Asianet Suvarna News Asianet Suvarna News

ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಒಗ್ಗಟ್ಟು ಪ್ರದರ್ಶನ

* ಯಾರ ಪರವೂ ಜೈಕಾರವಿಲ್ಲ
* ಯಾರ ಪರವೂ ಸಿಎಂ ಘೋಷಣೆಯಿಲ್ಲ
* 48 ವಿಧಾನಸಭಾ ಕ್ಷೇತ್ರಗಳ ಸಂಘಟಕರ ಸಭೆಯಲ್ಲಿ ಕೈ ಮುಖಂಡರಿಗೆ ತಾಕೀತು
 

Congress convention Held at Hubballi on July 30th grg
Author
Bengaluru, First Published Jul 31, 2021, 9:43 AM IST
  • Facebook
  • Twitter
  • Whatsapp

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.31): ನಗರದಲ್ಲಿ ಎರಡು ದಿನ ಕಾಲ ನಡೆದ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್‌ ಸಂಘಟಕರ ಸಭೆ ಯಾವುದೇ ಅಪಸ್ವರಗಳಿಲ್ಲದೇ ಯಶಸ್ವಿಯಾಯಿತು. 2023ರ ಚುನಾವಣೆಗೆ ನಾವೆಲ್ಲ ಸನ್ನದ್ಧರಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿತು. ಪರಸ್ಪರ ಭಿನ್ನಾಭಿಪ್ರಾಯ, ಭಿನ್ನಮತಗಳನ್ನೆಲ್ಲ ಬದಿಗಿಟ್ಟು ಕಾಂಗ್ರೆಸ್‌ ಮುಖಂಡರೆಲ್ಲರೂ ಬಿಜೆಪಿಯ ಶಕ್ತಿ ಕೇಂದ್ರ ಹುಬ್ಬಳ್ಳಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು ಈ ಸಭೆಯ ವಿಶೇಷ.

ಹುಬ್ಬಳ್ಳಿಯೆಂದರೆ ಬಿಜೆಪಿ ಶಕ್ತಿ ಕೇಂದ್ರ. ಉತ್ತರ ಕರ್ನಾಟಕದ ಪ್ರಮುಖ ನಗರವಾಗಿರುವ ಇಲ್ಲಿ ಕಾಂಗ್ರೆಸ್‌ ಬೆಳಗಾವಿ ವಿಭಾಗದ ಬರೋಬ್ಬರಿ 10 ಜಿಲ್ಲೆಗಳ 48 ವಿಧಾನಸಭಾ ಕ್ಷೇತ್ರಗಳ ಸಂಘಟಕರು, ಜಿಲ್ಲಾಧ್ಯಕ್ಷರು, ಮಾಜಿ, ಹಾಲಿ ಎಂಎಲ್‌ಎ, ಎಂಪಿ, ಮುಂಚೂಣಿ ಘಟಕಗಳ ಸಭೆಯನ್ನು ಆಯೋಜಿಸಿತ್ತು. 10 ಜಿಲ್ಲೆಗಳದ್ದು ಆಂತರಿಕ ಸಭೆ ನಡೆಸಲಾಯಿತು.

Congress convention Held at Hubballi on July 30th grg

ಕಾಂಗ್ರೆಸ್‌ ಪಕ್ಷವೆಂದರೆ ಭಿನ್ನಮತ, ಭಿನ್ನಾಭಿಪ್ರಾಯ, ಕಾಲೆಳೆಯುವವರ ಪಕ್ಷ ಎನ್ನುವಷ್ಟರ ಮಟ್ಟಿಗೆ ಅಪಸ್ವರ ಕೇಳಿ ಬರುತ್ತಿತ್ತು. ಒಬ್ಬರು ಸಂಘಟಿಸಿದರೆ ಮತ್ತೊಬ್ಬರು ಅದಕ್ಕೆ ಅಪಸ್ವರ ತೆಗೆಯುತ್ತಿದ್ದರು. ಇದರೊಂದಿಗೆ ರಾಜ್ಯ ಮುಖಂಡರಲ್ಲೂ ಸಹ ಅವರು ಮುಂದಿನ ಸಿಎಂ, ಇವರು ಮುಂದಿನ ಸಿಎಂ, ದಲಿತ ಸಿಎಂ ಎಂಬೆಲ್ಲ ಚರ್ಚೆಗಳು ನಡೆಯುತ್ತಿದ್ದವು. ಎಲ್ಲೇ ಕಾರ್ಯಕ್ರಮವಿದ್ದರೂ ಆ ಮುಖಂಡರ ಪರವಾಗಿ ಸಿಎಂ ಅಭ್ಯರ್ಥಿಯೆಂದು ಘೋಷಣೆ ಕೂಗುವ ಪ್ರಸಂಗಗಳು ನಡೆದವು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರನ್ನು ದೆಹಲಿಗೆ ಕರೆಯಿಸಿಕೊಂಡು ತಾಕೀತು ಮಾಡಿದರ ಪರಿಣಾಮವೋ ಏನೋ ಹುಬ್ಬಳ್ಳಿಯಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರು ಯಾರ ಪರವೂ ಘೋಷಣೆ ಕೂಗಲಿಲ್ಲ. ಯಾವುದೇ ಬಹಿರಂಗವಾಗಿ ಅಪಸ್ವರ ಹೇಳಲಿಲ್ಲ.

ಮೋದಿ ಸರ್ಕಾರ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯಲ್ಲಿ ತೊಡಗಿದೆ‌: ಸುರ್ಜೆವಾಲಾ

ಖಡಕ್‌ ವಾರ್ನ್‌:

ಪ್ರತಿ ಜಿಲ್ಲೆಯ ಆಂತರಿಕ ಸಭೆಯಲ್ಲಿ ಅಲ್ಲಿನ ಸಂಘಟನೆ ವಿಷಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕೆಲ ಮುಖಂಡರು ನಿಷ್ಕಿ್ರಯವಾಗಿರುವುದು ಪ್ರಸ್ತಾಪವಾಯಿತು. ನಿಷ್ಕಿ್ರಯವಾದಂತಹ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಜಿಲ್ಲಾಧ್ಯಕ್ಷರನ್ನು ಬದಲಾಯಿಸುವ ಕುರಿತು ಖಡಕ್‌ ವಾರ್ನ್‌ ಮಾಡಿದ್ದು ವಿಶೇಷ.

ಹಾವೇರಿ ಜಿಲ್ಲೆಯ ಹಾನಗಲ್‌ ಉಪಚುನಾವಣೆ ಸಮೀಪಿಸುತ್ತಿದ್ದು, ಅದರ ತಯಾರಿ ಯಾವ ರೀತಿ ಇರಬೇಕು. ಏನೇನು ತಯಾರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸೂಚನೆಗಳನ್ನು ಮುಖಂಡರು ನೀಡಿದರು. ಇದೇ ವೇಳೆ ಹಾನಗಲ್‌ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂಬ ಕೂಗು ಕೂಡ ಕೇಳಿ ಬಂತು. ಈ ವೇಳೆ ಟಿಕೆಟ್‌ ಯಾರಿಗೆ ಸಿಗುತ್ತದೆಯೋ ಬಿಡುತ್ತದೆಯೋ ಮುಂದಿನ ಮಾತು. ಆದರೆ ಸದ್ಯ ಪಕ್ಷ ಸಂಘಟನೆ ಹಾಗೂ ಚುನಾವಣೆ ಗೆಲ್ಲುವುದೊಂದೇ ನಮ್ಮ ಮುಂದಿರುವ ಪ್ರಶ್ನೆ. ಆ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕಷ್ಟೇ ಎಂಬ ಸ್ಪಷ್ಟಸೂಚನೆ ರವಾನೆಯಾಯಿತು. ಇನ್ನುಳಿದಂತೆ 2023ರ ಚುನಾವಣೆಯ ತಯಾರಿ ಕುರಿತಂತೆ ಹೆಚ್ಚೆಚ್ಚು ಚರ್ಚೆಯಾಗಿದ್ದು, ಪಕ್ಷ ಸಂಘಟನೆ ಕುರಿತು ಮುಂದಿನ ರೂಪರೇಷೆ ಬಗ್ಗೆ ಚರ್ಚಿಸಿದ್ದು ವಿಶೇಷ.

ತಲೆಯಾಳುಗಳ ಸಭೆ:

ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಪ ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಎಚ್‌.ಕೆ. ಪಾಟೀಲ್‌, ಆರ್‌.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್‌, ಎ.ಎಂ. ಹಿಂಡಸಗೇರಿ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ವಿಪ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಂಸದ ಐ.ಜಿ. ಸನದಿ, ಶಾಸಕರಾದ ಲಕ್ಷ್ಮೇ ಹೆಬ್ಬಾಳಕರ್‌, ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ವಿಪ ಮಾಜಿ ಸದಸ್ಯರಾದ ನಾಗರಾಜ ಛಬ್ಬಿ, ಸೋಮಣ್ಣ ಬೇವಿನಮರದ, ಮುಖಂಡರಾದ ಪ್ರಕಾಶಗೌಡ ಪಾಟೀಲ, ಶಾಕೀರ ಸನದಿ ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರು, ಎಫ್‌.ಎಚ್‌. ಜಕ್ಕಪ್ಪನವರ, ಸದಾನಂದ ಡಂಗನವರ, ರಜತ್‌ ಉಳ್ಳಾಗಡ್ಡಿಮಠ, ದೀಪಾ ಗೌರಿ, ಸ್ವಾತಿ ಮಳಗಿ, ಮುತ್ತಣ್ಣ ಶಿವಳ್ಳಿ ಸೇರಿದಂತೆ ಹಲವರಿದ್ದರು.
 

Follow Us:
Download App:
  • android
  • ios