ಕೋಲಾರ(ಜು.29): ಕೋಲಾರ ನಗರದಲ್ಲಿ ದಿನೇ ದಿನೇ ಕರೋನಾ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಮಂಗಳವಾರ 172 ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ನಗರದ ಸರ್ಕಾರಿ ನೌಕರರಲ್ಲಿ ಕೂಡ ಕರೋನಾ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಇಲಾಖೆಯ ಕಚೇರಿಗಳಲ್ಲಿ ಕೆಲಸ ಮಾಡಲು ನೌಕರರು ಹಿಂಜರಿಯತ್ತಿದ್ದಾರೆ. ಕೋಲಾರ ಅಬಕಾರಿ ಕೇಂದ್ರ ಕಚೇರಿ, ನಗರಸಭೆ ಕಚೇರಿ ಹಾಗೂ ಗಲ್‌ ಪೇಟೆ ಪೊಲೀಸ್‌ ಠಾಣೆ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಅಬಕಾರಿ ಕಚೇರಿಯ ನಾಲ್ವರಿಗೆ ಕೊರೋನಾ ಸೋಂಕು ದೃಢವಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್‌, ಗಾರ್ಡ್‌, ಇಬ್ಬರು ಕಂಪ್ಯೂಟರ್‌ ಆಪರೇಟರ್‌ ಗೆ ಸೋಂಕು ತಗಲಿದೆ. ಇನ್ನೂ ನಗರಸಭೆ ಕಚೇರಿಯ ಪೌರಾಯುಕ್ತರು ಹಾಗೂ ಆತನ ಪತ್ನಿಗೆ ಪಾಸಿಟಿವ್‌ ಬಂದಿದ್ದು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರಸಭೆ ಆಯುಕ್ತರಿಗೆ ಸೋಂಕು ಹರಡಿರುವುದರಿಂದ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸಭೆಯಲ್ಲಿ ಪಾಲ್ಗೊಂಡವರಿಗೆ ಭೀತಿ

ಸೋಮವಾರ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ನಡೆದ ರಾಜ್ಯ ಸರ್ಕಾರದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪೌರಾಯಕ್ತರು ಭಾಗಿಯಾಗಿದ್ದರು. ಇತ್ತೀಚೆಗೆ ಆಯುಕ್ತರ ಹುಟ್ಟಹಬ್ಬವನ್ನೂ ನಗರಸಭೆ ಕಚೇರಿಯಲ್ಲಿ ನಡೆಸಲಾಗಿತ್ತು. ಇದರಿಂದಾಗಿ ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡವರು ಮತ್ತು ಜಿ.ಪಂ.ಸಭೆಯಲ್ಲಿ ಪಾಲ್ಗೊಂಡಿದ್ದವರಿಗೂ ಸೋಂಕು ಹರಡಿರಬಹುದು ಎಂಬ ಆತಂಕ ಉಂಟಾಗಿದೆ.

ಕೋಲಾರ ಗಲ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ. ಇನ್ನೂ ಸೊಂಕಿತರು ಪತ್ತೆಯಾಗಿರುವ ಅಬಕಾರಿ ಕಚೇರಿ, ನಗರಸಭೆ ಹಾಗೂ ಗಲ್‌ ಪೇಟೆ ಪೊಲೀಸ್‌ ಠಾಣೆಯನ್ನು ಸ್ಯಾನಿಟೈಸ್‌ ಮಾಡಿ 3 ದಿನ ಸೀಲ್‌ ಮಾಡಲಾಗಿದೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಸ್ವಾಮೀಜಿಯಿಂದ ಹೊಸ ಕಾಯಕಲ್ಪ

ಜಿಲ್ಲೆಯಲ್ಲಿ ಈವರೆಗೆ 1223 ಮಂದಿಗೆ ಸೋಂಕು ತಗುಲಿದ್ದು ಅದರಲ್ಲಿ 361 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. 839 ಮಂದಿ ಸಕ್ರಿಯ ಪ್ರಕರಣಗಳಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.