ಉತ್ತರಕನ್ನಡ(ನ.24): ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈಗಾಗಲೇ ಗೆದ್ದಾಗಿದೆ. ಆದರೆ, ಭಾರೀ  ಅಂತರದ ಗೆಲುವು ಪಡೆದುಕೊಳ್ಳಲು ಶ್ರಮ ಪಡುತ್ತಿದ್ದೇವೆ. ರಾಜ್ಯದಲ್ಲಿ ಹದಿನೈದು ಕ್ಷೇತ್ರದಲ್ಲೂ ದೊಡ್ಡ ಅಂತರದಿಂದ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 

ಭಾನುವಾರ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬನವಾಸಿ ಪಟ್ಟಣದ ಸರಕಾರಿ ಶಾಲೆಯ ಬಳಿಯ ಜಯಂತಿ ಮೈದಾನದಲ್ಲಿ ಉಪಚುನಾವಣೆ ಪ್ರಚಾರ ಸಭೆಯನ್ನು‌‌ ದೀಪ ಬೆಳಗಿಸುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದಾರೆ. 
ಬಳಿಕ ಮಾತನಾಡಿದ ಸಿಎಂ‌, ಲೋಕಸಭಾ ಚುನಾವಣೆಯಲ್ಲಿ 21-22 ಸೀಟು ಗೆಲ್ಲುತ್ತೇವೆ ಎಂದಾಗ ಕಾಂಗ್ರೆಸ್- ಜೆಡಿಎಸ್ ನವರು ತಮಾಷೆ ಮಾಡಿದ್ರು, ಆದರೆ ಲೋಕಸಭೆಯಲ್ಲಿ 25-26 ಸೀಟನ್ನು ಗೆದ್ದೆವು. ಈ ಬಾರಿ ಹದಿನೈದು ಸೀಟು ಗೆದ್ದು ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡುವ ಸಂಕಲ್ಪ ಮಾಡಿದ್ದೇವೆ. ಸರಕಾರ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ಧಿ ವಿಶೇಷ ಕಾರ್ಯಕ್ರಮ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೆಬ್ಬಾರ್ ರೀತಿ 17 ಶಾಸಕರು ರಾಜಿನಾಮೆ ಕೊಡದೇ ಇದ್ದರೆ ಇಂದು ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾನು ಕೂಡಾ ಮುಖ್ಯಮಂತ್ರಿ ಆಗುತ್ತಿರಲಿಲ್ಲ, ಎಲ್ಲಾ ಶಾಸಕರು ಸರ್ಕಾರದ ಆಡಳಿತ ಬೇಸತ್ತು ರಾಜೀನಾಮೆ ಕೊಟ್ಟಿದ್ದರಿಂದ ಬದಲಾವಣೆ ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ಶಿವರಾಮ್ ಹೆಬ್ಬಾರ್ ಸಹ ಈ ಬಾರಿ ಗೆದ್ದು ಸಚಿವರಾಗಲಿದ್ದಾರೆ. ಶಾಸಕರನ್ನು ಹಣಕೊಟ್ಟು ಖರೀದಿಸಿದ್ದಾರೆಂದು ನನ್ನ ವಿರುದ್ಧ ಸಿದ್ಧರಾಮಯ್ಯ ಮಾಡಿರುವ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ನವರಿಗೆ ಸೋಲು ನಿಶ್ಚಿತ ಎಂದು ಸ್ಪಷ್ಟವಾಗಿದೆ. ಮಾಜಿ‌ ಸಿಎಂ ಆಗಿ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಆಧಾರ ರಹಿತ ಆರೋಪ ಮಾಡೋದು ಸರಿಯಲ್ಲ. ಇದರಿಂದ ಜನ ಅವರಿಗೆ ಏನೆಂದು ಉತ್ತರ ಕೊಡುತ್ತಾರೆಂದು ಅವರಿಗೆ ತಿಳಿದಿದೆ. ನಾನು ಈಗ ಉತ್ತರ ಕೊಡುವುದಿಲ್ಲ ಡಿಸೆಂಬರ್ 9 ರಂದು ಫಲಿತಾಂಶದಲ್ಲಿ ಜನರೇ ಉತ್ತರ ಕೊಡ್ತಾರೆ. ಸಿದ್ದರಾಮಯ್ಯನವರು ಹಗುರವಾಗಿ ಮಾತಾಡೋದು ಅವರ ಯೋಗ್ಯತೆಗೆ ಸರಿಯಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಮಾತನಾಡಿದ ಶಿವರಾಮ ಹೆಬ್ಬಾರ್ ಅವರು, ಕಾಂಗ್ರೆಸ್‌ನವರು ನಮಗೆ ತೊಂದರೆ ನೀಡಲು ಪ್ರಯತ್ನ ಪಡ್ತಾನೆ ಇದ್ರು, ಆದರೆ, ಜನರ, ಕಾರ್ಯಕರ್ತರ ಬೆಂಬಲದಿಂದಾಗಿ ಮುಂದುವರಿಯಲು ಸಾಧ್ಯವಾಗಿದೆ. ಬನವಾಸಿಯನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸ್ತೇವೆ ಎಂದು ಕಾಂಗ್ರೆಸಿನವರು ಆರೋಪ ಮಾಡ್ತಿದ್ದರು. ಆದರೆ,‌ಇಂತಹ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ. 

ಬನವಾಸಿ ತಾಲೂಕು ಕೇಂದ್ರವಾಗಲು ಬೇಡಿಕೆಯಿದ್ದು, ಈ ಸಂಬಂಧ ಅಭಿವೃದ್ಧಿ ಪ್ರಾಧಿಕಾರ ನಡೆಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಯಡಿಯೂರಪ್ಪನವರು 350 ಕೋಟಿ ರೂ.ಗಿಂತಲೂ ಹೆಚ್ಚು ಅನುದಾನ ಒದಗಿಸಿದ್ದಾರೆ. ಕ್ಷೇತ್ರದ ಪ್ರಗತಿಗೆ ಸಿಎಂರನ್ನು ನಂಬಿ ಬಂದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ‌ ನೀಡಬೇಕಿದೆ ಎಂದು ಹೇಳಿದ್ದಾರೆ. 

ಸುವರ್ಣ ನ್ಯೂಸ್ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ https://bit.ly/32JJ0DE ಕ್ಲಿಕ್ ಮಾಡಿ