ಫ್ರೀ ಪ್ರಯಾಣದ ಎಫೆಕ್ಟ್: ಸಿಕ್ಕಸಿಕ್ಕಲ್ಲಿ ಬಸ್ಸಿಂದ ಇಳಿವ ಸ್ತ್ರೀಯರು, ಕಂಡಕ್ಟರ್‌ಗೆ ಫಜೀತಿ
‘ಶಕ್ತಿ’ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಲೆಕ್ಕವನ್ನು ಕೆಎಸ್ಸಾರ್ಟಿಸಿ ಜಾಸ್ತಿ ಕೊಡುತ್ತಿದೆ ಎಂದು ಸರ್ಕಾರ ಅನುಮಾನ ವ್ಯಕ್ತಪಡಿಸಿದ ಬಳಿಕ ಇದೀಗ ಟಿಕೆಟ್ ಚೆಕ್ಕಿಂಗ್ ನ್ನು ಕಟ್ಟುನಿಟ್ಟು ಮಾಡಲಾಗಿದೆ. ಬಸ್ಸಿನ ನಿರ್ವಾಹಕರು ಸರಿಯಾದ ಲೆಕ್ಕ ಕೊಟ್ಟರೂ ಚೆಕ್ಕಿಂಗ್ ವೇಳೆ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಳಿತ ಕಂಡು ಬಂದು ಅಮಾನತು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ಸಂದೀಪ್ ವಾಗ್ಲೆ
ಮಂಗಳೂರು(ಅ.09): ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್ಸುಗಳ ಬಡಪಾಯಿ ನಿರ್ವಾಹಕರು ಅಮಾನತು-ಶಿಸ್ತು ಕ್ರಮದ ಆತಂಕ ಎದುರಿಸುತ್ತಿದ್ದಾರೆ. ಮಹಿಳೆಯರು ಈ ಉಚಿತ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪರಿಣಾಮ ಅನೇಕ ಬಸ್ಸು ನಿರ್ವಾಹಕರು ಈಗಾಗಲೇ ಅಮಾನತುಗೊಂಡಿದ್ದಾರೆ.
‘ಶಕ್ತಿ’ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಲೆಕ್ಕವನ್ನು ಕೆಎಸ್ಸಾರ್ಟಿಸಿ ಜಾಸ್ತಿ ಕೊಡುತ್ತಿದೆ ಎಂದು ಸರ್ಕಾರ ಅನುಮಾನ ವ್ಯಕ್ತಪಡಿಸಿದ ಬಳಿಕ ಇದೀಗ ಟಿಕೆಟ್ ಚೆಕ್ಕಿಂಗ್ ನ್ನು ಕಟ್ಟುನಿಟ್ಟು ಮಾಡಲಾಗಿದೆ. ಬಸ್ಸಿನ ನಿರ್ವಾಹಕರು ಸರಿಯಾದ ಲೆಕ್ಕ ಕೊಟ್ಟರೂ ಚೆಕ್ಕಿಂಗ್ ವೇಳೆ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಳಿತ ಕಂಡು ಬಂದು ಅಮಾನತು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ಶಕ್ತಿ ಯೋಜನೆಗೆ 100 ದಿನದ ಸಂಭ್ರಮ: 62 ಕೋಟಿ ಮಹಿಳಾ ಪ್ರಯಾಣಕ್ಕೆ ಖರ್ಚಾದ ಹಣವೆಷ್ಟು ಗೊತ್ತಾ?
ಸಿಕ್ಕಿದಲ್ಲಿ ಇಳಿಯೋದೆ ಸಮಸ್ಯೆ:
ಮಹಿಳೆಯರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಚಿತ ಟಿಕೆಟ್ ಪಡೆದುಕೊಂಡಿರುತ್ತಾರೆ. ಕಾರಣಾಂತರಗಳಿಂದ ಅವರು ನಿರ್ವಾಹಕರಿಗೆ ಹೇಳಿದ ಗಮ್ಯ ಪ್ರದೇಶ ತಲುಪುವ ಮೊದಲೇ ಅರ್ಧ ದಾರಿಯಲ್ಲಿ ಇಳಿಯುವುದೇ ನಿರ್ವಾಹಕರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಮಹಿಳೆಯರು ಅರ್ಧ ದಾರಿಯಲ್ಲಿ ಇಳಿದ ಬಳಿಕ ಟಿಕೆಟ್ ಚೆಕ್ಕಿಂಗ್ ನಡೆದರೆ ಆ ಮಹಿಳೆಯರ ಲೆಕ್ಕವೇ ಸಿಗಲ್ಲ. ಒಬ್ಬ ನಿರ್ವಾಹಕನು ಬಸ್ಸಿನಲ್ಲಿರುವ ಎಲ್ಲ ಮಹಿಳಾ ಪ್ರಯಾಣಿಕರ ಚಲನವಲನಗಳ ಮೇಲೆ ಕಣ್ಣಿಡಲು ಕಷ್ಟಸಾಧ್ಯ. ಹಾಗಾಗಿ ಲೆಕ್ಕ ಹೊಂದಾಣಿಕೆ ಆಗದೆ ಇರುವುದರಿಂದ ಅಂತಹ ನಿರ್ವಾಹಕರನ್ನು ಅಮಾನತು ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ನಿರ್ವಾಹಕರು ಹೇಳುವಂತೆ ರಾಜ್ಯದಲ್ಲಿ 200ಕ್ಕೂ ಅಧಿಕ ಮಂದಿ ಕಂಡೆಕ್ಟರ್‌ಗಳು ಇದೇ ಕಾರಣದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೆ, ಮಹಿಳೆಯರಿಗೆ ಪ್ರಯಾಣ ಉಚಿತವಾದರೂ, ಟಿಕೆಟ್‌ನಲ್ಲಿ ಸೂಚಿಸಿದ ಗಮ್ಯ ಪ್ರದೇಶ ತಲುಪದೆ ಇದ್ದರೆ ಅವರ ಬಾಕಿ ಉಳಿದ ಪ್ರಯಾಣ ದರವನ್ನು ಸರ್ಕಾರ ಭರಿಸಬೇಕಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೂ ಇದರಿಂದ ನಷ್ಟ ಉಂಟಾಗುತ್ತಿದೆ.
ಕೆಎಸ್ಸಾರ್ಟಿಸಿ ಕಟ್ಟುನಿಟ್ಟು ಸುತ್ತೋಲೆ:
‘ಶಕ್ತಿ’ ಯೋಜನೆ ಜಾರಿ ಬಳಿಕ ಕೆಎಸ್ಸಾರ್ಟಿಸಿ ಹೊರಡಿಸಿದ ಸುತ್ತೋಲೆಯಲ್ಲೂ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪ್ರಸ್ತಾಪಿಸಲಾಗಿದೆ. ಮಹಿಳಾ ಪ್ರಯಾಣಿಕರ ವಾಸ್ತವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಟಿಕೆಟ್‌ನ್ನು ನಿರ್ವಾಹಕರು ವಿತರಿಸಿದ್ದು ಕಂಡುಬಂದರೆ ಸಾಮಾನ್ಯ/ ನಗರ ಸಾರಿಗೆಗಳಲ್ಲಿ ಗಂಭೀರ ಪ್ರಕರಣವೆಂದೂ, ವೇಗದೂತ ಸಾರಿಗೆಗಳಲ್ಲಿ ಅತಿ ಗಂಭೀರ ಪ್ರಕರಣವೆಂದು ದಾಖಲಿಸುವಂತೆ ಚೆಕ್ಕಿಂಗ್ ಇನ್ಸ್‌ಪೆಕ್ಟರ್‌ಗಳಿಗೆ ಲಿಖಿತ ಆದೇಶ ಹೊರಡಿಸಲಾಗಿದೆ. ಅಂತಹ ನಿರ್ವಾಹಕರ ಅಮಾನತು ಗ್ಯಾರಂಟಿ.
ಕಾಂಗ್ರೆಸ್ ಶಕ್ತಿ ಯೋಜನೆ ದುರುಪಯೋಗ ಮಾಡಿಕೊಂಡ ತಮಿಳುನಾಡು ಮಹಿಳೆ: ಕೊಳ್ಳೇಗಾಲದಲ್ಲಿ ಅಂದರ್
ನಮ್ಮದಲ್ಲದ ತಪ್ಪಿಗೆ ಶಿಕ್ಷೆ:
‘ನಮ್ಮದಲ್ಲದ ತಪ್ಪಿಗೆ ಮೂರು ತಿಂಗಳು ಅಮಾನತು ಶಿಕ್ಷೆಗೆ ಗುರಿಯಾಗಬೇಕಿದೆ. ಅಷ್ಟೂ ಸಮಯ ಅರ್ಧ ಸಂಬಳ. ಜೀವಮಾನಪೂರ್ತಿ ಇನ್‌ಕ್ರಿಮೆಂಟ್ ಸಿಗಲ್ಲ. ಮೇಲಾಗಿ ಘಟಕ ಬದಲಾವಣೆ ಮಾಡುತ್ತಾರೆ. ‘ಶಕ್ತಿ’ ಯೋಜನೆ ಬಂದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅವರೆಲ್ಲರ ಮೇಲೆ ನಿಗಾ ವಹಿಸಲು ಸಾಧ್ಯವಾ?’ ಎಂದು ಬಸ್ಸು ನಿರ್ವಾಹಕರೊಬ್ಬರು ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡರು.
‘ಇತ್ತೀಚೆಗೆ ನಮ್ಮ ನಿರ್ವಾಹಕರ ಈ ಫಜೀತಿ ಮೇಲಧಿಕಾರಿಗಳಿಗೂ ಗೊತ್ತಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಕೆಲವರಿಗೆ ಅಮಾನತು ಶಿಸ್ತುಕ್ರಮವನ್ನು ಹಿಂತೆಗೆದುಕೊಳ್ಳುತ್ತಾರೆ. ಇದೇ ರೀತಿ ಮುಂದುವರಿದರೆ ಏನು ಗ್ರಹಚಾರ ಕಾದಿದೆಯೋ ಅಂತ ನಾವು ಆತಂಕದಲ್ಲೇ ದಿನ ಕಳೆಯಬೇಕಾಗಿದೆ’ ಎಂದು ಇನ್ನೊಬ್ಬ ನಿರ್ವಾಹಕರು ಹೇಳಿಕೊಂಡರು.