Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಪರಮೇಶ್ವರ್

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ವಿತೀಯ ಸಾಧನೆ ಮಾಡಲಿದ್ದು, ಅಚ್ಚರಿಯ ಫಲಿತಾಂಶದೊಂದಿಗೆ ದೆಹಲಿಯ ಗದ್ದುಗೆಯನ್ನು ಏರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Congress government's guarantees benefit the poor: Dr. G. Parameshwar snr
Author
First Published Apr 22, 2024, 11:44 AM IST

 ತುರುವೇಕೆರೆ :  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ವಿತೀಯ ಸಾಧನೆ ಮಾಡಲಿದ್ದು, ಅಚ್ಚರಿಯ ಫಲಿತಾಂಶದೊಂದಿಗೆ ದೆಹಲಿಯ ಗದ್ದುಗೆಯನ್ನು ಏರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಡೆದಿರುವ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ಸರ್ವೇಗಳಲ್ಲಿ ಹೇಳಲಾಗಿದೆ. ಕಾಂಗ್ರೆಸ್ ನೀಡಿರುವ ಹಲವಾರು ಗ್ಯಾರಂಟಿಗಳು ಮತದಾರರ ಮನಸ್ಸನ್ನು ಗೆದ್ದಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ದೇಶದ ಬಡ ಜನರ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಠಿಯಿಂದ ಹಲವಾರು ಭರವಸೆಗಳನ್ನು ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನ ಅಲೆ ಇರುವುದರಿಂದ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರದ್ದು ಬರೀ ಸುಳ್ಳಿನ ಕಂತೆ. ಇವರ ಆಡಳಿತದಲ್ಲಿ ಬಡವರು ಬದುಕುವುದು ಕಷ್ಟವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗುವುದಂತೂ ಗ್ಯಾರಂಟಿ. ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ದೇಶದ ಬಡ ಜನರ ನೋವಿಗೆ ದನಿಯಾಗಲಿದ್ದಾರೆ. ಚುನಾವಣೆ ನಂತರ ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೋ, ಬಿಡುತ್ತದೋ ಎಂಬುದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ರಾಜ್ಯದಲ್ಲಿ ಹೆಚ್ಚು ಸ್ಥಾನ ಪಡೆಯುವುದು ಎಷ್ಟು ಖಚಿತವೋ ಹಾಗೆಯೇ ದೇಶದಲ್ಲೂ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯುವುದೂ ಸಹ ಖಚಿತ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರವರು ನಮ್ಮೂರಿನವರು, ಈ ಜಿಲ್ಲೆಯವರು, ನಮ್ಮ ಮಣ್ಣಿನ ಮಗ. ಆದರೆ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಬೆಂಗಳೂರಿನವರು. ಅವರು ನಮ್ಮ ಜಿಲ್ಲೆಗೆ ಸಂಬಂಧಿಸದ ವ್ಯಕ್ತಿ. ನಮ್ಮ ಅಭ್ಯರ್ಥಿಯನ್ನು ಯಾರು ಬೇಕಾದರೂ ಭೇಟಿಯಾಗಬಹುದು. ಆದರೆ ವಿ.ಸೋಮಣ್ಣ ನವರನ್ನು ಭೇಟಿಯಾಗಲು ಜನರು ಬೆಂಗಳೂರಿಗೇ ಹೋಗಬೇಕು. ಅದು ಜನರಿಗೆ ಅಸಾಧ್ಯವಾದ ಮಾತು. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಸಂಶಯವೇ ಇಲ್ಲ ಎಂದರು.

ಸಚಿವರಿಗೆ ತಲೆದಂಡ ಇಲ್ಲ:

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸದಿದ್ದಲ್ಲಿ ಅಲ್ಲಿಯ ಸಚಿವರಿಗೆ ಯಾವ ದಂಡವೂ ಇಲ್ಲ. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ತಾವು ಗೆದ್ದ ಕೆಲವೇ ತಿಂಗಳಿನಲ್ಲಿ ಕೇಂದ್ರದಿಂದ 10 ಸಾವಿರ ಕೋಟಿರು. ಅನುದಾನ ತರುತ್ತೇನೆ. ಕಾಶಿ, ವಾರಣಾಶಿ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಸಾಧ್ಯವಾ? ಹೀಗೆ ಹೇಳುತ್ತಿರುವುದು ಸುಳ್ಳು ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ. ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಹೇಳಿದರು.

ಕೇಂದ್ರ ಬಿಜೆಪಿ ನೀರಾವರಿ ಯೋಜನೆ ಅನುಮೂದನೆ ನೀಡಿಲ್ಲ: ಜಿಲ್ಲೆಯಲ್ಲಿ ಎತ್ತಿನಹೊಳೆ, ಮೇಕೆದಾಟು, ಭದ್ರ, ಮಹದಾಯಿ ಯೋಜನೆಗಳಿಗೆ ಅನುಮೋದನೆ ನೀಡದೇ ಕೇಂದ್ರ ಸರ್ಕಾರ ವಂಚಿಸಿದೆ. ಇದರಿಂದಾಗಿ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ತೊಂದರೆಯಾಗಿದೆ. ಅವುಗಳ ಬಗ್ಗೆ ವಿ.ಸೋಮಣ್ಣ ಮಾತನಾಡುವುದಿಲ್ಲ. ಮೋದಿಯವರೂ ಸಹ ರಾಜ್ಯಕ್ಕೆ ಏನೇನು ಅಭಿವೃದ್ಧಿಗಳನ್ನು ನೀಡುತ್ತೇವೆ ಎಂಬ ಭರವಸೆಯನ್ನೂ ಸಹ ನೀಡಿಲ್ಲ. ನಮಗೆ ಓರ್ವ ಕ್ರಿಯಾಶೀಲ ಸಂಸದ ಬೇಕಾಗಿದ್ದಾರೆ. ಹಾಗಾಗಿ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿರುವ ಮುದ್ದಹನುಮೇಗೌಡರನ್ನು ಈ ಜಿಲ್ಲೆಯ ಜನರು ಆಶೀರ್ವದಿಸಲಿದ್ದಾರೆ ಎಂದರು.

ಗ್ಯಾರಂಟಿ ಯೋಜನೆ ನಿಲ್ಲಲ್ಲ:

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕಟಿಬದ್ಧವಾಗಿದೆ. 5 ಗ್ಯಾರಂಟಿಗಳಿಗಾಗಿ 52 ಸಾವಿರ ಕೊಟಿ ರು.ಮೀಸಲಿಡಲಾಗಿದೆ. ಈ ಚುನಾವಣೆ ನಂತರ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಡಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ನಿಲ್ಲುವುದಿಲ್ಲ. ಇನ್ನೂ ನಾಲ್ಕು ವರ್ಷಗಳು ಬಡಜನರ ಪಾಲಿಗೆ ಎಲ್ಲಾ ಜನಪರ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ನ ವಕ್ತಾರರಾದ ಮುರುಳೀಧರ್ ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಬೆಸ್ಕಾಂ ನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ತಾಲೂಕು ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಕೀದೇವಮ್ಮ, ತಾಲೂಕು ಕಾರ್ಯದರ್ಶಿ ವೇಣುಗೋಪಾಲ್, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಕುಮಾರ್, ಎಸ್ ಸಿ ಘಟಕದ ಅಧ್ಯಕ್ಷ ಮಂಜಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Follow Us:
Download App:
  • android
  • ios