Vijayapura: ಧರ್ಮ ಸಂಘರ್ಷದ ಮಧ್ಯೆ ಇಲ್ಲಿನ ಹಿಂದೂ ದೇವರಿಗೆ ಮುಸ್ಲಿಂ ಭಕ್ತರೇ ಬೇಕು..!

*  ಸಂಗಮೇಶ್ವರ ದೇವರ ತೇರಿಗೆ ಮುಸ್ಲಿಮರ ಎಣ್ಣೆ ಸೇವೆ
⦁  ಅವಟಿ ಕುಟುಂಬ ಎಣ್ಣೆ ಹಚ್ಚಿದ ಮೇಲೆಯೇ ನಡೆಯುತ್ತೆ ರಥೋತ್ಸವ
⦁  ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಮುದ್ದೇಬಿಹಾಳದ ಬಿರಕುಂದಿ ಜಾತ್ರೆ 
 

Communal Harmony in Hindu Fair at Muddebihal in Vijayapura grg

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಏ.12): ರಾಜ್ಯದಲ್ಲಿ ಧರ್ಮ ಸಂಘರ್ಷ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಕೆಲವೆಡೆ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ಬಾಯ್ಕಾಟ್ ಮಾಡಿದ್ದು ಆಗಿದೆ. ಧರ್ಮ ಸಂಘರ್ಷದ ಮಧ್ಯೆಯೂ ವಿಜಯಪುರ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ(Hindu-Muslim) ಸಾಮರಸ್ಯಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಹಿಂದೂ ದೇವರ ರಥಕ್ಕೆ ಮುಸ್ಲಿಂ ಕುಟುಂಬವೊಂದು ತಲೆತಲಾಂತರದಿಂದ ಎಣ್ಣೆ ಹಚ್ಚುವ ಸೇವಾ ಕಾರ್ಯ ಮಾಡ್ತಿದ್ದು, ಈ ವರ್ಷವೂ ಕೂಡ ಕಾರ್ಯವನ್ನ ನೆರವೇರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಪ್ರಜ್ಞೆಯಾಗಿ ನಿಂತಿದೆ.

Communal Harmony in Hindu Fair at Muddebihal in Vijayapura grg

ಜಾತ್ರಾಯ ತೇರಿಗೆ ಮುಸ್ಲಿಂರೇ ಮಾಡ್ತಾರೆ ಸಿದ್ಧತೆ..!

ವಿಜಯಪುರ(Vijayapura) ಜಿಲ್ಲೆಯ ಮುದ್ದೇಬಿಹಾಳ(Muddebihal) ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆಯೋ ಸಂಗಮೇಶ್ವರ, ಮಾರುತೇಶ್ವರ ಜಾತ್ರೆ ಭಾವೈಕ್ಯತೆ ಸಾಕ್ಷಿಯಾಗಲಿದೆ. ಏ.16ರಂದು ಸಂಗಮೇಶ್ವರ ರಥೋತ್ಸವ(Sangameshwara Fair), ಏ. 17ರಂದು ಮಾರುತೇಶ್ವರ ಸಾಂಪ್ರದಾಯಿಕ ಓಕುಳಿ ನಡೆಯುತ್ತೆ. ವಿಶೇಷ ಅಂದ್ರೆ ಸಂಗಮೇಶ್ವರ ತೇರಿಗೆ ಎಣ್ಣೆ ಹಚೋದೆ ಗ್ರಾಮದ ಅವಟಿ ಅನ್ನೋ ಮುಸ್ಲಿಂ ಕುಟುಂಬ. ಸಧ್ಯ ಬಿದರಕುಂದಿ ಗ್ರಾಮದಲ್ಲಿ ಸಂಗಮೇಶ್ವರನ ರಥೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು ಮುಸ್ಲಿಂ ಸಮುದಾಯದ ರಾಜೇಸಾಬ್‌ ತೇರಿಗೆ ಎಣ್ಣೆ ಹಚ್ಚುವ ಕಾರ್ಯ ಮಾಡ್ತಿದ್ದಾರೆ. ಈ ಮೂಲಕ ಮುಸ್ಲಿಮರೇ ರಥೋತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ.

ಪ್ರತಿಷ್ಠಿತ ಕಂಪನಿ ಹೆಸ್ರಲ್ಲಿ ವಂಚನೆಗೆ ಯತ್ನ: KIA ಕಾರ್‌ ಆಸೆಗೆ ಬಿದ್ರೆ ಹಣ್ಣ ಕಳ್ಕೋಳುದು ಗ್ಯಾರಂಟಿ..!

ಇಲ್ಲಿ ಮುಸ್ಲಿಮರೇ ಯಾಕೆ ತೇರಿಗೆ ಎಣ್ಣೆ ಹಚ್ಚೋದು?

ಪ್ರತಿ ವರ್ಷ ಏಪ್ರಿಲ್‌ ತಿಂಗಳು ಬರ್ತಿದ್ದಂತೆ ಬಿದರಕುಂದಿ ಗ್ರಾಮದಲ್ಲಿ ಜಾತ್ರೆಗೆ ಸಿದ್ಧತೆಗಳು ನಡೆಯುತ್ವೆ, ಜಾತ್ರೆಯ ಪ್ರಮುಖ ಆಕರ್ಷಣೆಯಾದ ತೇರು ಸಿದ್ಧತೆಯು ನಡೆಯುತ್ತಿದೆ. ಈ ಮಹತ್ವದ ಜವಾಬ್ದಾರಿ ಹಾಗೂ ಕರ್ತವ್ಯ ಗ್ರಾಮದ ಅವಟಿ ಮುಸ್ಲಿಂ ಕುಟುಂಬದ್ದು. ತಲೆತಲಾಂತರದಿಂದಲೇ ಈ ಪದ್ದತಿ ಗ್ರಾಮದಲ್ಲಿ ಜಾರಿಯಲ್ಲಿದೆ. ಅವಟಿ ಕುಟುಂಬಸ್ಥರು ತೇರು ಸಿದ್ಧತೆಯಲ್ಲಿ ತೊಡಗಿದ್ರೆ ಗ್ರಾಮದ ಹಿರಿಯರು ಎಣ್ಣೆ ತಂದು ಕೊಡುತ್ತಾರೆ. ಮುಸ್ಲಿಮ್ ಫ್ಯಾಮಿಲಿ ರಥಕ್ಕೆ ಭಕ್ತಿಭಾವಗಳಿಂದ ಎಣ್ಣೆ ಹಚ್ಚುತ್ತಾರೆ. ಜಾತ್ರೆಗೆ ಮುಸ್ಲಿಮರು ದೇಣಿಗೆ ಸಹ ಕೊಡುತ್ತಾರೆ. ನಮ್ಮ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭೇದಭಾವ ಇಲ್ಲ. ಒಗ್ಗಟ್ಟಿನಿಂದ ಎಲ್ಲರೂ ಸೇರಿ ಭಾವೈಕ್ಯತೆಯಿಂದ ಜಾತ್ರೆ ಮಾಡ್ತೀವಿ ಎನ್ನುತ್ತಾರೆ ಗ್ರಾಮದ ಹಿರಿಯರು.

Communal Harmony in Hindu Fair at Muddebihal in Vijayapura grg

ಬಿದರಕುಂದಿಯಲ್ಲಿ ಮುಸ್ಲಿಮರ ಸಂಖ್ಯೆ ಅಧಿಕ

ಬಿದರಕುಂದಿ ಗ್ರಾಮದಲ್ಲಿ ಆರರಲ್ಲಿ ಒಂದು ಭಾಗದಷ್ಟು ಮುಸ್ಲಿಮರ ಜನಸಂಖ್ಯೆ ಇದೆ. ಒಟ್ಟು ಗ್ರಾಮದ ಜನಸಾಂದ್ರತೆ 6 ಸಾವಿರ ಇದ್ದರೆ. ಮುಸ್ಲಿಮ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಸಾವಿರಕ್ಕೂ ಅಧಿಕ ಮುಸ್ಲಿಂರು ಈ ಗ್ರಾಮದಲ್ಲಿ(Village) ವಾಸವಿದ್ದಾರೆ. ದೇವರಿಗೆ ಸೇವಾಕಾರ್ಯ ನಡೆಸುವ ಅವಟಿ ಕುಟುಂಬವು ಈ ಗ್ರಾಮದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ.

ಕೋಮುವಾದಿಗಳ ಕಣ್ಣು ಬೀಳದಿರಲಿ

ಧರ್ಮ ಸಂಘರ್ಷ(Religious Conflict) ತಾರಕಕ್ಕೇರುತ್ತಿರೋ ಮಧ್ಯೆ ಹಿಂದೂ ಮುಸ್ಲಿಂರು ಸೇರಿ ಯಾವುದೇ ಜಾತಿ ಧರ್ಮ ಬೇಧ ಭಾವ ಇಲ್ಲದೇ ಭಾವೈಕ್ಯತೆಯಿಂದ ಜಾತ್ರೆ ಮಾಡ್ತಿರೋದು ವಿಶೇಷವಾಗಿದೆ. ಹಿಂದೂ ಮುಸ್ಲಿಂ ಅಣ್ಣತಮ್ಮಂದಿರಂತೆ ಇರುವ ಈ ಗ್ರಾಮದಲ್ಲಿ ಈ ವರೆಗೆ ಜಾತಿ ವೈಷಮ್ಯ ಅನ್ನೋದು ಇಲ್ಲವೇ ಇಲ್ಲ. ಕೋಮುವಾದಿಗಳ ಕಣ್ಣು ಈ ಗ್ರಾಮದ ಮೇಲೆ ಬೀಳದಿರಲಿ ಎನ್ನೋದು ಗ್ರಾಮದ ಹಿಂದೂ ಮುಸ್ಲಿಂ ಮುಖಂಡರ ಮನದಾಳದ ಮಾತಾಗಿದೆ. 
 

Latest Videos
Follow Us:
Download App:
  • android
  • ios