಸುವ ದಂಧೆ ಮಾಡಿಕೊಂಡ ಬಿಜೆಪಿಯ ಅಂತ್ಯಸಂಸ್ಕಾರವನ್ನು ಮಾಡದ ಹೊರತು ದೇಶಕ್ಕೆ ಉಳಿಗಾಲವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಅಡಕೆ ಭವನದಲ್ಲಿ ಶನಿವಾರ ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಲಸಿಕೆಯನ್ನು ದೇಶದಲ್ಲಿಯೇ ಉತ್ಪಾದಿಸುವ ಮೂಲಕ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಮುಂದಿಟ್ಟ ಪ್ರಧಾನಿ, ನಂತರ ರಾಜ್ಯಗಳಿಗೆ ಲಸಿಕೆ ಉತ್ಪಾದನೆಯ ಹೊರೆ ಹೊರಿಸಿ ಪರಮಾತ್ಮನಿರ್ಭರ ಎಂಬಂತೆ ಮಾಡಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದ, ಆರೋಗ್ಯಯುತ ಬದುಕಿಗೆ ಅಗತ್ಯ ವ್ಯವಸ್ಥೆ ಕಲ್ಪಿಸದ ದಪ್ಪ ಚರ್ಮದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದ್ದು ಪ್ರಯೋಜನ ಏನೆಂದು ಪ್ರಶ್ನಿಸಿದರು.
ಅಗತ್ಯವಿದ್ದಲ್ಲಿ ಆಮ್ಲಜನಕ, ವೆಂಟಿಲೇಟರ್, ಆ್ಯಂಬುಲೆನ್ಸ್ ಇತ್ಯಾದಿ ಪೂರೈಕೆ ಮೂಲಕ ಕಾಂಗ್ರೆಸ್ ಜನರ ಕಷ್ಟಕ್ಕೆ ಸ್ಪಂದಿಸಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆರಳಿ ಕೊರೋನಾದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳುವ ಕಾರ್ಯವನ್ನೂ ಪಕ್ಷ ಮಾಡುತ್ತಿದೆ ಎಂದರು.
ಕಾಂಗ್ರೆಸ್ಸಿನಿಂದ ಜನರ ಕಣ್ಣೀರು ಒರೆಸುವ ಕಾರ್ಯ: ಬಿ.ಕೆ. ಹರಿಪ್ರಸಾದ
ಯುವ ಮುಖಂಡ ಪ್ರಶಾಂತ ದೇಶಪಾಂಡೆ ಮಾತನಾಡಿ, ಕೊರೋನಾದರಿಂದ ಸತ್ತವರ ಅಂತ್ಯಕ್ರಿಯೆಗೆ ಸ್ಮಶಾನ ಉದ್ಘಾಟಿಸಿದ್ದೇ ಬಿಜೆಪಿ ಸರ್ಕಾರದ ಸಾಧನೆ. ಸ್ಮಶಾನದಲ್ಲೂ ತಮ್ಮ ಫೋಟೊ ಹಾಕಿಕೊಂಡು ಸಂಭ್ರಮಿಸುವ ವಿಕೃತ ಭಾವನೆ ಬಿಜೆಪಿಗರದ್ದು ಎಂದು ವ್ಯಂಗ್ಯವಾಡಿದರು.
ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಉಸ್ತುವಾರಿಗಳಾದ ವಿ.ಎಸ್. ಆರಾಧ್ಯ, ಶ್ರೀನಿವಾಸ ಹಳ್ಳಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಅಬ್ಬಾಸ್ ಥೋನ್ಸೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವ್ಕರ, ಎ. ರವೀಂದ್ರನಾಥ ನಾಯ್ಕ, ಡಿ.ಎನ್. ಗಾಂವ್ಕಾರ, ಪೂಜಾ ನೇತ್ರೇಕರ, ಬಸವರಾಜ ದೊಡ್ಮನಿ, ಕೈಸರ್ ಸೈಯ್ಯದ್ ಅಲಿ, ಮುಜೀದ್, ತಾಲೂಕು ವಕ್ತಾರ ರವಿ ನಾಯ್ಕ, ಪ್ರಶಾಂತ ಸಭಾಹಿತ, ಸರಸ್ವತಿ ಗುನಗಾ ಇದ್ದರು.