ಕನಕಗಿರಿ(ಜ.28):  ಗ್ರಾಮ ಪಂಚಾಯತ್‌ ಅಧ್ಯಕ್ಷ ಚುನಾವಣೆಯಲ್ಲಿ ಗೆಲವು ಸಾಧಿಸಿ ಬಳಿಕ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ವಾಹನ ಜಖಂಗೊಳಿಸಿದ್ದಾರೆ ಎಂದು ತಾಲೂಕಿನ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಬೆಂಬಲಿತ ತಿಪ್ಪಣ್ಣ ಗಿಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬುಧವಾರ ಚಿಕ್ಕಮಾದಿನಾಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಪಂ ಕಾರ್ಯಾಲಾಯದಲ್ಲಿ ಚುನಾವಣೆ ನಡೆದಿದ್ದು, ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ತಿಪ್ಪಣ್ಣ ಗಿಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಿಪ್ಪಣ್ಣ ಅವರಿಗೆ 12 ಮತ ಲಭಿಸಿದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಬೀರಪ್ಪ ಹೊಂಡಿಗೇರ ಅವರಿಗೆ 7 ಮತಗಳು ಬಂದಿವೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಹುಲಿಗೆಮ್ಮ ತಮಾಟಿ 10 ಮತ ಪಡೆದು ಆಯ್ಕೆಯಾಗಿದ್ದಾರೆ.

ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ: ಸರಳತೆಯಲ್ಲೂ ಉಕ್ಕುತ್ತಿದೆ ಭಕ್ತಿ..!

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತಿಪ್ಪಣ್ಣ ಅವರ ತಮ್ಮ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿರಬೇಕಾದರೆ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಅಂಗಿ ಹಿಡಿದು ಎಳೆದಾಡಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ವಾಹನ ಜಖಂಗೊಳಿಸಿದ್ದಾರೆÜ, ಗಾಜು ಪುಡಿ ಪುಡಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪಿಎಸ್ಸೈ ಡಿ. ಸುರೇಶ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಚುನಾವಣೆ ಬಳಿಕ ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕ ದೇವಸ್ಥಾನಕ್ಕೆ ತೆರಳುವಾಗ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆಗೆ ಕಾರಣರಾದ ತಾಪಂ ಕಾಂಗ್ರೆಸ್‌ ಸದಸ್ಯ ಬಸವಂತಗೌಡ ಸೇರಿ 20ಕ್ಕೂ ಹೆಚ್ಚು ಜನರ ಮೇಲೆ ಕೇಸ್‌ ದಾಖಲಿಸಿದ್ದೇನೆ ಎಂದು ಹಲ್ಲೆಗೊಳಗಾದ ಗ್ರಾ.ಪಂ ಅಧ್ಯಕ್ಷ. ತಿಪ್ಪಣ್ಣ ಗಿಡ್ಡಿ ತಿಳಿಸಿದ್ದಾರೆ.