* ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ* ಬಿಜೆಪಿ ಆಡಳಿತದಲ್ಲಿರುವ ರಾಜ್ಯಕ್ಕೆ ಹೆಚ್ಚಿನ ಲಸಿಕೆ* ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

ಹೊನ್ನಾವರ(ಜು.15): ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ ಆಗಿದ್ದು, ಕೇಂದ್ರ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ ಎಂದು ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಬಿ.ಕೆ. ಹರಿಪ್ರಸಾದ ಆರೋಪಿಸಿದ್ದಾರೆ. 

ತಾಲೂಕಿನ ಮಂಕಿಯ ಕೊಕ್ಕೇಶ್ವರ ದೇವಸ್ಥಾನದಲ್ಲಿ ಭಾನುವಾರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಡೆದ ಸಹಾಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಅಚ್ಛೇದಿನ್‌ ಪಾರ್ಟಿಯಲ್ಲ. ಹುಚ್ಚರ ಪಾರ್ಟಿ ಎಂದು ವ್ಯಂಗ್ಯವಾಡಿದ ಅವರು, ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಈ ವರೆಗೆ ಕೇವಲ 24 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡುವ ಮೂಲಕ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡುತ್ತಿದೆ. ಆದರೆ, ಬಿಜೆಪಿಯೇತರ ಆಡಳಿತವಿರುದ ರಾಜ್ಯಗಳಿಗೆ ಲಸಿಕೆ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಕಿಂಚಿತ್ತೂ ಬಡವರ ಕಾಳಜಿಯಿಲ್ಲ: ಬಿ.ಕೆ. ಹರಿಪ್ರಸಾದ್‌

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್‌. ಸುಬ್ರಹ್ಮಣ್ಯ, ಮಾಜಿ ಸಚಿವ ಆರ್‌.ಎನ್‌. ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ, ಜಿಪಂ ಮಾಜಿ ಉಪಾಧ್ಯಕ್ಷೆ ವನೀತಾ ನಾಯ್ಕ, ಮಂಕಿ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಗಜಾನನ ಡಿ.ನಾಯ್ಕ, ಭಟ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌ ಶೇಕ್‌ ಸೇರಿದಂತೆ ಇತರರು ಇದ್ದರು.

ಬಳಿಕ ಕೊರೋನಾದಿಂದ ಗುಣಮುಖರಾದ ಸ್ಥಳೀಯರ ಮನೆಗಳಿಗೆ ಅವರು ಭೇಟಿ ನೀಡಿದರು. ಕೊರೋನಾ ದಿಂದ ಮೃತಪಟ್ಟಗಜಾನನ ಜನಾರ್ದನ ಆಚಾರಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಸಹಾಯ ನೀಡಿದರು.