ಬೆಳಗಾವಿ(ಏ.15): ಬಿಜೆಪಿ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮರಳಿ ಪ್ರಚಾರಕ್ಕೆ ಬಂದಿದ್ದಾರೆ ಎಂದು ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಟೀಕಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಕಾಂಗ್ರೆಸ್‌ ನಾಯಕರು ಯಾರೂ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ. ಬಿಜೆಪಿಗೆ ಸೋಲಿನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮತ್ತೆ ಪ್ರಚಾರಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಪರವಾದ ಉತ್ತಮ ವಾತಾವರಣವಿದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

'ಮಂಗಲ ಅಂಗಡಿಗೆ 4 ಲಕ್ಷ ಅಂತರದಿಂದ ಗೆಲುವು'

ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಜನಸಾಮಾನ್ಯರ ಕಷ್ಟವೇನು ಎನ್ನುವುದು ಗೊತ್ತಿಲ್ಲ. ಯಾವುದೇ ಕಚೇರಿಗಳನ್ನು ನೋಡದ ಶೆಟ್ಟರ್‌ ಕೇವಲ ಭಾಷಣ ಮಾಡುವುದನ್ನು ಸಾಧನೆ ಅಂದುಕೊಂಡಿದ್ದಾರೆ. ನಾನು ವಿಧಾನಸಭೆಯಲ್ಲಿ ಒಮ್ಮೆಯೂ ಮಾತನಾಡಿಲ್ಲ ಎಂಬ ಶೆಟ್ಟರ್‌ ಹೇಳುವುದರಲ್ಲಿ ಸತ್ಯಾಂಶವಿದೆ. ಕೇವಲ ಮಾತನಾಡುವುದೇ ಸಾಧನೆಯಾಗಬಾರದು. ಶೆಟ್ಟರ್‌ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಿದರೆ, ಮೂರು ಗ್ಲಾಸ್‌ ನೀರು ಕುಡಿಯುತ್ತಾರೆ. ಯಾವುದೇ ಕಚೇರಿಯನ್ನು ನೋಡಿಲ್ಲ. ಭಾಷಣ ಮಾಡುವುದರಲ್ಲಿ ಪ್ರವೀಣರು. ಭಾಷಣಕ್ಕೂ, ಕೆಲಸಕ್ಕೂ ತುಂಬಾ ವ್ಯತ್ಯಾಸವಿದೆ. ಭಾಷಣಕ್ಕಿಂತ ಹೆಚ್ಚು ಕೆಲಸ ಮಾಡಿರುವ ಬಗ್ಗೆ ನನಗೆ ತೃಪ್ತಿಯಿದೆ ಎಂದರು.