ಬೆಂಗಳೂರು(ಮಾ.03): ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದನ್ನು ಖಂಡಿಸಿ ಫೆ.21ರಂದು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ’ ಎಂಬ ಫಲಕ ಹಿಡಿದು ಬಂಧನಕ್ಕೆ ಒಳಗಾಗಿರುವ ಯುವತಿ ಆರ್ದ್ರಾ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯಲ್ಲಿ ತಮ್ಮ ವಾದ ಆಲಿಸಬೇಕು ಎಂದು ಕೋರಿ ಶ್ರೀರಾಮ ಸೇನೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಅರ್ಜಿ ವಿಚಾರಣೆ ನಡೆಸಿದ 6ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ಸೇನೆಯ ಬೆಂಗಳೂರು ಘಟಕದ ಅಧ್ಯಕ್ಷ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪರವಾಗಿ ವಾದ ಮಂಡಿಸಿದ ವಕೀಲ ಮಂಜುನಾಥ್, ನಮ್ಮ ಕಕ್ಷಿದಾರರ ಸಂಘಟನೆ ಪೊಲೀಸರಿಂದ ಅಧಿಕೃತವಾಗಿ ಅನುಮತಿ ಪಡೆದು ಪ್ರತಿಭಟನೆ ನಡೆಸುತ್ತಿತ್ತು.

'ಮಗಳಿಗೆ ಮಾತ್ರೆ ಕೊಡಬೇಕು, ನಮ್ಮನ್ನು ಬಿಟ್ಬಿಡಿ': ಆರ್ದ್ರಾ ಪೋಷಕರ ಕಣ್ಣೀರು

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿರುವ ಆರೋಪಿ, ಕಾಶ್ಮೀರ ಫ್ರೀ ಎಂಬ ಫಲಕವನ್ನು ಪ್ರದರ್ಶನ ಮಾಡಿ ಸ್ಥಳದಲ್ಲಿ ಶಾಂತಿ ಕದಡುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡುವ ಮುನ್ನ ನಮ್ಮ ವಾದವನ್ನು ಆಲಿಸಬೇಕು ಎಂದು ಮನವಿ ಮಾಡಿದರು.

ಬಳಿಕ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲರು ಮತ್ತಷ್ಟು ಕಾಲಾವಕಾಶ ನೀಡುವಂತೆ ಮನವಿ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಯನ್ನು ಮಂಗಳವಾರಕ್ಕೆ ಮುಂದೂಡಿತು.