ಹನೂರು (ನ.08):  ಬಹುಮತ ಇಲ್ಲದೆ ಯಾವುದೇ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲಾಗದ ಅತಂತ್ರ ಸ್ಥಿತಿಯಲ್ಲಿದ್ದ ಹನೂರು ಪಟ್ಟಣ ಪಂಚಾಯ್ತಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಮೈತ್ರಿಯ ಮೂಲಕ ಬಿಜೆಪಿ ಚಂದ್ರಮ್ಮ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ನರೇಂದ್ರ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಸಹ ಆಗಮಿಸಿ ಮತ ಚಲಾಯಿಸಿದ್ದು, ಎಲ್ಲರ ಗಮನ ಸೆಳೆಯಿತು.

ಇಲ್ಲ ಸಲ್ಲದ ಅಪಪ್ರಚಾರ : ಫುಲ್ ಗರಂ ಆದ ಸಂಸದೆ ಸುಮಲತಾ

ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ 13ನೇ ವಾರ್ಡ್‌ನ ಚಂದ್ರಮ್ಮ ಹಾಗೂ ಬಿಸಿಎಂ ಬಿ ಸ್ಥಾನಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಹರೀಶ್‌ ಕುಮಾರ್‌ಗೆ ತಲಾ 8 ಮತಗಳು ಲಭ್ಯವಾಯಿತು.

ಅದೇ ರೀತಿಯಲ್ಲಿ ಜೆಡಿಎಸ್‌ ಪಕ್ಷದಿಂದ ಮುಮ್ತಾಜ್‌ ಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಆನಂದ್‌ ಕುಮಾರ್‌ ಅವರಿಗೆ ತಲಾ ಆರು ಮತಗಳು ಲಭ್ಯವಾಯಿತು. ಈ ಹಿನ್ನೆಲೆ ಹೆಚ್ಚು ಮತಗಳಿಸಿ ಚಂದ್ರಮ್ಮ ಹಾಗೂ ಹರೀಶ್‌ ಅವರನ್ನು ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಚುನಾವಣಾಧಿಕಾರಿ ನಾಗರಾಜು ಘೋಷಿಸಿದರು. ಕೈ ಎತ್ತುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ನಾಗರಾಜು ಪೂರ್ಣಗೊಳಿಸಿದರು.

ಶಾಸಕ, ಎಂಪಿ ಮತ ಸೇರಿ ಮೈತ್ರಿಗೆ 8 ಮತ:  ಹನೂರು ಶಾಸಕ ಆರ್‌. ನರೇಂದ್ರ ಹಾಗೂ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ತಲಾ ಒಂದೊಂದು ಮತಗಳು ಹಾಗೂ ಕಾಂಗ್ರೆಸ್‌ ನಾಲ್ಕು ಮತ್ತು ಬಿಜೆಪಿಯ 2 ಮತಗಳು ಸೇರಿ 8 ಮತಗಳು ಮೈತ್ರಿಗೆ ಲಭ್ಯವಾದರೆ. ಜೆಡಿಎಸ್‌ನ ಆರು ಸದಸ್ಯರು ಸಹ ತಮ್ಮ ಪಕ್ಷ ಸೂಚಿಸಿದವರಿಗೆ ಮತ ಚಲಾಯಿಸಿ ಪಕ್ಷ ನಿಷ್ಟೇ ಮೆರೆದರು.

13 ಸ್ಥಾನಗಳ ಪೈಕಿ 6 ಸ್ಥಾನಗಳಿಸಿ ದೊಡ್ಡ ಪಕ್ಷವಾಗಿ ಅಸ್ತಿತ್ವ ಸ್ಥಾಪಿಸಿದ್ದ ಜೆಡಿಎಸ್‌ ಅಧಿಕಾರ ಹಿಡಿಯುವ ಕನಸನ್ನು ಮೈತ್ರಿಯಾಗುವ ಮೂಲಕ ಕಾಂಗ್ರೆಸ್‌, ಬಿಜೆಪಿ ನುಚ್ಚು ನೂರು ಮಾಡಿವೆ ಜೊತೆಗೆ ಜೆಡಿಎಸ್‌ ನಡೆಗೆ ಬಾರಿ ಹಿನ್ನೆಡೆಯುಂಟು ಮಾಡಿವೆ.