ಚಿತ್ರದುರ್ಗ [ಆ.23]: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಂದೋರಿಗೆ ಸಚಿವ ಸ್ಥಾನ ಕೊಡಲೇಬೇಕು. ಯಾವುದೇ ಕಾರಣದಿಂದ ಬಿಜೆಪಿ ಅವರಿಗೆ ಅನ್ಯಾಯ ಮಾಡುವುದಿಲ್ಲ. ನಮ್ಮ ಪಕ್ಷ ನ್ಯಾಯಯುತವಾಗಿ ಏನು ಮಾತು ಕೊಟ್ಟಿದೆಯೋ ಅದರಂತೆ ನಡೆದುಕೊಳ್ಳುತ್ತೆವೆ ಎಂದು ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಬಂದ ಶಾಸಕರಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ಸಹಾಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರಿಗೆ ಮಂತ್ರಿ ಸ್ಥಾನ ಕೊಡಲೇಬೇಕು. ಯಾವುದೇ ಕಾರಣದಿಂದ ತಪ್ಪಿಸುವಂತಿಲ್ಲ ಎಂದರು. ಶಾಸಕರಾದವರು ಪಕ್ಷ ಅಧಿಕಾರಕ್ಕೆ ಬಂದಾಗ ಮಂತ್ರಿ ಸ್ಥಾನ ಕೇಳುವುದು ಸಹಜ. ಕೆಲವು ಸಲ ನಾವು ಇಚ್ಛೆ ಪಟ್ಟದ್ದನ್ನೆಲ್ಲ ಪಡೆಯೋದಕ್ಕೆ ಆಗಲ್ಲ. ನಾವ್ಯಾರೂ ಬಂಡಾಯವೆದ್ದಿಲ್ಲ. ಭಿನ್ನಮತ ಎಂಬ ಪ್ರಶ್ನೆ ಉದ್ಭವಿಸದು ಎಂದು ಹೇಳಿದರು.

ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ: ನಿಮ್ ಸಚಿವರ ರೂಮ್ ಸಂಖ್ಯೆ ತಿಳ್ಕೊಳ್ಳಿ

ಮಂತ್ರಿ ಸ್ಥಾನ ಪಡೆಯಲು ಇನ್ನೂ ಸಾಕಷ್ಟುಅವಕಾಶ, ಹತ್ತಾರು ದಾರಿಗಳಿವೆ. ಮುಂದಿನಗಳಲ್ಲಿ ಅವಕಾಶ ಸಿಗುವ ಆಶಾಭಾವನೆಯಿದೆ. ಮಂತ್ರಿ ಸ್ಥಾನ ಸಿಕ್ಕ ತಕ್ಷಣ ದೊಡ್ಡವರು ಆಗ್ತಾರೆ ಅಂತ ಅಲ್ಲ. ಅಧಿಕಾರದ ಮುಖಾಂತರ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಆಸೆಯಿತ್ತು. ಸುಮಾರು 15-20 ವರ್ಷ ನಮ್ಮ ಜಿಲ್ಲೆಯಲ್ಲಿ ಯಾರೂ ಜಿಲ್ಲಾ ಮಂತ್ರಿಗಳಾಗಿಲ್ಲ. ಬರೀ ಹೊರಗಿನವರೇ ಬಂದು ಆಳ್ವಿಕೆ ನಡೆಸಿದ್ದಾರೆ ಎಂದರು.