Asianet Suvarna News Asianet Suvarna News

ಡಿ.16 ರಂದು ಧಾರವಾಡಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ: ಭರದಿಂದ ಸಾಗಿದ ಸಿದ್ಧತಾ ಕಾರ್ಯ

ಡಿ. 16 ರಂದು ಸಂಜೆ 6 ಗಂಟೆಗೆ ಕೆಸಿಡಿ ಮೈದಾನದಲ್ಲಿ ಧಾರವಾಡ ಜಿಲ್ಲೆಯ ವಿಶೇಷ ಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಹಾಗೂ ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah Will be Come to Dharwad on Dec 16th grg
Author
First Published Dec 13, 2023, 8:04 PM IST

ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಡಿ.13):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಡಿಸೆಂಬರ್ 16 ರಂದು ಧಾರವಾಡಕ್ಕೆ ಆಗಮಿಸಿ ಸಂಜೆ ಕಾರ್ಮಿಕ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕೆಸಿಡಿ ಮೈದಾನದಲ್ಲಿ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿದೆ. ಈಗಾಗಲೇ ತ್ರಿಚಕ್ರ ವಾಹನಗಳು ಕೆಸಿಡಿ ಮೈದಾನದಲ್ಲಿ ಇರಿಸಲಾಗಿದ್ದು, ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.

ಈ ಕುರಿತು ಜಿಲ್ಲಾ ಉಸ್ತವಾರಿ ಸಚಿವರಾದ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈಗಾಗಲೇ ಅಧಿಕಾರಿಗಳ ಸಭೆ ನಡಸಿ ಕಾರ್ಯಕ್ರಮದ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ. ಹಾಗೂ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎನ್ ಕಾರ್ಮಿಕ ಅಧಿಕಾರಿಗಳು, ಅಂಗವಿಕಲ ಕಲ್ಯಾಣಾಧಿಕಾರಿಗಳು, ಕೆಸಿಡಿ ಮೈದಾನದಲ್ಲಿ ಬೀಡು ಬಿಟ್ಟಿದ್ದು, ಕಾರ್ಯಕ್ರಮದ ಸಿದ್ಧತೆಯಲ್ಲಿದ್ದಾರೆ.   

ಸರ್ಕಾರ ಅಭದ್ರಗೊಳಿಸುವುದು ಯಾವ ಪುರುಷಾರ್ಥಕ್ಕೆ?: ಎಚ್‌ಡಿಕೆಗೆ ಎಚ್‌.ಕೆ. ಪಾಟೀಲ ಪ್ರಶ್ನೆ

ಡಿಸೆಂಬರ್ 16 ರಂದು ಸಂಜೆ 6 ಗಂಟೆಗೆ ಕೆಸಿಡಿ ಮೈದಾನದಲ್ಲಿ ಧಾರವಾಡ ಜಿಲ್ಲೆಯ ವಿಶೇಷ ಚೇತನರಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನಗಳ ವಿತರಣೆ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಹಾಗೂ ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. 126 ವಿವಿಧ ಕಂಪನಿಗಳು ತಮ್ಮ ಸಿಎಸ್‍ಆರ್ ಅನುದಾನದಡಿ 525 ತ್ರಿಚಕ್ರ ವಾಹನ ಹಾಗೂ ಸಂತೋಷ್ ಲಾಡ್ ಫೌಂಡೇಶನ್‍ನಿಂದ 25 ವಾಹನಗಳನ್ನು ವಿತರಿಸಲಾಗುತ್ತಿದೆ. ತ್ರಿಚಕ್ರ ವಾಹನ ಪ್ರಾಯೋಜಿಸಿದ ಕಂಪನಿಗಳ ಪ್ರತಿನಿಧಿಗಳಿಗೂ ಸಹ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಗೌರವ ಸಮರ್ಪಿಸಲಾಗುವುದು.

ಕಾರ್ಮಿಕ ಇಲಾಖೆಯಿಂದ ಕಂಪನಿಗಳ ಸಿಎಸ್‍ಆರ್ ಅನುದಾನ ಪ್ರಾಯೋಜಕತ್ವದಡಿ ವಿಶೇಷ ಚೇತನರಿಗೆ ಒಂದೇ ವೇದಿಕೆಯಲ್ಲಿ 550 ತ್ರಿಚಕ್ರ ವಾಹನಗಳನ್ನು ನೀಡುತ್ತಿರುವುದು ಇತಿಹಾಸದಲ್ಲೇ ಇದೇ ಪ್ರಥಮ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 250 ಲ್ಯಾಪ್‍ಟ್ಯಾಪ್‍ಗಳನ್ನು ವಿತರಿಸಲಾಗುವುದು . 3 ಲಕ್ಷ ಕಾರ್ಮಿಕರಿಗೆ ವಿಮೆ ಸೌಲಭ್ಯ : ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್‍ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್‍ಕಾರ್ಟ್, ಬಿಗ್‍ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ನಂತ ಮುಂತಾದ ಸಂಸ್ಥೆಗಳಲ್ಲಿ  ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೂ ಸರ್ಕಾರ ವಿಮೆ ಘೋಷಿಸಿದೆ. ವಿವಿಧ ಕಂಪನಿಗಳ ಡಿಲೇವರಿ ಕಾರ್ಮಿಕರಾಗಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ 2 ಲಕ್ಷ ಅಪಘಾತ ವಿಮೆ ಹಾಗೂ 2 ಲಕ್ಷ ಜೀವವಿಮೆಯನ್ನು ಸರ್ಕಾರವು ಇತ್ತಿಚಿಗೆ ಘೋಷಿಸಿದ್ದು, ಇಂತಹ ಗಿಗ್ ಕಾರ್ಮಿಕರ ನೋಂದಣಿ ಹಾಗೂ ಗುರುತಿನ ಚೀಟಿ ವಿತರಣೆಯ ಕಾರ್ಯಕ್ರಮವು ಈ ವೇದಿಕೆಯಲ್ಲಿ ಜರುಗಲಿವೆ.

ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಸುಮಾರು 3 ಲಕ್ಷದಷ್ಟು ಇದ್ದಾರೆ. ಈ ಕಾರ್ಮಿಕರು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ್ದು, ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಅಪಘಾತದಿಂದ ಮರಣ, ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಬಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಗಿಗ್ ಕಾರ್ಮಿಕರು, ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ಸೂಕ್ತ ವಿಮಾ ಸೌಲಭ್ಯ ಒದಗಿಸುವ ಮೂಲಕ ಸಂಕಷ್ಟದಿಂದ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. 

ಅನ್ಯ ಧರ್ಮೀಯರ ವ್ಯಾಪಾರ ನಿಷೇಧ ಕೂಗು ಮತ್ತೆ ಜೋರು!

45 ಸಾವಿರ ಪತ್ರಿಕಾ ವಿತರಕರಿಗೆ ವಿಮಾ ಯೋಜನೆ ಸೌಲಭ್ಯ: ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ವಿತರಿಸುತ್ತಾರೆ. ರಾಜ್ಯದಲ್ಲಿ ಸುಮಾರು 45 ಸಾವಿರ ಪತ್ರಿಕಾ ವಿತರಕರಿಗೆ ಈ ವಿಮಾ ಯೋಜನೆ ಉಪಯೋಗವಾಗಲಿದೆ. ಸದರಿ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸದರಿ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ. ಸದರಿ ಯೋಜನೆಗೆ ಸಹ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸಹಾಯ ಸೌಲಭ್ಯಗಳ ಮಂಜೂರಾತಿ ಆದೇಶವನ್ನು ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ. 

ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೈಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆಗಳನ್ನು ಹಾಕಲಿವೆ. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಸಹ ಜರುಗಲಿವೆ.

Follow Us:
Download App:
  • android
  • ios