ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 40 ವರ್ಷದ ವಿಧವೆಗಾಗಿ 21ರ ಯುವಕನೊಬ್ಬ ಮನೆ ತೊರೆದಿದ್ದಾನೆ. ಈ ಅಸಾಂಪ್ರದಾಯಿಕ ಪ್ರೇಮ ಸಂಬಂಧ ಮತ್ತು 19 ವರ್ಷಗಳ ವಯಸ್ಸಿನ ಅಂತರವು ಯುವಕನ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದ್ದು, ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ

ಮೊದಲೆಲ್ಲಾ, ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು 10 ರಿಂದ 12 ವರ್ಷಗಳ ವಯಸ್ಸಿನ ಅಂತರ ಇರುವ ವ್ಯಕ್ತಿಗಳೊಂದಿಗೆ ಸಣ್ಣ ವಯಸ್ಸಿನಲ್ಲೇ ಪೋಷಕರು ಮದುವೆ ಮಾಡುತ್ತಿದ್ದ ಉದಾಹರಣೆಗಳಿದ್ದವು. ಈಗಲೂ ಕೆಲವು ಕಡೆಗಳಲ್ಲಿ ಪೋಷಕರೇ ನಿಶ್ಚಯಿಸಿದ ವಿವಾಹಗಳಲ್ಲಿ ಈ ರೀತಿಯ ವಯಸ್ಸಿನ ಅಂತರದ ಮದುವೆಗಳು ನಡೆಯುತ್ತಿರುತ್ತವೆ. ಹುಡುಗಿ ಹುಡುಗನಿಗಿಂತ ಸಣ್ಣವಳಿರಬೇಕು ಎಂದು ನಮ್ಮ ಹಿರಿಯರು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಂಪೂರ್ಣ ಉಲ್ಟಾ ಆಗುತ್ತಿದೆ. ಹದಿಹರೆಯದ ಹುಡುಗರು ತಮ್ಮಗಿಂತ 10 ರಿಂದ 15 ವರ್ಷ ಹಿರಿಯರಾದ ವಿವಾಹಿತರ ಹಿಂದೆ ಬೀಳುತ್ತಿದ್ದು, ಇದರಿಂದ ಅವರ ಕುಟುಂಬಗಳು ಕಂಗಾಲಾಗುತ್ತಿವೆ. ಇದರಿಂದ ಸಾಮಾಜಿಕವಾಗಿ ಎದುರಾಗುವ ಅವಮಾನ ಟೀಕೆಗಳಿಂದಾಗಿ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ. ಸಾಮಾಜಿಕ ಜಾಲತಾಣಗಳು ಈ ಹುಚ್ಚು ಪ್ರೀತಿಗೆ ನೀರೆರೆದು ಪೋಷಿಸುತ್ತಿವೆ.

ಮನೆಬಿಟ್ಟು ಓಡಿಹೋದ ಮಗ ಸಿಕ್ಕಿದ್ದು 19 ವರ್ಷ ಹಿರಿಯಳ ಮನೆಯಲ್ಲಿ

ದಿನಗಳ ಹಿಂದಷ್ಟೇ ಮೂರು ಮಕ್ಕಳ ತಾಯಿ, ವಿವಾಹಿತ ಮಹಿಳೆಯೊಬ್ಬಳ ಪ್ರೀತಿಯಲ್ಲಿ ಬಿದ್ದ 25 ವರ್ಷದ ಹುಡುಗನನ್ನು ಆಕೆಯ ಮನೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದ ಅಮ್ರೋಹಾದಲ್ಲಿ ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲೆಲ್ಲಾ ಹೆಣ್ಣು ಮಕ್ಕಳು ಪ್ರೀತಿಸಿ ಮನೆಬಿಟ್ಟು ಓಡಿ ಹೋಗುತ್ತಿದ್ದರು. ಆದರೆ ಈ ಪ್ರಕರಣದಲ್ಲಿ 21 ವರ್ಷದ ಹುಡುಗನೋರ್ವ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಪ್ರೀತಿಯನ್ನು ಹಿಂಬಾಲಿಸಿ ಮನೆ ಬಿಟ್ಟು ಓಡಿ ಹೋಗಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40 ವರ್ಷದ ಮಹಿಳೆ

ಇದು ವಿಚಿತ್ರ ಎನಿಸಿದರು ಸತ್ಯ. ಸಾಮಾಜಿಕ ಜಾಲತಾಣದಲ್ಲಿ 40ರ ಹರೆಯದ ವಿಧವೆ ಮಹಿಳೆಯ ಪ್ರೇಮ ಜಾಲಕ್ಕೆಬಿದ್ದ 21ರ ಹರೆಯದ ಹುಡುಗನೋರ್ವ ಮನೆಬಿಟ್ಟು ಓಡಿ ಹೋಗಿದ್ದು, ಇದರಿಂದ ಆತನ ಕುಟುಂಬ ಕಂಗಾಲಾಗಿದೆ. ಮಗ ನಾಪತ್ತೆಯಾದ ದಿನದಿಂದ ಆತನಿಗಾಗಿ ಹುಡುಕಾಟ ನಡೆಸಿದ ಆತನ ಕುಟುಂಬ ಕಡೆಗೆ ಬಂದು ತಲುಪಿದ್ದು, ಆಗ್ರಾದ 40 ವರ್ಷದ ಮಹಿಳೆಯ ಮನೆಗೆ.

ಇದನ್ನೂ ಓದಿ: ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು

ಹೌದು 21ರ ಹರೆಯದ ಅಮ್ರೋಹಾದ ಯುವಕನಿಗೆ ಸೋಶಿಯಲ್ ಮೀಡಿಯಾದಲ್ಲಿ ಆಗ್ರಾದ ನಿವಾಸಿಯಾಗಿದ್ದ 40 ವರ್ಷದ ಮಹಿಳೆಯ ಪರಿಚಯವಾಗಿದ್ದು, ಪರಿಚಯ ಸ್ವಲ್ಪ ಸಮಯದಲ್ಲೇ ಗಾಢವಾದ ಪ್ರೇಮಕ್ಕೆ ತಿರುಗಿದ್ದು, ಬಿಟ್ಟಿರಲಾರದ ಬಂಧವಾಗಿ ಬದಲಾಗಿದೆ. ಮಹಿಳೆಯ ಜೊತೆಗಿನ ಪ್ರೇಮ ಸಂಬಂಧದಲ್ಲಿ ಭಾವನಾತ್ಮಕವಾಗಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಪರಿಣಾಮ 21ರ ಹರೆಯದ ತರುಣ ಮನೆಯಲ್ಲಿ ಪೋಷಕರಿಗೂ ಹೇಳದೇ ಮನೆಬಿಟ್ಟು ಓಡಿ ಬಂದಿದ್ದು, ಮಹಿಳೆಯ ಜೊತೆ ವಾಸ ಮಾಡುವುದಕ್ಕೆ ಶುರು ಮಾಡಿದ್ದಾನೆ.

ಆದರೆ ಮನೆಯಿಂದ ಮಗ ಹಠಾತ್ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಆತನ ತಾಯಿ ಪೊಲೀಸರಿಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದಾಗ ಆತ ಅಂತಿಮವಾಗಿ ಆಗ್ರಾದಲ್ಲಿ 40ರ ಹರೆಯದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಯುವಕನ ತಾಯಿ ಮಗನನ್ನು ಪ್ರೇಮಜಾಲದಲ್ಲಿ ಬೀಳಿಸಿದ ಮಹಿಳೆಯ ಮನೆ ತಲುಪಿದಾಗ ಅಲ್ಲಿ ದೊಡ್ಡ ಗಲಾಟೆ ನಡೆದಿದೆ. ಇದು ಎರಡು ಕುಟುಂಬಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ.

ಇದನ್ನೂ ಓದಿ: ಆಂಟಿಯ ಸಹವಾಸ ತಂದ ಆಪತ್ತು: ಮೂರು ಮಕ್ಕಳ ತಾಯಿಯ ವ್ಯಾಮೋಹಕ್ಕೆ ಬಿದ್ದವನ ಹೊಡೆದು ಸಾಯಿಸಿದ ಮಹಿಳೆ ಕಡೆಯವರು

ವರದಿಗಳ ಪ್ರಕಾರ ಅವರಿಬ್ಬರು ದೇಗುಲವೊಂದರಲ್ಲಿ ಯಾರಿಗೂ ಹೇಳದೇ ಯಾರ ಒಪ್ಪಿಗೆಯನ್ನು ಪಡೆಯದೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ಯುವಕನ ಪಾಲಿಗೆ ಇದು ಪ್ರೇಮವಾದರೆ ಆತನ ಪೋಷಕರ ಪಾಲಿಗೆ ಇದು ನುಂಗಲಾರದ ತುತ್ತಾಗಿದೆ. ಅವರು ಮಗನ ಈ ಸಂಬಂಧವನ್ನು ಒಪ್ಪಿಕೊಳ್ಳಲಾಗದೇ ಚಡಪಡಿಸುತ್ತಿದ್ದಾರೆ.

ಇತ್ತ ಯುವಕನಿಗೆ ಇದು ನಿಜವಾದ ಪ್ರೀತಿಯೇ ಅಥವಾ ತಾತ್ಕಾಲಿಕ ಆಕರ್ಷಣೆಯೋ ತಿಳಿಯದಾಗಿದೆ. ಅವರ ನಡುವಿನ 19 ವರ್ಷದ ವಯಸ್ಸಿನ ಅಂತರ ಹಾಗೂ ಅವರ ರಹಸ್ಯ ಮದುವೆ ಕುಟುಂಬವನ್ನು ಆಘಾತಕ್ಕೆ ದೂಡಿದೆ. ಆನ್‌ಲೈನ್ ಚಾಟಿಂಗ್ ಹಾಗೂ ಪ್ರೀತಿಗೂ ವಾಸ್ತವ ಬದುಕಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಆನ್‌ಲೈನ್‌ನಲ್ಲಿ ಸಿಕ್ಕವಳಿಗಾಗಿ ಕುಟುಂಬ ತೊರೆದ ಯುವಕನ ಈ ಸ್ಟೋರಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Scroll to load tweet…