ಮಂಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿ ಹುಲಿವೇಷ ಸ್ಪರ್ಧೆ: ಪಿಲಿ ಪರ್ಬ-ನಲಿಕೆಯ ಹಬ್ಬ!
ಮಂಗಳೂರು ದಸರಾ ಹೆಸರಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಹುಲಿವೇಷ ಫೈಟ್ ಆರಂಭವಾಗಿದೆ. ಕಳೆದ ಆರು ವರ್ಷಗಳಿಂದ 'ಪಿಲಿ ನಲಿಕೆ' ಹೆಸರಲ್ಲಿ ಡಿಕೆಶಿ ಅಪ್ತ, ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಸ್ಪರ್ಧೆ ನಡೆಯುತ್ತಿದೆ. ಆದರೆ ಅದಕ್ಕೂ ಮೊದಲೇ ಬಿಜೆಪಿ ಶಾಸಕರಿಂದ ಸ್ಪರ್ಧೆ ಆಯೋಜನೆಯಾಗಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಅ.2): ಮಂಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿ ಹುಲಿವೇಷ ಸ್ಪರ್ಧೆಯ ಹೊಸ ಹಬ್ಬ ಶುರುವಾಗಿದ್ದು, ಕಾಂಗ್ರೆಸ್ ನಾಯಕನ ಹುಲಿವೇಷ ಸ್ಪರ್ಧೆಗೆ ಬಿಜೆಪಿ ಠಕ್ಕರ್ ಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ 'ಪಿಲಿಪರ್ಬ'ದ ಹೆಸರಲ್ಲಿ ಹುಲಿ ವೇಷದ ಹಬ್ಬಕ್ಕೆ ಇಂದು ಚಾಲನೆ ಸಿಕ್ಕಿದೆ. ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಈ ಹುಲಿವೇಷ ಸ್ಪರ್ಧೆ ಆಯೋಜಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಸುನೀಲ್ ಕುಮಾರ್ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ. ಮಂಗಳೂರು ದಸರಾ ಹೆಸರಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಹುಲಿವೇಷ ಫೈಟ್ ಆರಂಭವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಕಳೆದ ಆರು ವರ್ಷಗಳಿಂದ 'ಪಿಲಿ ನಲಿಕೆ' ಹೆಸರಲ್ಲಿ ಡಿಕೆಶಿ ಅಪ್ತ, ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಸ್ಪರ್ಧೆ ನಡೆಯುತ್ತಿದೆ. ಈ ಬಾರಿಯೂ ಅ.4ರಂದು ಕರಾವಳಿ ಉತ್ಸವ ಮೈದಾನದಲ್ಲಿ ಮಿಥುನ್ ರೈ ನೇತೃತ್ವದಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಆದರೆ ಅದಕ್ಕೂ ಮೊದಲೇ ಬಿಜೆಪಿ ಶಾಸಕರಿಂದ ಸ್ಪರ್ಧೆ ಆಯೋಜಿಸಿ ಕಾಂಗ್ರೆಸ್ ಗೆ ಠಕ್ಕರ್ ಕೊಡಲಾಗಿದೆ. ಬಿಜೆಪಿ ಪಕ್ಷದ ಹುಲಿವೇಷದಲ್ಲಿ ಗೆದ್ದ ಹುಲಿ ವೇಷ ತಂಡಕ್ಕೆ 5 ಲಕ್ಷ, 3 ಲಕ್ಷ ಹಾಗೂ 1.5 ಲಕ್ಷ ಬಹುಮಾನ ಇದ್ದು, ಭಾಗವಹಿಸೋ 13 ತಂಡಗಳಿಗೂ ತಲಾ 50 ಸಾವಿರ ನಗದು ಬಹುಮಾನವಿದೆ. ಸಾವಿರಾರು ಜನ ಪ್ರೇಕ್ಷಕರ ಸಮ್ಮುಖ ಬಿಜೆಪಿ ಶಾಸಕರ ನೇತೃತ್ವದಲ್ಲಿ ಪಿಲಿಪರ್ಬಕ್ಕೆ ಚಾಲನೆ ಸಿಕ್ಕಿದೆ.
ಜಗಮಗಿಸುವ ಲೈಟ್ಗಳ ನಡುವಿನಲ್ಲೇ ಇರೋ ರಿಂಗ್ ಮೇಲೆ ತಾಳಕ್ಕೆ ಲಯಬದ್ಧವಾಗಿ ನಲಿತಾ ಇರೋ ಹುಲಿಗಳು ಪಿಲಿ ಪರ್ಬದ ರಂಗು ಹೆಚ್ಚಿಸಿದೆ. ಪಿಲಿ ಪರ್ಬ ಅಂದ್ರೆ ಹುಲಿಗಳ ಹಬ್ಬ. ಈ ಹಬ್ಬ ಇಂದು ಮಂಗಳೂರಿನ ಜನರಿಗೆ ಮೈ ರೋಮಾಂಚನಗೊಳಿಸುವ ಅನುಭವ ನೀಡಿತ್ತು. ಹುಲಿ ಕುಣಿತ ಕರಾವಳಿಯ ಜಾನಪದ ಹಾಗೂ ಸಾಂಪ್ರದಾಯಿಕ ಕುಣಿತವಾಗಿದ್ದು, ಇದು ಈಗ ವಿಶ್ವದ ಗಮನ ಸೆಳೀತಾ ಇದೆ . ಹುಲಿ ವೇಷದ ಬ್ಯಾಂಡ್ ದೇಶ ವಿದೇಶದಲ್ಲೂ ಫೇಮಸ್ ಆಗಿದ್ದು, ಮದುವೆ ಇರಲಿ ಪಾರ್ಟಿ ಇರಲಿ ಎಲ್ಲಾ ಕಡೆಯಲ್ಲೂ ಬಳಕೆಯಾಗ್ತಾ ಇದೆ. ಇದನ್ನು ಇನ್ನಷ್ಟು ಹೆಚ್ಚು ಪ್ರಸಿದ್ಧಿಗೆ ತರಲು ಹಾಗೂ ಜಿಲ್ಲೆಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಪಿಲಿ ಪರ್ಬವನ್ನು ಆಯೋಜಿಸಲಾಗಿದೆ.
ವೈಭವದ ಮಂಗಳೂರು ದಸರಾ ಮಹೋತ್ಸವ ಆರಂಭ
ಕರಾವಳಿಯಲ್ಲಿ ಹುಲಿ ಕುಣಿತದಲ್ಲಿ ಹಲವು ಪ್ರಕಾರಗಳಿದ್ದು, ಅದು ಪ್ರದೇಶದಿಂದ ಪ್ರದೇಶಕ್ಕೆ ವಿಬಿನ್ನವಾಗಿದೆ. ಆದ್ರೆ ಮಂಗಳೂರಿನ ಹುಲಿ ತಂಡಗಳು ಕುಣಿತದ ಜೊತೆ ಮಾಡುವ ಸಾಹಸಗಳು ಮೈ ರೋಮಾಂಚನಗೊಳಿಸುತ್ತದೆ. ಇನ್ನು ಇಲ್ಲಿ ಆಯೋಜನೆ ಮಾಡಿರೋದು ಕೇವಲ ಕುಣಿತ ಮಾತ್ರವಾಗಿರದೇ ಇದೊಂದು ಸ್ಪರ್ಧೆಯಾಗಿತ್ತು. ಸುಮಾರು ಹನ್ನೆರಡು ತಂಡಗಳು ಭಾಗವಹಿಸಿರೋ ಈ ಕಾರ್ಯಕ್ರಮದಲ್ಲಿ ಗೆಲ್ಲುವ ತಂಡಕ್ಕೆ ಐದು ಲಕ್ಷ ಬಹುಮಾನವನ್ನೂ ನೀಡಲಾಗುತ್ತದೆ. ದಸರಾದಲ್ಲಿ ಹುಲಿವೇಷ ಹಾಕಿ ನಲಿಯೋದು ಕರಾವಳಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಕೆಎಸ್‌ಆರ್‌ಟಿಸಿಯಿಂದ ‘ಮಂಗಳೂರು ದಸರಾ ದರ್ಶನ’ ಪ್ಯಾಕೇಜ್ ಟೂರ್
ಯಾರಿಗೂ ಠಕ್ಕರ್ ಅಲ್ಲ, ಪ್ರೋತ್ಸಾಹದ ಕೆಲಸ: ವೇದವ್ಯಾಸ ಕಾಮತ್
ಇದೇ ಮೊದಲ ಬಾರಿಗೆ ಪಿಲಿಪರ್ಬ ಆಯೋಜನೆ ಮಾಡಲಾಗಿದೆ. ಆದರೆ ಇದರಲ್ಲಿ ಪಕ್ಷ ಮತ್ತೊಂದು ಅಂತ ಏನೂ ಇಲ್ಲ. ಕಾಂಗ್ರೆಸ್ ನ ಮಿಥುನ್ ರೈ ಅಯೋಜಿಸೋ ಪಿಲಿ ನಲಿಕೆಗೆ ಇದು ಪರ್ಯಾಯ ಅಲ್ಲ. ಅವರು ಅ.4ರಂದು ಮಾಡುವ ಪಿಲಿ ಪರ್ಬ ಕಾರ್ಯಕ್ರಮವನ್ನ ನಮ್ಮದೇ ವೇದಿಕೆಯಲ್ಲಿ ಮಾಡಲು ಹೇಳಿದ್ದೆವು. ಆದರೆ ಅವರು ಅಲ್ಲಿ ತಯಾರು ಮಾಡಿರೋ ಕಾರಣ ಕರಾವಳಿ ಉತ್ಸವ ಮೈದಾನದಲ್ಲೇ ಮಾಡ್ತೀವಿ ಅಂತ ಹೇಳಿದ್ದಾರೆ. ಹುಲಿವೇಷ ಸಂಸ್ಕೃತಿ ಬೆಳೆಸಲು ಈ ಸ್ಪರ್ಧೆ ಆಯೋಜಿಸಲಾಗಿದೆ.