Asianet Suvarna News Asianet Suvarna News

20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ : ಮೈಸೂರು- ಕೊಡಗು ಲೋಕಸಭಾ ಅಭ್ಯರ್ಥಿ ಯಾರು..?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುತ್ತಿದೆ.

Congress aims to win 20 seats: Who is the Mysore-Kodagu Lok Sabha candidate snr
Author
First Published Nov 8, 2023, 9:40 AM IST

  ಮೈಸೂರು :   ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸುತ್ತಿದೆ.

ನಗರದ ಹೊರ ವಲಯದ ರೆಸಾರ್ಟಿನಲ್ಲಿ ಕ್ಷೇತ್ರದ ವೀಕ್ಷಕ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಎಸ್. ಸುರೇಶ್ ಅಧ್ಯಕ್ಷತೆದಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು.

ಅಭ್ಯರ್ಥಿ ಯಾರೇ ಆಗಿದ್ದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20 ಸ್ಥಾನ ಗೆಲ್ಲುವ ಗುರಿ ಇದೆ. ಈ ಪೈಕಿ ಮೈಸೂರು- ಕೊಡಗು ಕ್ಷೇತ್ರ ಪ್ರಮುಖವಾದದ್ದು. ಕಳೆದ ಬಾರಿ ಆದ ಸೋಲಿನ ವಿಚಾರ ಮರೆತು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂ. ಲಕ್ಷ್ಮಣ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಿ ಹಲವು ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದೇನೆ. ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡಿದ್ದೇನೆ. ಈ ಬಾರಿ ನನಗೊಂದು ಅವಕಾಶ ಮಾಡಿಕೊಡಿ ಎಂದು ಕೋರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿ ಪಕ್ಷವನ್ನು ಸಂಘಟಿಸಿದ್ದೇನೆ. ಉಪ ಚುನಾವಣೆ, ಲೋಕಸಭಾ, ವಿಧಾನಸಭಾ ಚುನಾವಣೆ, ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ವ್ಯವಸ್ಥಿತವಾದ ಕಾರ್ಯತಂತ್ರ ರೂಪಿಸಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಪಿರಿಯಾಪಟ್ಟಣ ಕ್ಷೇತ್ರದ ಆಕಾಂಕ್ಷಿಯಾಗಿದ್ದರೂ ಹಿರಿಯರಾದ ಕೆ. ವೆಂಕಟೇಶ್ ಅವರಿಗೆಗೆ ಅವಕಾಶ ಮಾಡಿಕೊಡಲಾಯಿತು. ಹಾಗಾಗಿ, ನನ್ನ ಸೇವೆಯನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡುವಂತೆ ಕೋರಿದರು.

ಆಕಾಂಕ್ಷಿಗಳಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ಕಾರ್ಯದರ್ಶಿ ಗುರುಪಾದಸ್ವಾಮಿ, ಮುಖಂಡರಾದ ಗುರುಮಲ್ಲೇಶ್, ಜೆ.ಜೆ. ಆನಂದ್, ಆಲನಹಳ್ಳಿ ಪುಟ್ಟಸ್ವಾಮಿ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯದಲ್ಲೇ ವರದಿ ಸಲ್ಲಿಕೆ

ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕ ಭೈರತಿ ಎಸ್. ಸುರೇಶ್ ಶೀಘ್ರದಲ್ಲೇ ವರದಿ ಸಲ್ಲಿಸುವರು.

ಒಂದು ಕ್ಷೇತ್ರದಿಂದ ಇಬ್ಬರು ಅಥವಾ ಮೂವರ ಹೆಸರನ್ನುಕೆಪಿಸಿಸಿಯು ಹೈಕಮಾಂಡ್ಗೆ ಕಳುಹಿಸಲಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವ ಕಾರಣ ಈ ಬಾರಿ ಟಿಕೆಟ್ ಗೆ ಭಾರೀ ಬೇಡಿಕೆ ಉಂಟಾಗಿದೆ. ಒಕ್ಕಲಿಗ ಮತ್ತು ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.

ಸಭೆಯಲ್ಲಿ ಶಾಸಕರಾದ ಕೆ. ಹರೀಶಗೌಡ, ಡಿ. ರವಿಶಂಕರ್, ಮಂಥರ್ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಎಚ್.ಪಿ. ಮಂಜುನಾಥ್, ವಾಸು, ಎಂ.ಕೆ. ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಡಿಕೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಶುಶ್ರುತ್ ಗೌಡ, ಮೈಸೂರು ನಗರ, ಗ್ರಾಮಾಂತರ, ಮಡಿಕೇರಿ ಜಿಲ್ಲೆಯ ಕೆಪಿಸಿಸಿ, ಡಿಸಿಸಿ ಪದಾಧಿಕಾರಿಗಳು ಇದ್ದರು.

Follow Us:
Download App:
  • android
  • ios