Asianet Suvarna News Asianet Suvarna News

ಕಾಫಿನಾಡಲ್ಲಿ 2 ವರ್ಷಗಳ ನಂತರ ಮತ್ತೆ ಕಳೆಕಟ್ಟಿದ ಹಬ್ಬ: ಗಣೇಶೋತ್ಸವಕ್ಕೆ ಭರ್ಜರಿ ತಯಾರಿ

ಎರಡು ವರ್ಷಗಳ ನಂತರ ಕಾಫಿನಾಡು ಚಿಕ್ಕಮಗಳೂರಲ್ಲಿ ಈಗ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. 

coffee valley chikmagalur gets ready for Ganesh festival akb
Author
First Published Aug 29, 2022, 4:57 PM IST

ಚಿಕ್ಕಮಗಳೂರು: ವಿಘ್ನನಿವಾರಕ ವಿನಾಯಕನ ಸ್ವಾಗತಕ್ಕೆ ಕಾಫಿನಾಡು ಸಜ್ಜಾಗುತ್ತಿದೆ. ಸಂಭ್ರಮದ ಸಾಂಪ್ರದಾಯಿಕ ಆಚರಣೆಗೆ ಎಲ್ಲೆಡೆ ಕೊನೆ ಕ್ಷಣದ ಸಿದ್ಧತೆಗಳು ನಡೆದಿದೆ. ಹೆಚ್ಚು ಮಳೆ ಸುರಿದು ಒಂದಷ್ಟು ನಷ್ಟ ಸಂಭವಿಸಿದ್ದರೂ ಕೆರೆ ಕಟ್ಟೆಗಳು, ಜಲಾಶಯಗಳೆಲ್ಲವೂ ಭರ್ತಿಯಾಗಿ ನೀರಿನ ಬರ ನೀಗಿಸಿದೆ. ಸದಾ ಅನಾವೃಷ್ಠಿಯ ಹಣೆಪಟ್ಟಿ ಹಚ್ಚಿಕೊಂಡಿರುತ್ತಿದ್ದ ಜಿಲ್ಲೆಯ ಬಯಲು ತಾಲೂಕುಗಳಲ್ಲೂ ಈ ಬಾರಿ ಉತ್ತಮ ಮಳೆಯಾಗಿರುವುದು, ಕುಡಿಯುವ ನೀರಿನ ಬವಣೆ ತಪ್ಪಿರುವ ಕಾರಣಕ್ಕೆ ತುಸು ನೆಮ್ಮದಿಯಿಂದ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಸಿದೆ.

ಸಂಭ್ರಮ ಇಮ್ಮಡಿ

ಕೊರೋನಾ ಮಹಾಮಾರಿ ಆವರಿಸಿಕೊಂಡ ನಂತರದ ಗಣೇಶೋತ್ಸವದ ಪೈಕಿ ಈ ವರ್ಷ ಸೋಂಕು ಮುಕ್ತ ವಾತಾವರಣದಲ್ಲಿ ಎಲ್ಲರೂ ಮುಕ್ತವಾಗಿ ಹಬ್ಬವನ್ನಾಚರಿಸುವ ಸುಯೋಗ ಒದಗಿ ಬಂದಿದೆ. ಇದು ಸಹ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಮತ್ತೆ ಕಳೆಕಟ್ಟಲಿರುವ ಉತ್ಸವ

ಕಳೆದ ಮೂರು ವರ್ಷಗಳಿಗೆ ಹೋಲಿಸಿದಲ್ಲಿ ಹಬ್ಬದ ವಾತಾವರಣ ಸಹಜತೆಯತ್ತ ಹೊರಳಿದೆ. ಮನೆ ಮನೆಗಳಲ್ಲಿ ಗೌರಿ ಗಣೇಶನನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವಗಳು, ಸಂಘ, ಸಂಸ್ಥೆಗಳಿಂದ ನಡೆಯುವ ಉತ್ಸವಗಳು ಈ ಬಾರಿ ಕಳೆಕಟ್ಟಲಿದೆ. ನಗರದ ಕೆಲವಡೆ ಹಬ್ಬಕ್ಕೆ ನಾಲ್ಕೈದು ದಿನಗಳ ಮೊದಲೇ ಅಲಂಕಾರ ಕಾರ್ಯಗಳು ಭರದಿಂದ ಸಾಗಿವೆ. ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಪಡೆದು ಪೆಂಡಾಲ್‌ಗಳನ್ನು ನಿರ್ಮಿಸಲಾಗುತ್ತಿದೆ.

Ganesh Chaturthi 2022; ಭಾರೀ ಬಂದೋಬಸ್ತ್, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
 
ಮೂರ್ತಿ ತಯಾರಕಲ್ಲಿ ಹರ್ಷ 

ಹಬ್ಬಕ್ಕೆ ಸಹಜತೆಯ ಮೆರುಗು ಮರುಕಳಿಸಿರುವುದು ಗಣೇಶ ಮೂರ್ತಿಗಳ ತಯಾರಕರಲ್ಲೂ ಸಂತಸ ಮೂಡಿಸಿದೆ. ಕಳೆದ ಮೂರು ವರ್ಷಗಳ ನಂತರ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ನಗರದ ಕುಂಬಾರ ಬೀದಿ ಬಡಾವಣೆಯ ಮೂರ್ತಿ ತಯಾರಕ ಸಣ್ಣಪ್ಪ. ಮೂರ್ತಿ ತಯಾರಕರಲ್ಲಿ ಈ ಬಾರಿ ಉತ್ಸಾಹ, ಲವಲವಿಕೆ ಮರುಕಳಿಸಿದೆ. ವಿವಿಧ ಗಾತ್ರ, ಭಂಗಿಗಳ ಆಕರ್ಷಕ ಗಣಪನ ಮೂರ್ತಿಗಳು ಗಮನ ಸೆಳೆಯುತ್ತಿವೆ. ಬಡಾವಣೆಯ ಏಳೆಂಟು ಮನೆಗಳಲ್ಲಿ ಈ ಸಾಂಪ್ರದಾಯಿಕ ಕಸುಬು ಇನ್ನೂ ಮುಂದುವರಿದಿದ್ದು, ನೂರಾರು ಗಣಪನ ಮೂರ್ತಿಗಳು ತಯಾರಿಸಲ್ಪಟ್ಟಿದ್ದು, ಪೂಜೆ, ನೈವೇದ್ಯ ಸ್ವೀಕರಿಸಲು ಸಿದ್ಧವಾಗಿವೆ.

ಪ್ರೀತಿ-ವಿಶ್ವಾಸ ಬೆಸೆವ ಗಣಪ

ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪ ಎಂದರೆ ತುಂಬಾ ಪ್ರಸಿದ್ಧಿ ಅದನ್ನು 50 ವರ್ಷಗಳ ಹಿಂದೆ ಕುಂಬಾರ ಬೀದಿಯ ಸಿದ್ದಲಿಂಗಪ್ಪ ಅವರು ತಯಾರಿಸುತ್ತಿದ್ದರು. ನಂತರ ಬಿ.ಎಸ್.ಸಣ್ಣಪ್ಪ ಅವರು ಹಲವು ವರ್ಷ ಮೂರ್ತಿ ತಯಾರಿಸಿದ್ದರು. ಇತ್ತೀಚಿನ ಹಲವು ವರ್ಷಗಳಿಂದ ಅವರದ್ದೇ ಕುಟುಂಬದ ಏಕಾಂತರಾಮು ಅವರು ದೊಡ್ಡ ಗಣಪತಿಯನ್ನು ತಯಾರಿಸುತ್ತಿದ್ದಾರೆ.

ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಈದ್ಗಾದಲ್ಲಿ ಗಣೇಶೋತ್ಸವ ಬಹುತೇಕ ಖಚಿತ

ಹಿಂದೂ ಮಹಾ ಸಭಾದ ಸಂಭ್ರಮದ ಉತ್ಸವ

ನಗರದ ಬಸವನಹಳ್ಳಿ ಶ್ರೀ ಓಂಕಾರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾ ಸಭಾದ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲಗಂಗಾಧರ ನಾಥ ತಿಲಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲಂಕಾರದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ವರ್ಷ ಒಂದೊಂದು ಕಲ್ಪನೆಯ ಕಲಾಕೃತಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಬಾರಿ ಹಿಮಾವೃತ ಕೈಲಾಸ ಪರ್ವತದ ಆಕೃತಿ ನಿರ್ಮಾಣ ಮಾಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಸಮಿತಿಯ ನಯನ್ ಗೌಡ ತಿಳಿಸಿದರು.

Follow Us:
Download App:
  • android
  • ios