ಬೆಂಗಳೂರು(ಮಾ.25): ಕಳೆದ ಫೆ.21ರಂದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದ ಆರೋಪದಲ್ಲಿ ಜೈಲು ಸೇರಿದ್ದ ಯುವತಿ ಆರ್ದ್ರಾಗೆ ನಗರದ 56ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಷರತ್ತು ಬದ್ಧ ಜಾಮೀನು ನೀಡಿದೆ. 

ಜಾಮೀನು ಕೋರಿ ಆರ್ದ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್‌ ಜಾಮೀನು ನೀಡಿದ್ದಾರೆ. ಆರೋಪಿ ಪರ ವಾದ ಮಂಡಿಸಿದ ವಕೀಲ ಬಿ.ಎನ್‌. ಜಗದೀಶ್‌, ಅರ್ಜಿದಾರರ ವಿರುದ್ಧ ದಾಖಲಾಗಿರುವುದು ಮೂರು ವರ್ಷ ಶಿಕ್ಷೆಯಾಗುವಂತಹ ಪ್ರಕರಣವಾಗಿದ್ದು, ಗಂಭೀರ ಆರೋಪವಲ್ಲ. ಅಲ್ಲದೆ, ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದರು. 

ಆರ್ದ್ರಾ ವಿರುದ್ಧ ವಾದಿಸಲು ಶ್ರೀರಾಮ ಸೇನೆ ಅರ್ಜಿ

ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ಅತ್ಯಂತ ಗಂಭೀರವಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ವಿಚಾರಣೆ ಇನ್ನೂ ಮುಂದುವರೆದಿದ್ದು, ಜಾಮೀನು ನೀಡಬಾರದು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.

ದೇಶದ್ರೋಹಿ ಘೋಷಣೆ: ಅಮೂಲ್ಯ ಲಿಯೋನಾ ಜತೆ ಪರಪ್ಪನ ಅಗ್ರಹಾರ ಸೇರಿದ ಅರುದ್ರಾ

ಷರತ್ತುಗಳು:

ಐವತ್ತು ಸಾವಿರ ರು.ಗಳ ವೈಯಕ್ತಿಕ ಬಾಂಡ್‌, ಇಬ್ಬರ ಶೂರಿಟಿ ನೀಡಬೇಕು, ಆರೋಪಿ ಇನ್ನುಮುಂದೆ ಇದೇ ರೀತಿಯ ಘಟನೆಗಳನ್ನು ಪುನರಾವರ್ತಿಸಬಾರದು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಐಕ್ಯತೆಗೆ ಧಕ್ಕೆಯಾಗುವಂತಹ ಮತ್ತು ಯಾವುದೇ ಸಮುದಾಯದ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು. ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು. ತಿಂಗಳ ಕೊನೆ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ನಗರವನ್ನು ಬಿಟ್ಟು ಹೋಗಬಾರದು.

'ಮಗಳಿಗೆ ಮಾತ್ರೆ ಕೊಡಬೇಕು, ನಮ್ಮನ್ನು ಬಿಟ್ಬಿಡಿ': ಆರ್ದ್ರಾ ಪೋಷಕರ ಕಣ್ಣೀರು