ಸಂಸದ ಪ್ರತಾಪ್ ಸಿಂಹ ವಿರುದ್ಧ ಡೀಸಿಗೆ ದೂರು
- ಸಂಸದ ಪ್ರತಾಪ್ ಸಿಂಹ ಅವರು ಕೆಡಿಪಿ ಸಭೆಯಲ್ಲಿ ಕೋಮುಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆಂದು ಆರೋಪ
- ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಮಂಗಳವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ದೂರು
ಮೈಸೂರು (ಸೆ.15): ಸಂಸದ ಪ್ರತಾಪ್ ಸಿಂಹ ಅವರು ಕೆಡಿಪಿ ಸಭೆಯಲ್ಲಿ ಕೋಮುಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಮಂಗಳವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.
ಸೆ.8ರಂದು ನಡೆದ ಕೆಡಿಪಿ ಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮತ್ತು 11 ಶಾಸಕರ ಸಮ್ಮುಖದಲ್ಲೇ ಸಂಸದರು ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಒಡೆದು ಹಾಕಬೇಕೆಂದು ಜಿಲ್ಲಾಧಿಕಾರಿಗೆ ಧಮ್ಕಿ ಹಾಕಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಮಾಡಿತು.
ದೇವಾಲಯ ಧ್ವಂಸ ಹಿಂದಿನ ಕಾರಣ ಹೇಳಿದ ವಕೀಲ ವೇಣುಗೋಪಾಲ್
ಜಿಲ್ಲೆಯಾದ್ಯಂತ ಮಂದಿರ, ಮಸೀದಿ, ಚಚ್‌ರ್ ಅಥವಾ ಪ್ರತಿಮೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣವಾಗಿದ್ದರೆ, 2013ರ ಸುಪ್ರೀಂ ಕೋರ್ಟ್ ಆದೇಶದಂತೆ ಆಯಾ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ತೆರವುಗೊಳಿಸಲು ಕಾಂಗ್ರೆಸ್ ಯಾವತ್ತೂ ತಕರಾರು ಮಾಡಿಲ್ಲ. ಆದರೆ, ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಅಥವಾ ಇರ್ವಿನ್ ರಸ್ತೆಯಲ್ಲಿರುವ ಮಸೀದಿ ಕಾಂಪೌಂಡ್ ಅಥವಾ ಇತರೆ ಸ್ಥಳಗಳಲ್ಲಿರುವ ದೇವಾಲಯದ ಪ್ರಕರಣಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ವ್ಯಾಜ್ಯದಲ್ಲಿವೆ. ಹೀಗಿರುವಾಗ ಸಂಸದರು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಮುದಾಯಗಳ ನಡುವೆ ಕಿಚ್ಚು ಹಚ್ಚಿಸುವ ಹೇಳಿಕೆ ನೀಡುತ್ತಿದ್ದಾರೆಂದು ದೂರಿದರು.