ಟಿ. ನರಸೀಪುರ (ನ.09):  ಟಿ. ನರಸೀಪುರ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ಈ ಹಿಂದೆ ಕಾಂಗ್ರೆಸ್‌ ಪಕ್ಷ ಹಾಗು ಬಿಜೆಪಿ ನಡುವೆ ಅಧಿಕಾರಕ್ಕಾಗಿ ಹಣಾಹಣಿ ಏರ್ಪಟ್ಟಿತ್ತಾದರೂ ಈಗ ಕಾಂಗ್ರೆಸ್‌ಗೆ ಬಹುಮತ ಸಾಬೀತು ಪಡಿಸಲು ಅವಶ್ಯಕತೆಗಿಂತ ಹೆಚ್ಚು ಸದಸ್ಯರ ಬೆಂಬಲ ಇರುವುದರಿಂದ ಬಿಜೆಪಿ ಅಭ್ಯರ್ಥಿ ತೆರೆಮರೆಗೆ ಸರಿಯುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್‌.ಕೆ. ಕಿರಣ್‌ ತನ್ನ ಪಕ್ಷದ ನಾಲ್ವರು ಸದಸ್ಯರು, ಜೆಡಿಎಸ್‌ನ ಮೂವರು, ಶಾಸಕ ಅಶ್ವಿನ್‌ ಕುಮಾರ್‌, ಸಂಸದ ವಿ. ಶ್ರೀನಿವಾಸಪ್ರಸಾದ್‌ ಮತ ಸೇರಿದಂತೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಿದ್ದತೆ ನಡೆಸಿದ್ದರಾದರೂ, ಜೆಡಿಎಸ್‌ನ ಮೂವರು ಸದಸ್ಯರು, ಪಕ್ಷೇತರ ಸದಸ್ಯರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಅವರೊಂದಿಗೆ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಕಿರಣ್‌ಗೆ ನಿರಾಸೆ ಮೂಡಿಸಿದೆ.

'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ

ಅಧ್ಯಕ್ಷ ಸ್ಥಾನಕ್ಕೆ 12 ಸದಸ್ಯರ ಬೆಂಬಲ ಬೇಕಿದ್ದು ಕಾಂಗ್ರೆಸ್‌ ಪಕ್ಷದ 10 ಮಂದಿ ಸದಸ್ಯರೊಂದಿಗೆ, ಜೆಡಿಎಸ್‌ನ ಮೂವರು, ಇಬ್ಬರು ಪಕ್ಷೇತರ ಸದಸ್ಯರು ಹಾಗು ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್‌ ಸದಸ್ಯ ಧರ್ಮಸೇನ ಸೇರಿದಂತೆ 17 ಮಂದಿ ಸದಸ್ಯರ ಬೆಂಬಲವಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಆಯ್ಕೆ ಕಗ್ಗಂಟು : ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆಯಾದರೂ ಶನಿವಾರದವರೆಗೂ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಿಲ್ಲದೆ ಇರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿ ಹೆಳವರಹುಂಡಿ ಸೋಮು, ಮದನ್‌ ರಾಜ್, ಟಿ.ಎಂ. ನಂಜುಂಡಸ್ವಾಮಿ ಹಾಗು ಪ್ರೇಮಾ ಮರಯ್ಯ ರೇಸ್‌ನಲ್ಲಿದ್ದಾರೆ.

 ಹೈಕಮಾಂಡ್‌ ಮೀನಮೇಷ--

ಅಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಒಮ್ಮತದ ನಿರ್ಧಾರಕ್ಕೆ ಬರಲು ಕಾಂಗ್ರೆಸ್‌ ಹೈಕಮಾಂಡ್‌ ಮೀನಮೇಷ ಎಣಿಸುತ್ತಿದ್ದು ಧರ್ಮ ಸಂಕಟದಲ್ಲಿದೆ. ನ. 5 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅವರಿಂದಲೂ ಸಾಧ್ಯವಾಗಿಲ್ಲ.

ನಾಲ್ವರು ಅಭ್ಯರ್ಥಿಗಳು ತಾವೇ ಅಧ್ಯಕ್ಷರಾಗಬೇಕು ಎಂದು ಪಟ್ಟು ಹಿಡಿದು ಕುಳಿತಿರುವುದರಿಂದ ಅಭ್ಯರ್ಥಿಯ ಆಯ್ಕೆ ಕಷ್ಟವಾಗಿದೆ. ಪ್ರವಾಸದಲ್ಲಿರುವ ಕಾಂಗ್ರೆಸ್‌ ಪಕ್ಷದ ಸದಸ್ಯರು ಮದನ್‌ ರಾಜ್‌ ಅಥವಾ ಸೋಮು ಅವರ ಆಯ್ಕೆಗೆ ಒಲವು ತೋರಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ. ಮರಯ್ಯ ಕೂಡ ತಮ್ಮ ಪತ್ನಿ ಪ್ರೇಮಾ ಅವರೇ ಅಧ್ಯಕ್ಷ ರಾಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಪಕ್ಷಕ್ಕೂ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಳಿಸಲು ಸಾಧ್ಯವಾಗದಿರುವುದು ಅಚ್ಚರಿಗೆ ಕಾರಣವಾಗಿದೆ. ಅದೃಷ್ಟಯಾರ ಪರವಾಗಿ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.