ಕಾರವಾರ [ಜ.14]:  ಈರುಳ್ಳಿ ಬೆಲೆ ಇಳಿಯುತ್ತಿದೆ. ಈಗ ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಕೃಷಿಕರಲ್ಲಿ ಮಾರಾಟಕ್ಕೆ ತೆಂಗಿನಕಾಯಿಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿ ಬೆಲೆ 35 ರಿಂದ 40 ರು.ಗೆ ಏರಿದೆ. 

ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಈ ಬಾರಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೃಷಿಕರಿಂದ ಪ್ರತಿ ಕಿಗ್ರಾಂಗೆ 32 ರಿಂದ 35 ರು. ದರದಲ್ಲಿ ತೆಂಗಿನಕಾಯಿ ಖರೀದಿಸಲಾಗುತ್ತಿದೆ. ಅದನ್ನು ಕಿಗ್ರಾಂಗೆ 40 ರು. ತನಕ ಮಾರಾಟ ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ತೆಂಗಿನಕಾಯಿಯನ್ನು ಕಿಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುವುದು ತುಂಬ ಕಡಿಮೆ. ಕೊಳ್ಳುವಾಗಲಷ್ಟೇ ಕಿಗ್ರಾಂ ಲೆಕ್ಕದಲ್ಲಿ ಕೊಳ್ಳುತ್ತಾರೆ. 800 ಗ್ರಾಂ ತೂಗುವ ತೆಂಗಿನಕಾಯಿಯನ್ನು 35 ಕ್ಕೆ, 1  ಕಿಗ್ರಾಂ ತೂಗುವ ಕಾಯಿಗೆ 40 ದರ ಹೇಳುತ್ತಿದ್ದಾರೆ. ಚಿಕ್ಕ ಚಿಕ್ಕ ತೆಂಗಿನಕಾಯಿ ಕೂಡ 15 ರಿಂದ 20 ರು.ಗೆ ಮಾರಾಟವಾಗುತ್ತಿದೆ. ಗ್ರಾಹಕರು ತೆಂಗಿನಕಾಯಿಯ ದರವನ್ನು ಕೇಳಿ ಹೌಹಾರುತ್ತಿದ್ದಾರೆ.

ತೆಂಗು ಬೆಳೆಗಾರರು ವಿವಿಧ ಕಾರಣಗಳಿಂದ ಹೈರಾಣಾಗಿದ್ದಾರೆ. ಕಳೆದ ಬೇಸಿಗೆಯಲ್ಲಿ ನೀರಿಗೆ ತೀವ್ರ ಬರ, ನಂತರ ಭಾರಿ ಮಳೆ, ಮಂಗನ ಕಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಗಳನ್ನು ಓಡಿಸಲು ನಡೆಸುವ ಪ್ರಯತ್ನಗಳೆಲ್ಲ ವಿಫಲವಾಗುತ್ತಿವೆ. ಮಂಗಳಗಳ ಪಡೆ ತೆಂಗಿನ ತೋಟಕ್ಕೆ ದಾಳಿ ಇಟ್ಟರೆ ಸಾಕು ತೆಂಗಿನ ಬೆಳೆ ನಾಶವಾಗಿಬಿಡುತ್ತದೆ. ಇನ್ನು ಕುಶಲ ಕಾರ್ಮಿಕರ ಅಭಾವ ಕೃಷಿಕರನ್ನು ಕಾಡುತ್ತಿದೆ. 

ತೆಂಗಿನಕಾಯಿ ತೆಗೆಯಲು ಕಾರ್ಮಿಕರೆ ಸಿಗುತ್ತಿಲ್ಲ. ಸಿಕ್ಕರೂ ಹೆಚ್ಚು ಹಣ ನೀಡಬೇಕು. ಹೀಗಾಗಿ ಹಲವರು ಅನಿವಾರ್ಯವಾಗಿ ತೆಂಗಿನಕಾಯಿ ಕೊಯ್ಲನ್ನೇ ಬಂದ್ ಮಾಡಿದ್ದಾರೆ. ಒಣಗಿ ನೆಲಕ್ಕುರುಳಿದ ಕಾಯಿಯನ್ನು ಹೆಕ್ಕುವುದನ್ನೆ ರೂಢಿ ಮಾಡಿಕೊಂಡಿದ್ದಾರೆ. 

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!..

ಹಾಗಂತ ತೆಂಗು ಬೆಳೆಗಾರರಿಗೆ ಈ ಲಾಭ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿಲ್ಲ. ಏಕೆಂದರೆ ಬಹುತೇಕ ಬೆಳೆಗಾರರಲ್ಲಿ ಮಾರಾಟಕ್ಕೆ ತೆಂಗಿನಕಾಯಿ ಇಲ್ಲ. ಕೆಲವು ಬೆಳೆಗಾರರು ತೆಂಗಿನಕಾಯಿ ಖರೀದಿಸುವ ಹಂತಕ್ಕೆ ತಲುಪಿದ್ದಾರೆ. ಕೆಲವರು ಖರೀದಿಸುತ್ತಿದ್ದಾರೆ. ತೆಂಗಿನಕಾಯಿಯ ಅಭಾವವೇ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. 

ಮಾರುಕಟ್ಟೆ ತಜ್ಞರ ಪ್ರಕಾರ ತೆಂಗಿನಕಾಯಿ ಬೆಲೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಕಳೆದ ಎರಡು ಮೂರು ವಾರಗಳಿಂದ ಬೆಲೆ ಹೆಚ್ಚುತ್ತಲೇ ಇದೆ. ಗ್ರಾಹಕರಿಗೆ ತೆಂಗಿನಕಾಯಿ ಖರೀದಿಸುವುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ.