Asianet Suvarna News Asianet Suvarna News

ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು: ಪುತ್ತಿಲ

ಪುತ್ತೂರಿನ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು,. ಹಲ್ಲೆ ನಡೆಸಿದ ಪೊಲೀಸ್‌ ಸಿಬ್ಬಂದಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪ.ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು ಎಂದು ಹಿಂದೂ ಮುಖಂಡ ಪುತ್ತೂರು ವಿಧಾನಸಭಾ ಚುನಾವಣೆಯ ಪಕ್ಷೇತರ ಪರಾಜಿತ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.

Complaint to Human Rights Commission against assaulting police says puttila arun kumar rav
Author
First Published May 19, 2023, 5:05 AM IST

ಪುತ್ತೂರು (ಮೇ.19) :

ಪುತ್ತೂರಿನ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹಲ್ಲೆ ನಡೆಸಿದ ಪೊಲೀಸ್‌ ಸಿಬ್ಬಂದಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪ.ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡಲಾಗುವುದು ಎಂದು ಹಿಂದೂ ಮುಖಂಡ ಪುತ್ತೂರು ವಿಧಾನಸಭಾ ಚುನಾವಣೆಯ ಪಕ್ಷೇತರ ಪರಾಜಿತ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಘಟನೆಗಳು ಇನ್ನು ಮರುಕಳಿಸದಂತೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆ ಒತ್ತಡ ಹೇರಿ ಈ ಕೃತ್ಯ ನಡೆಸುವಂತೆ ಮಾಡಲಾಗಿದೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎಂದು ಭಾವಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆಯೇ ಹಲ್ಲೆ ಮಾಡಿಸಿದ್ದಾರೆ. ಆದರೆ ಹಲ್ಲೆ ಕೃತ್ಯಕ್ಕೆ ಇಲಾಖೆಯೇ ನೇರ ಹೊಣೆಯಾಗಿದೆ ಎಂದರು.

ಬ್ಯಾನರ್‌ ಹಾಕಿದ್ದು ಒಪ್ಪಿಕೊಳ್ಳುವಂತೆ ಗನ್ ಇಟ್ಟು ಬೆದರಿಕೆ: ಹಿಂದೂ ಕಾರ್ಯಕರ್ತರೆಂದು ಚರ್ಮ ಸುಲಿದರು!

ಚುನಾವಣೆ ನಡೆದು ಮತ ಎಣಿಕೆ ಬಳಿಕ ಹಲವಾರು ಘಟನೆಗಳು ನಡೆಯುತ್ತಿವೆ. ವಿಟ್ಲದಲ್ಲಿ ಅತ್ಯಾಚಾರ ಯತ್ನ, ಗ್ಯಾಸ್‌ ವಿತರಕರ ಮೇಲೆ ಹಲ್ಲೆ, ಕೂರ್ನಡ್ಕದಲ್ಲಿ ಹಲ್ಲೆ, ಕಾವುವಿನಲ್ಲಿ ಕೇಸರಿ ಫ್ಲಕ್ಸ್‌ ಹರಿದು ಹಾಕಿರುವುದು, ಸವಣೂರಿನಲ್ಲಿ ಕೇಸರಿ ಧ್ವಜಕ್ಕೆ ಅವಮಾನ ನಡೆಸಲಾಗಿದೆ. ಇದೀಗ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಪೊಲೀಸರ ಮೂಲಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದ ಅವರು ಇದರಿಂದಾಗಿ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ಕಂದಕ ಸೃಷ್ಟಿಯಾಗಿದೆ. ಪುತ್ತೂರಿಗೆ ಜನಸ್ನೇಹಿ ಅಧಿಕಾರಿಗಳು ಬೇಕು. ಹಲ್ಲೆ ನಡೆಸಿದ ಪೊಲೀಸರನ್ನು ತಕ್ಷಣವೆ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಪುತ್ತಿಲ ಬೆಂಬಲಿಗರಾದ ಪ್ರಸನ್ನ ಕುಮಾರ್‌ ಮಾರ್ತ, ಪ್ರವೀಣ್‌ ಭಂಡಾರಿ, ಅನಂತಕೃಷ್ಣ, ನವೀನ್‌ ಪಂಜಳ ಮತ್ತು ರಾಜಶೇಖರ್‌ ಹಾಜರಿದ್ದರು.

21ರಂದು ‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಅರುಣ್‌ ಕುಮಾರ್‌ ಪುತ್ತಿಲ(Arun kumar puttila) ಬೆಂಬಲಿಗರಿಂದ 21ರಂದು ಸಂಜೆ ಬೃಹತ್‌ ಪಾದಯಾತ್ರೆ ಮತ್ತು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದ ದೇವರಮಾರು ಗದ್ದೆಯಲ್ಲಿ ‘ನಮ್ಮ ನಡಿಗೆ ಮಹಾಲಿಂಗೇಶ್ವನ ನಡೆಗೆ’ ಹೆಸರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಬೆಂಬಲಿಸಿದ ಕಾರ್ಯಕರ್ತರು ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಹಾಗೂ ದೇವರಿಗೆ ವಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ ಎಂದ ಅವರು ಸಂಜೆ 4 ಗಂಟೆಗೆ ದರ್ಬೆ ವೃತ್ತದ ಬಳಿಯಿಂದ ಸಾವಿರಾರು ಕಾರ್ಯಕರ್ತರ ಜತೆ ಅರುಣ್‌ ಪುತ್ತಿಲ ಪಾದಯಾತ್ರೆಯಲ್ಲಿ ಸಾಗಲಿದ್ದಾರೆ. ಬಳಿಕ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಸಮಾರಂಭ ನಡೆಯಲಿದೆ. ಮುಂದಿನ 5 ವರ್ಷಗಳ ನಡೆಯ ಬಗ್ಗೆ ಸಮಾವೇಶದಲ್ಲಿ ಪ್ರಕಟ ಪಡಿಸಲಾಗುವುದು ಎಂದು ಅರುಣ್‌ ಪುತ್ತಿಲ ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಕ್ರಮಕ್ಕೆ ದ.ಕ. ಬಿಜೆಪಿ ಆಗ್ರಹ

ಮಂಗಳೂರು: ಇತ್ತೀಚಿಗೆ ಪುತ್ತೂರಲ್ಲಿ ಬಿಜೆಪಿ ನಾಯಕರ ಅವಹೇಳನಕಾರಿ ಬ್ಯಾನರ್‌ ಹಾಕಿದ ಆರೋಪದಲ್ಲಿ ಬಂಧಿತ ಒಂಭತ್ತು ಮಂದಿ ಕಾರ್ಯಕರ್ತರಿಗೆ ಪೊಲೀಸರು ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಪೊಲೀಸರ ಈ ವರ್ತನೆಯನ್ನು ದ.ಕ. ಬಿಜೆಪಿ ಖಂಡಿಸಿದೆ. ಅಲ್ಲದೆ ಈ ಹೇಯ ಕೃತ್ಯಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕೇಸು ದಾಖಲಿಸಿ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ.ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

 ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆ ಗಡುವು

ಹಿಂದೂ ಕಾರ್ಯಕರ್ತರ ಮೇಲೆ ಪುತ್ತೂರು ಪೊಲೀಸರು ನಡೆಸಿದ ದೌರ್ಜನ್ಯ ಅತ್ಯಂತ ಅಕ್ಷಮ್ಯ. ಈ ಪ್ರಕರಣದಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಎಸ್‌ಐ ಮತ್ತು ಕಾನ್‌ಸ್ಟೇಬಲ್‌ ಅವರನ್ನು ಅಮಾನತು ಮಾಡಿರುವ ಎಸ್‌ಪಿ ಆದೇಶ ಸ್ವಾಗತಾರ್ಹ. ಆದರೆ ಪ್ರಕರಣದಲ್ಲಿ ಡಿವೈಎಸ್‌ಪಿ ಪ್ರಮುಖ ಆರೋಪಿಯಾಗಿದ್ದು, ಅವರ ಮೇಲೆ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡುವುವುದಾಗಿ ಎಸ್‌ಪಿ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಯ ಒಳಗೆ ಕ್ರಮ ಜಾರಿಯಾಗಬೇಕು. ಇಲ್ಲದಿದ್ದರೆ ಜಾಗೃತ ಹಿಂದೂ ಸಮಾಜ ಬಲವಾದ ಉತ್ತರ ನೀಡುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

ಸಂಘಟನೆಯ ಜಿಲ್ಲಾ ಸಹ ಸಂಚಾಲಕರಾದ ನರಸಿಂಹ ಮಾಣಿ ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲ್ಲೆ ಮಾಡಿದ ಪೊಲೀಸರ ಮೇಲೆ ಐಪಿಸಿ ಸೆಕ್ಷನ್‌ 307ರ ಪ್ರಕಾರ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಡಿವೈಎಸ್‌ಪಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಎಲ್ಲ ಪರಿಸ್ಥಿತಿಗಳಿಗೆ ಇಲಾಖೆಯೇ ಜವಾಬ್ದಾರಿ ಎಂದು ಹೇಳಿದರು.

ಚಪ್ಪಲಿ ಹಾರ ಹಾಕಿದವರ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿದ್ದಾರೆ. ಇವರ ಸ್ಥಾನಮಾನವನ್ನು ಅವರೇ ಸಮಾಜದ ಮುಂದೆ ನಿರ್ಧರಿಸಿದ್ದಾರೆ ಎಂದು ನರಸಿಂಹ ಹೇಳಿದರು.

ಪೊಲೀಸರ ಥರ್ಡ್ ಡಿಗ್ರಿ ಶಿಕ್ಷೆಗೆ ಗಂಭೀರ ಗಾಯಗೊಂಡ ಹಿಂದು ಕಾರ್ಯಕರ್ತರು : ಶಾಸಕ ಹರೀಶ್ ಪೂಂಜಾ, ಪುತ್ತಿಲ ಆಸ್ಪತ್ರೆಗೆ ಭೇಟಿ

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಜಗದೀಶ್‌ ನೆತ್ತರಕೆರೆ, ಪ್ರಮುಖರಾದ ದಿನೇಶ್‌ ಪಂಜಿಗ, ವೆಂಕಟ್‌ ಕಡಬ, ರಾಜೇಶ್‌ ಪಂಜೋಡಿ ಹಾಜರಿದ್ದರು.

Follow Us:
Download App:
  • android
  • ios