Asianet Suvarna News Asianet Suvarna News

ಮಂಗ್ಳೂರಲ್ಲಿ ಜಾರಿಯಾಯ್ತು 'ಯೋಗಿ ಮಾಡೆಲ್': ಕಸಾಯಿಖಾನೆ ಮುಟ್ಟುಗೋಲು..!

ಗೋ ಹಂತಕರ ವಿರುದ್ಧ ರಾಜ್ಯದಲ್ಲೇ ಮೊದಲ ಬಾರಿಗೆ ಯೋಗಿ ಮಾದರಿ ಪ್ರಯೋಗ ಮಾಡಲಾಗಿದ್ದು, ಮಂಗಳೂರಿನ ಮೂರು ಕಡೆಗಳಲ್ಲಿ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಂಡಿದೆ. 

Confiscation of Slaughterhouses in Mangaluru grg
Author
First Published Oct 27, 2022, 9:37 AM IST | Last Updated Oct 27, 2022, 10:44 AM IST

ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಅ.27):  ರಾಜ್ಯದಲ್ಲೂ ಉತ್ತರ ಪ್ರದೇಶದ ಯೋಗಿ ಸರ್ಕಾರದ ಆಡಳಿತದ ಮಾದರಿಯಲ್ಲೇ ಅಕ್ರಮ ದಂಧೆಕೋರರಿಗೆ ಆಸ್ತಿ ಮುಟ್ಟುಗೋಲಿನ ಶಾಕ್ ತಟ್ಟಿದೆ. ಗೋ ಹಂತಕರ ವಿರುದ್ಧ ರಾಜ್ಯದಲ್ಲೇ ಮೊದಲ ಬಾರಿಗೆ ಯೋಗಿ ಮಾದರಿ ಪ್ರಯೋಗ ಮಾಡಲಾಗಿದ್ದು, ಮಂಗಳೂರಿನ ಮೂರು ಕಡೆಗಳಲ್ಲಿ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಂಡಿದೆ. 

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೂರು ಅಕ್ರಮ ಕಸಾಯಿಖಾನೆಗಳನ್ನು ಅಧಿಕೃತವಾಗಿ ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (4) ಅಡಿಯಲ್ಲಿ ಮುಟ್ಟುಗೋಲು ಹಾಕಲಾಗಿದೆ. ಅಧಿಕೃತವಾಗಿ ಅಕ್ರಮ ‌ಕಸಾಯಿಖಾನೆಯ ಜಾಗಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ‌ಅಕ್ರಮ ಕಸಾಯಿಖಾನೆ ಜಾಗ ವಶಕ್ಕೆ ಪಡೆದು ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಾಣಿ ಮಾಡಲಾಗಿದ್ದು, ಕಾಟಿಪಳ್ಳ, ಅರ್ಕುಳ ಮತ್ತು ಗಂಜಿ ಮಠದಲ್ಲಿ ಅಕ್ರಮ ಕಸಾಯಿಖಾನೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. 

ಅಸ್ತಮಾನದ ಜೊತೆ ಗ್ರಹಣ, ಸೂರ್ಯನನ್ನು ಬೀಳ್ಕೊಟ್ಟ ಕಡಲತೀರದ ಖಗೋಳಾಸಕ್ತರು

ಶಾಸಕ ಭರತ್ ಶೆಟ್ಟಿ ಸೂಚನೆಯಂತೆ ಸಹಾಯಕ ಆಯುಕ್ತ ಮದನ್ ಮೋಹನ್ ಆದೇಶ ಮಾಡಿದ್ದಾರೆ. ಪೊಲೀಸ್ ಠಾಣೆಗಳ ವರದಿ ಪಡೆದು ವಿಚಾರಣೆ ನಡೆಸಿ ಕಾಯ್ದೆ ಪ್ರಕಾರ ಮುಟ್ಟುಗೋಲು ಹಾಕಲಾಗಿದೆ. ಜಾಗ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ‌ಇಲಾಖೆಯಿಂದ ಮುಟ್ಟುಗೋಲು ಹಾಕಲಾಗಿದೆ. ಕಾಯ್ದೆ ಜಾರಿ ಬೆನ್ನಲ್ಲೇ ಪರಿಣಾಮಕಾರಿ ಅನುಷ್ಠಾನಕ್ಕೆ ಶಾಸಕ ಭರತ್ ಶೆಟ್ಟಿ‌ ಸೂಚಿಸಿದ್ದರು.  

ಶಾಸಕರ ಸೂಚನೆ ಬೆನ್ನಲ್ಲೇ ಫೀಲ್ಡಿಗಿಳಿದಿದ್ದ ಪೊಲೀಸರು, ಮಂಗಳೂರು ‌ಉತ್ತರ ಕ್ಷೇತ್ರದ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆಸಿ ಜಾಗ ಮತ್ತು ವಸ್ತುಗಳನ್ನು ವಶಕ್ಕೆ ‌ಪಡೆದು ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿ ಪಡೆದು ಜಾಗದ ಮಾಲೀಕರಿಗೆ ನೋಟೀಸ್ ‌ನೀಡಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ‌ ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂ ಜಾಗ ಮುಟ್ಟುಗೋಲು ಹಾಕಲಾಗಿದ್ದು, ಬಜಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಕಸಾಯಿಖಾನೆಗಳು ಇದ್ದವು. ಕಾನೂನು ಪ್ರಕಾರ ಕಾಯ್ದೆ ಜಾರಿ ‌ಮಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ‌ಅಸ್ತ್ರ ಪ್ರಯೋಗ ಮಾಡಲಾಗಿದೆ. 

ಹಿರಿಯ ನಾಗರಿಕರ ಪಾಲನೆಗೆ 500 ಮನೆ: ವೀರೇಂದ್ರ ಹೆಗ್ಗಡೆ ಘೋಷಣೆ

ಆರು ತಿಂಗಳಿನಿಂದ ನನ್ನ ಕ್ಷೇತ್ರದಲ್ಲಿ ಗೋ ಸಾಗಾಟ ಬಂದ್: ಡಾ.ಭರತ್ ಶೆಟ್ಟಿ

ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು,  ಆಸ್ತಿ ಮುಟ್ಟುಗೋಲಿ‌ನ ಬಳಿಕ ಗೋ ಹತ್ಯೆ ಕ್ರೈಂ ರೇಟ್ ಇಳಿದಿದೆ. ನನ್ನ ಕ್ಷೇತ್ರದಲ್ಲಿ ಗೋ ಸಾಗಾಟ, ಗೋ ಹತ್ಯೆ ಸಂಪೂರ್ಣ ಬಂದ್ ಆಗಿದೆ. ಆರು ತಿಂಗಳಿನಿಂದ ‌ನನ್ನ ವಿಧಾನಸಭಾ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದ್ ಆಗಿದೆ.‌ ಅಕ್ರಮ ಗೋಸಾಗಾಟ ಮತ್ತು ಹತ್ಯೆ ಬಗ್ಗೆ ಬಹಳಷ್ಟು ದೂರುಗಳು ಬಂದಿತ್ತು. ಈಗ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯನ್ವಯ ಕ್ರಮ ಆಗಿದೆ. ಕಾಯ್ದೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶ ಇದೆ. ನಾನು ಇದನ್ನ ಪೊಲೀಸರು ‌ಮತ್ತು‌ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದೆ.‌ ಕಾಯ್ದೆಯನ್ವಯ ಅದರ ಅನುಷ್ಠಾನ ಮಾಡಿ ಅಂತ ಸೂಚನೆ ನೀಡಿದ್ದೆ. ಅದರ ಪರಿಣಾಮ ‌ಸದ್ಯ ಮೂರು ಕಡೆಗಳಲ್ಲಿ ಆಸ್ತಿ ‌ಮುಟ್ಟುಗೋಲು ಹಾಕಲಾಗಿದೆ ಅಂತ ತಿಳಿಸಿದ್ದಾರೆ. 

ಸದ್ಯ ಅವರ ಜಾಗ ಮಾರಾಟ, ಬ್ಯಾಂಕ್ ಲೋನ್ ಆಗಲ್ಲ, ಸರ್ಕಾರಕ್ಕೆ ಏಲಂಗೂ ಅವಕಾಶ ಇದೆ. ಕಾಯ್ದೆಯನ್ನ ಸರಿಯಾಗಿ ಅನುಷ್ಠಾನ ಮಾಡಬೇಕು. ನನ್ನ ಕ್ಷೇತ್ರದ ಎಲ್ಲಾ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋ ಹತ್ಯೆ ನಿಂತಿದೆ. ಪೊಲೀಸ್ ಅಧಿಕಾರಿಗಳು ಮತ್ತು ಬೇರೆ ಅಧಿಕಾರಿಗಳು ಕಾನೂನು ಪ್ರಕಾರ ಸಹಕಾರ ಕೊಟ್ಟಿದ್ದಾರೆ. ಮಧ್ಯೆ ಕೆಲ ರಾಜಕೀಯ ಶಕ್ತಿಗಳು ಇದರಲ್ಲಿ ರಾಜಕೀಯ ‌ಮಾಡಿದ್ದರೂ ನಾವು ಕ್ರಮ ಕೈಗೊಂಡಿದ್ದೇವೆ. ಗೋಹತ್ಯೆ ಮತ್ತು ಗೋ ಸಾಗಾಟ ನಾವು ಯಾವತ್ತೂ ಸಹಿಸಲ್ಲ. ಮುಂದೆಯೂ ನಾನು ಮುಟ್ಟುಗೋಲು ಹಾಕಲು ಸೂಚಿಸಿದ್ದೇನೆ. ಕಾಯ್ದೆ ಜಾರಿಗೆ ತಂದ ಸರ್ಕಾರಕ್ಕೆ ‌ನಾನು‌ ಧನ್ಯವಾದ ತಿಳಿಸ್ತೇನೆ‌. ಇದನ್ನ ಪರಿಣಾಮಕಾರಿ ಜಾರಿಗೆ ತಂದರೆ ಎಲ್ಲಾ ಕಡೆ ಗೋ ಹತ್ಯೆ ನಿಲ್ಲುತ್ತೆ ಎಂದಿದ್ದಾರೆ.
 

Latest Videos
Follow Us:
Download App:
  • android
  • ios