Asianet Suvarna News Asianet Suvarna News

Viral Fever: ರಾಜಧಾನಿಯ ಮಕ್ಕಳ ಬೆಂಬಿಡದೇ ಕಾಡುತ್ತಿದೆ ಶೀತ, ಜ್ವರ

ನಗರದಲ್ಲಿ ಜ್ವರ, ಶೀತ, ಕೆಮ್ಮು, ಕಫ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಅದರಲ್ಲಿಯೂ ಒಂದೆಡೆ ಕೋವಿಡ್‌ ಅಬ್ಬರ ಜೋರಾಗಿರುವ ವೇಳೆಯಲ್ಲೇ ಮಕ್ಕಳಲ್ಲಿ ಜ್ವರ, ಕೆಮ್ಮು ಕಾಣಿಸುತ್ತಿರುವುದು ಪೋಷಕರಲ್ಲಿ ಆತಂತಕಕ್ಕೆ ಕಾರಣವಾಗಿದೆ.

Cold and flu rise in childrens in Bangalore gvd
Author
Bangalore, First Published Jan 20, 2022, 4:00 AM IST

ಬೆಂಗಳೂರು (ಜ.20):  ನಗರದಲ್ಲಿ ಜ್ವರ, ಶೀತ, ಕೆಮ್ಮು, ಕಫ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಅದರಲ್ಲಿಯೂ ಒಂದೆಡೆ ಕೋವಿಡ್‌ (Covid19) ಅಬ್ಬರ ಜೋರಾಗಿರುವ ವೇಳೆಯಲ್ಲೇ ಮಕ್ಕಳಲ್ಲಿ ಜ್ವರ (Fever), ಕೆಮ್ಮು (Cough) ಕಾಣಿಸುತ್ತಿರುವುದು ಪೋಷಕರಲ್ಲಿ ಆತಂತಕಕ್ಕೆ ಕಾರಣವಾಗಿದೆ. ಆದರೆ, ಇದು ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ನಗರದ ಬಹುತೇಕ ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಜ್ವರ, ಶೀತದ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. 

ಕೋವಿಡ್‌-19ರ ಲಕ್ಷಣಗಳಿಗೂ ಮಕ್ಕಳಲ್ಲಿ ಕಂಡು ಬರುತ್ತಿರುವ ಪ್ರಕರಣಗಳಿಗೂ ಸಾಮ್ಯತೆ ಇರುವುದರಿಂದ ಬಹುತೇಕ ಪೋಷಕರು ಮಕ್ಕಳಿಗೆ ಕೋವಿಡ್‌ ಬಂದಿದೆ ಎಂದೇ ಭಾವಿಸಿ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಮಳೆಗಾಲದಲ್ಲಿ ಹೇಗೆ ಸೊಳ್ಳೆ ಆಧಾರಿತ ಕಾಯಿಲೆಗಳಾದ ಮಲೇರಿಯಾ, ಚಿಕುನ್‌ ಗುನ್ಯಾ, ಡೆಂಘೀ ಕಾಟ ಕೊಡುತ್ತದೆಯೋ ಅದೇ ರೀತಿ ಚಳಿಗಾಲದ ಅವಧಿಯಾದ ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿಯಲ್ಲಿ ವೈರಲ್‌ ಸಮಸ್ಯೆ ಹೆಚ್ಚು ತೊಂದರೆ ಕೊಡುತ್ತದೆ. 

ಶೀತ ಗಾಳಿ ಬೀಸುತ್ತಿರುವುದರಿಂದ ಮಕ್ಕಳಲ್ಲಿ ವೈರಲ್‌ ಫ್ಲೂ, ಶೀತ, ತಲೆನೋವು, ಕೆಮ್ಮು, ಮೈಕೈನೋವು, ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಪ್ರತಿವರ್ಷವೂ ಈ ಅವಧಿಯಲ್ಲಿ ಇಂತಹ ಸಮಸ್ಯೆ ವರದಿ ಆಗುತ್ತದೆ. ಆದರೆ ಈ ಬಾರಿ ಇದೇ ಅವಧಿಯಲ್ಲಿ ಕೊರೋನಾ ಸಹ ಅಬ್ಬರಿಸುತ್ತಿರುವುದು ಮತ್ತು ಋುತುಮಾನ ಆಧಾರಿತ ಜ್ವರಕ್ಕೂ ಕೋವಿಡ್‌ನ ಲಕ್ಷಣಗಳಿಗೂ ಹೋಲಿಕೆ ಇರುವುದರಿಂದ ಸಹಜವಾಗಿ ಜನರಲ್ಲಿ ಹೆಚ್ಚಿನ ಆತಂಕ ಕಾಣುತ್ತಿದೆ ಎಂದು ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹೇಳುತ್ತಾರೆ.

Bengaluru Covid 19 Guidelines: ನಗರದಲ್ಲಿ ಮಾಸಾಂತ್ಯವರೆಗೂ ನಿಷೇಧಾಜ್ಞೆ ಜಾರಿ!

ಈ ಬಾರಿ ಮಕ್ಕಳು ಕೋವಿಡ್‌ ಲಸಿಕೆಯನ್ನು ಕೂಡ ಪಡೆದಿದ್ದಾರೆ. ಲಸಿಕೆ ಪಡೆದವರಲ್ಲಿ ಜ್ವರ ಬರುವುದು ಸಾಮಾನ್ಯ. ಅದರಂತೆ ಕೆಲ ಮಕ್ಕಳಲ್ಲಿ ಲಸಿಕೆ ಪಡೆದ ಬಳಿಕ ಜ್ವರ ಬರುತ್ತಿದೆ. ಈ ಜ್ವರ ಎರಡ್ಮೂರು ದಿನದಲ್ಲಿ ಕಡಿಮೆ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಹೆಚ್ಚಾಗುತ್ತಿರುವ ಮಕ್ಕಳ ಸಂಖ್ಯೆ: ಕೆ.ಸಿ.ಜನರಲ್‌ ಆಸ್ಪತ್ರೆಯ ಮಕ್ಕಳ ತಜ್ಞ ಲಕ್ಷ್ಮೇಪತಿ ಪ್ರಕಾರ, ಸದ್ಯ ಹತ್ತರಿಂದ ಹದಿನೈದು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೊರ ರೋಗಿ ವಿಭಾಗದಲ್ಲಿ 50ಕ್ಕೂ ಹೆಚ್ಚು ಔಷಧಿ ಪಡೆದು ಮನೆಯಲ್ಲಿ ಆರೈಕೆಗೆ ಒಳಗಾಗಿದ್ದಾರೆ ಎಂದು ಹೇಳುತ್ತಾರೆ.

Covid Self Test Kit: ಕೊರೋನಾ ಸ್ವ ಪರೀಕ್ಷಾ ಕಿಟ್‌ ಖರೀದಿಗೆ ಹೆಸರು, ವಿಳಾಸ ಕಡ್ಡಾಯ!

ಆಸ್ಪತ್ರೆಯಲ್ಲಿ ದಾಖಲಾದರೆ ಕೋವಿಡ್‌ ಬರಬಹುದು ಎಂಬ ಭಯದಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಮಕ್ಕಳು ಕೋವಿಡ್‌ ಪರೀಕ್ಷೆಗೆ ಒಳಗಾಗುತ್ತಾರೆ. ಕೋವಿಡ್‌ ಪರೀಕ್ಷೆಯ ವರದಿ ಇಲ್ಲದಿದ್ದರೂ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುವ ಬದಲಿಗೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಬೇಕು. ಸಾಮಾನ್ಯ ಶೀತ, ಜ್ವರಕ್ಕೆ ಭಯ ಪಡುವ ಅಗತ್ಯವಿಲ್ಲ. ಮೂರ್ನಾಲ್ಕು ದಿನದಲ್ಲಿ ಕಾಯಿಲೆ ವಾಸಿ ಆಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ರಕ್ಷಣೆ ಹೇಗೆ
* ದೇಹವನ್ನು ಬೆಚ್ಚಗಿಡಬೇಕು. ಗಾಳಿಯಲ್ಲಿ ತಿರುಗಾಡಬಾರದು.
* ಬೆಚ್ಚಗಿನ ಆಹಾರ, ಪಾನೀಯ ಸೇವಿಸಬೇಕು.
* ದಪ್ಪನೆಯ, ಉದ್ದನೆಯ ಬಟ್ಟೆಧರಿಸಬೇಕು.
* ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು.
* ಮಾಸ್ಕ್‌ ಧರಿಸಿಬೇಕು.
* ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು.
* ಜನನಿಬಿಡ ಜಾಗಗಳಲ್ಲಿ ಓಡಾಟ ಕಡಿಮೆ ಮಾಡಬೇಕು.
* ಸತತ ಮೂರು ದಿನ 99 ಡಿಗ್ರಿಗಿಂತ ಹೆಚ್ಚು ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
* ಉಸಿರಾಟದ ತೊಂದರೆ ಇದ್ದರೆ ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು.

Follow Us:
Download App:
  • android
  • ios