ಅಶ್ವತ್ಥನಾರಾಯಣ ಎಲ್‌.

ಚಿಕ್ಕಬಳ್ಳಾಪುರ [ಜ.06]:  ಜಿಲ್ಲೆಯಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ ನಂತರ ಬಿಜೆಪಿ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆ. ಅಧ್ಯಕ್ಷ ಗಾದಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಕಾಂಕ್ಷಿಗಳ ಪಟ್ಟಿಆಂಜನೇಯನ ಬಾಲದಂತೆ ಬೆಳೆಯುತ್ತಿದೆ. ಇವರಲ್ಲಿ ಪಕ್ಷವನ್ನು ಮುನ್ನೆಡೆಸುವ ಸಾರಥಿ ಯಾರು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೂ ಈವರೆಗೆ ವಿಧಾನಸಭೆಗೆ ಆಯ್ಕೆಯಾದ ಉದಾಹರಣೆಗಳಿಲ್ಲ. ಇನ್ನು ಲೋಕಸಭೆಯಲ್ಲಿ ಪ್ರತಿ ಬಾರಿ ಉತ್ತಮ ಮತ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದ ಬಿಜೆಪಿ ಗೆಲುವಿನ ಸನಿಹಕ್ಕೆ ಬಂದು ವಿಫಲವಾಗುತ್ತಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಂಜುನಾಥ್‌ ಅಧ್ಯಕ್ಷತೆಯಲ್ಲಿ ಅಧಿಕಾರಕ್ಕೆ

ಡಾ. ಜಿ.ವಿ. ಮಂಜುನಾಥ್‌ ಅವರು ಅಧ್ಯಕ್ಷರಾದ ನಂತರ ಪಕ್ಷ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುವ ಸೂಚನೆಗಳು ಗೋಚರಿಸಿದವು. ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಜಿಲ್ಲಾಧ್ಯಕ್ಷ ಮಂಜುನಾಥ್‌ ಅವರೇ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಲ್ಪ ಮತ ಪಡೆಯುವ ಮೂಲಕ ಸೋಲನುಭವಿಸಿದರು.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮಾತುಗಳನ್ನು ಸುಳ್ಳು ಮಾಡಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಮಲ ಅರಳಿತು. ಲೋಕಸಭೆಗೆ ಸ್ಪರ್ಧಿಸಿದ್ದ ಬಿ.ಎನ್‌. ಬಚ್ಚೇಗೌಡ ಅವರು ಸುಮಾರು 2 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಲು ಕಾರಣರಾದರು.

ತೇಜಸ್ವಿ ಯುವ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...

ನಂತರ ಸಮ್ಮಿಶ್ರ ಸರ್ಕಾರದ ಪತನವಾಗಿ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದ ಡಾ.ಕೆ. ಸುಧಾಕರ್‌ ಅವರು ಬಿಜೆಪಿ ಸೇರ್ಪಡೆಯಾದರು. ಇದರಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹಿಮ್ಮಡಿಯಾಯಿತು. ಕಳೆದ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲದ ಅಭ್ಯರ್ಥಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯ ಆರಂಭವಾಗಲಿದೆ ಎಂಬುದು ಸಾಬೀತಾಯಿತು.

ಹುದ್ದೆಯ ಆಕಾಂಕ್ಷಿಗಳು ಇವರು

ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗಾಗಿ ಬಾಗೇಪಲ್ಲಿ ತಾಲೂಕಿನ ರಾಮಲಿಂಗಪ್ಪ, ಗೌರಿಬಿದನೂರು ತಾಲೂಕಿನ ಗೋಪಿನಾಥ್‌, ಶಿಡ್ಲಘಟ್ಟತಾಲೂಕಿನ ನಂದೀಶ್‌, ಗುಡಿಬಂಡೆ ತಾಲೂಕಿನ ನಾಗರಾಜು, ಚಿಕ್ಕಬಳ್ಳಾಪುರ ತಾಲೂಕಿನ ರಾಮಿರೆಡ್ಡಿ ಮತ್ತು ವಿಜಯ್‌ಕುಮಾರ್‌ ಹಾಗೂ ಚಿಂತಾಮಣಿ ತಾಲೂಕಿನ ಪ್ರತಾಪ್‌ ಆಕಾಂಕ್ಷಿಗಳಾಗಿದ್ದಾರೆ.

ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK...

ಆದರೆ ಇವರುಗಳಲ್ಲಿ ಬಾಗೇಪಲ್ಲಿಯ ರಾಮಲಿಂಗಪ್ಪ ಮತ್ತು ಗೌರಿಬಿದನೂರಿನ ಗೋಪಿನಾಥ್‌ ಅವರು ಅಂತಿಮ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. ಪರಿಶಿಷ್ಟಜಾತಿಗೆ ಸೇರಿದ ಗೋಪಿನಾಥ್‌ ಮತ್ತು ಬಲಿಜ ಸಮುದಾಯಕ್ಕೆ ಸೇರಿದ ರಾಮಲಿಂಗಪ್ಪ ಅವರಲ್ಲಿ ಒಬ್ಬರು ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜಿಲ್ಲಾ, ತಾಲೂಕು ಮಟ್ಟದ ಪಕ್ಷದ ವರಿಷ್ಟರು ರಾಮಲಿಂಗಪ್ಪ ಆಯ್ಕೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ರಾಮಾಲಿಂಗಪ್ಪ ಆಯ್ಕೆ ಸಾಧ್ಯತೆ

ಜಿಲ್ಲೆಯಲ್ಲಿ ಒಕ್ಕಲಿಗರ ನಂತರ ಹೆಚ್ಚು ಜನಸಂಖ್ಯೆ ಉಳ್ಳ ಬಲಿಜ ಸಮುದಾಯಕ್ಕೆ ಸೇರಿರುವ ಕಾರಣ ಇವರನ್ನು ಅಧ್ಯಕ್ಷರನ್ನಾಗಿ ಮಾಡುವುದರಿಂದ ಬಲಿಜ ಸಮುದಾಯದ ಮತಗಳನ್ನು ಬಿಜೆಪಿಗೆ ಭದ್ರಪಡಿಸಿಕೊಲ್ಳಲಿದ್ದಾರೆ ಎಂಬ ಕಾರಣಕ್ಕಾಗಿ ರಾಮಲಿಂಗಪ್ಪ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಉನ್ನತ ಮೂಲಗಳು ದೃಢಪಡಿಸಿವೆ.

ಜಿಲ್ಲೆಯ ಎಲ್ಲ ಮಂಡಲಗಳ ಅಧ್ಯಕ್ಷರ ಆಯ್ಕೆಯೂ ಈಗಾಗಲೇ ಪೂರ್ಣಗೊಂಡಿದ್ದು, ಜಿಲ್ಲಾಧ್ಯಕ್ಷ ಸೇರಿದಂತೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಮಾತ್ರ ಬಾಕಿ ಇದ್ದು, ಶೀಘ್ರದಲ್ಲಿಯೇ ನಡೆಯಲಿರುವ ಆಯ್ಕೆಯಲ್ಲಿ ರಾಮಲಿಂಗಪ್ಪ ಅವರು ಅಧ್ಯಕ್ಷರಾಗುವ ಸಾಧ್ಯತೆ ಇದೆ.

ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಪಕ್ಷ ಸಂಘಟನೆ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ತೃಪ್ತಿ ಇದೆ. ಅಲ್ಲದೆ ನನ್ನದೇ ಅವಧಿಯಲ್ಲಿ ಲೋಕಸಬೆ ಮತ್ತು ವಿಧಾನಸಭೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವುದು ಇನ್ನಷ್ಟುಸಮಾಧಾನವಿದ್ದು, ಪಕ್ಷ ಅರ್ಹರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದೆ. ಅಲ್ಲದೆ ವರಿಷ್ಠರು ಪಕ್ಷದಲ್ಲಿ ಯಾವುದೇ ಹೊಣೆ ನೀಡಿದರೂ ನಿರ್ವಹಿಸಲು ನಾನು ಸದಾ ಸಿದ್ಧ.

-ಡಾ.ಜಿ.ವಿ. ಮಂಜುನಾಥ್‌, ಬಿಜೆಪಿ ಜಿಲ್ಲಾಧ್ಯಕ್ಷ.