Karnataka Rains: ಸಂತ್ರಸ್ತರಲ್ಲದವರ ಖಾತೆಗೆ ನೆರೆ ಪರಿಹಾರ ಹಣ..!
ನೆರೆ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ಪರಿಹಾರಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತರು, ಸಂತ್ರಸ್ತರಲ್ಲದ 70 ಮಂದಿಯ ಖಾತೆಗೆ ಹಣ ವರ್ಗ
ಎಂ.ಅಫ್ರೋಜ್ ಖಾನ್
ರಾಮನಗರ(ಸೆ.20): ನೆರೆ ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಆಗಬೇಕಾದ ಪರಿಹಾರ ಹಣವನ್ನು ಸಂತ್ರಸ್ತರಲ್ಲದವರ ಖಾತೆಗೆ ಜಮೆ ಮಾಡುವ ಮೂಲಕ ನಗರಸಭೆ ಹಾಗೂ ತಾಲೂಕು ಆಡಳಿತ ಎಡವಟ್ಟು ಮಾಡಿದೆ. ಮಹಾಮಳೆಯಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರ ಪೈಕಿ ಬಹುತೇಕರಿಗೆ ಇನ್ನೂ ಸರ್ಕಾರದ ಪರಿಹಾರ ಹಣ ಕೈಗೆಟಕಿಲ್ಲ. ಆದರೆ, ಸಂತ್ರಸ್ತರೇ ಅಲ್ಲದ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರುಪಾಯಿನಂತೆ ಲಕ್ಷಾಂತರ ರುಪಾಯಿ ಪರಿಹಾರ ಹಣ ತಲುಪಿರುವುದು ಸಾಕಷ್ಟುಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ರಣಮಳೆಗೆ ಜಲಪ್ರಳಯ ಉಂಟಾಗಿ ರಾಮನಗರದ ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಜಿಯಾವುಲ್ಲಾ ಬ್ಲಾಕ್, ಯಾರಬ್ ನಗರ, ಗೌಸಿಯಾ ನಗರ, ಟ್ರೂಪ್ ಲೈನ್ ಪ್ರದೇಶಗಳು ಜಲಾವೃತಗೊಂಡಿದ್ದವು. ಕುರಿ, ಮೇಕೆ, ಕೋಳಿಗಳು ಕೊಚ್ಚಿ ಹೋಗಿದ್ದವು.
ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ
ಈ ಬಡಾವಣೆಗಳಲ್ಲಿ 2250 ಮನೆಗಳಿಗೆ ನೀರು ನುಗ್ಗಿತ್ತು. ಇದರಲ್ಲಿ 150 ಮನೆಗಳಿಗೆ ಹೆಚ್ಚಿನ ಹಾನಿಯಾಗಿತ್ತು. ಸುಮಾರು 100 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುಮಾರು 40 ಕಿ.ಮೀ ಉದ್ದದ ರಸ್ತೆಗೆ ಹಾನಿಯಾಗಿತ್ತು. ನೀರು ನುಗ್ಗಿದ ಪ್ರತಿ ಮನೆಗೂ 10 ಸಾವಿರ ರುಪಾಯಿ ಘೋಷಣೆಯಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣರವರು ಖುದ್ಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಮೂರು ದಿನದೊಳಗೆ ಪರಿಹಾರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆದರೀಗ ನೆರೆ ಬಂದು 20 ರಿಂದ 22 ದಿನ ಕಳೆದರೂ ಅರ್ಹ ಫಲಾನುಭವಿಗಳ ಖಾತೆಗೆ ಪರಿಹಾರ ಹಣವೇ ತಲುಪಿಲ್ಲ. ಅವರೆಲ್ಲರು ಪ್ರತಿನಿತ್ಯ ನಗರಸಭಾ ಸದಸ್ಯರು ಹಾಗೂ ರಾಜಕೀಯ ಮುಖಂಡರೊಂದಿಗೆ ಪರಿಹಾರ ಹಣಕ್ಕಾಗಿ ತಾಲೂಕು ಕಚೇರಿ ಹಾಗೂ ನಗರಸಭೆ ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ, ಮಳೆಯಿಂದ ಯಾವ ಹಾನಿಯಾಗದ ರೆಹಮಾನಿಯನಗರ (ಜನತಾಕಾಲೋನಿ)ದ ಸುಮಾರು 70 ಮಂದಿಯ ಖಾತೆಗೆ ತಲಾ 10 ಸಾವಿರ ರುಪಾಯಿನಂತೆ ಲಕ್ಷಾಂತರ ರುಪಾಯಿ ವರ್ಗಾವಣೆಯಾಗಿದೆ. ರೆಹಮಾನಿಯನಗರ ಮಾತ್ರವಲ್ಲದೆ ಸುತ್ತಮುತ್ತಲ ಬಡಾವಣೆಗಳ ಜನರ ಖಾತೆಗಳಿಗೂ ಹಣ ಜಮೆ ಆಗಿರುವ ದೂರುಗಳು ಕೇಳಿ ಬರುತ್ತಿವೆ.
ಅರ್ಕೇಶ್ವರ ಕಾಲೋನಿ ಒಂದರಲ್ಲಿಯೇ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕೇವಲ 3 - 4 ಮನೆಗಳಿಗೆ ಪರಿಹಾರ ಹಣ ದೊರಕಿದೆ. ಉಳಿದ ಮನೆಗಳ ಪರಿಹಾರ ಹಣದ ಬಗ್ಗೆ ಅಧಿಕಾರಿಗಳು ಯಾವ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಮಳೆ ಹಾನಿ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈವರೆಗೆ 2267 ಫಲಾನುಭವಿಗಳಿಗೆ 2.26 ಕೋಟಿ ಹಾಗೂ ಮನೆ ಹಾನಿ ಸಂಬಂಧ 1 ಕೋಟಿಗೂ ಹೆಚ್ಚಿನ ಪರಿಹಾರವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ.
ಫಲಾನುಭವಿಗಳ ಖಾತೆಗೆ ಹಣ ಕಳುಹಿಸಲು ಚೆಕ್ ನೀಡಲಾಗಿದೆ. ಅದೆಲ್ಲವೂ ಬ್ಯಾಂಕರ್ಸ್ ಬಳಿ ಇದೆ. ಆ ಹಣ ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ. ತಾಂತ್ರಿಕ ದೋಷದಿಂದ ಕೆಲ ಫಲಾನುಭವಿಗಳ ಖಾತೆಗೆ ಪರಿಹಾರ ಹಣ ತಲುಪಿಲ್ಲ. ತಾಂತ್ರಿಕ ದೋಷವನ್ನು ಸರಿಪಡಿಸಿ ಹಣ ವರ್ಗಾಯಿಸುವ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ರಾಮನಗರ: ವಯಸ್ಸಾಗಿದೆ ಎಷ್ಟು ಮಾತಾಡ್ತೀರ್ರಿ ಎಂದ ಶಾಸಕಿ ಅನಿತಾ ವಿರುದ್ಧ ನೆರೆ ಸಂತ್ರಸ್ತರು ಗರಂ
ಸಂತ್ರಸ್ತರು ಪರಿಹಾರ ಹಣ ಕೇಳಿಕೊಂಡು ನಗರಸಭೆ ಮತ್ತು ತಾಲೂಕು ಕಚೇರಿಗೆ ತೆರಳಿದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ರಾಜಕಾರಣಿಗಳು ಶಿಫಾರಸ್ಸು ಮಾಡುವವರಿಗೆ ಸುಲಭವಾಗಿ ಪರಿಹಾರ ತಲುಪುತ್ತಿದೆ. ಸಂತ್ರಸ್ತರ ಪೈಕಿ ಬಹುಪಾಲು ಜನರು ಪರಿಹಾರ ಹಣವನ್ನು ಎದುರು ನೋಡುತ್ತಿದ್ದಾರೆ.
ಲೋಕಾಯುಕ್ತಕ್ಕೆ ದೂರು
ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಗೋಲ್ಮಾಲ್ ನಡೆದಿದೆ. ಅರ್ಹರಿಗೆ ತಲುಪಬೇಕಾದ ಪರಿಹಾರ ಹಣ ಬೇರೆಯವರ ಪಾಲಾಗುತ್ತಿದೆ. ಇದರಲ್ಲಿ ತಾಲೂಕು ಕಚೇರಿ ಹಾಗೂ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪರಿಹಾರ ಹಣ ದುರುಪಯೋಗವಾಗಿರುವ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇವೆ. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಕೂಡಲೇ ಪರಿಹಾರ ಒದಗಿಸುವಂತೆ ಹೋರಾಟ ನಡೆಸುತ್ತೇವೆ
- ಕೊತ್ತೀಪುರ ಗೋವಿಂದರಾಜು, ಜಿಲ್ಲಾಧ್ಯಕ್ಷರು, ದಸಂಸ
ನೆರೆ ಸಂತ್ರಸ್ತ ಫಲಾನುಭವಿಗಳ ಖಾತೆಗೆ ನೇರವಾಗಿ ಆರ್ ಟಿಜಿಎಸ್ ಮೂಲಕ ಪರಿಹಾರ ಹಣ ವರ್ಗಾಯಿಸಲಾಗಿದೆ. ಈವರೆಗೆ 8 ಕಂತುಗಳಲ್ಲಿ 2267 ಫಲಾನುಭವಿಗಳಿಗೆ ತಲಾ 10 ಸಾವಿರ ರುಪಾಯಿ ಪರಿಹಾರ ಹಣ ತಲುಪಿಸಲಾಗಿದೆ. ಬ್ಯಾಂಕ್ ಅಕೌಂಟ್ ಮತ್ತು ಐಎಫ್ಸಿ ಕೋಡ್ ವ್ಯತ್ಯಾಸದಿಂದ ಹಣ ತಲುಪಿಲ್ಲ ಎಂದರೆ ಅದು ನಮ್ಮ ತಪ್ಪಲ್ಲ. ಆ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು.
- ವಿಜಯ್ ಕುಮಾರ್, ತಹಸೀಲ್ದಾರ್