ಸರ್ಕಾರ ಅಭದ್ರಗೊಳಿಸುವುದು ಯಾವ ಪುರುಷಾರ್ಥಕ್ಕೆ?: ಎಚ್‌ಡಿಕೆಗೆ ಎಚ್.ಕೆ. ಪಾಟೀಲ ಪ್ರಶ್ನೆ
ಇಂದು ಶಾಸಕರನ್ನು ಖರೀದಿ ವಸ್ತುಗಳನ್ನಾಗಿಸುವ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಅಲ್ಲದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕುವ ಕಾರ್ಯ ಮಾಡಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಷಡ್ಯಂತ್ರ: ಸಚಿವ ಎಚ್.ಕೆ. ಪಾಟೀಲ
ಹುಬ್ಬಳ್ಳಿ(ಡಿ.12): ಸರ್ಕಾರಗಳನ್ನು ಈ ರೀತಿ ಅಭದ್ರಗೊಳಿಸುವಂತಹ ಮಾತುಗಳು, ಧ್ವನಿಗಳು ಯಾವ ಪುರುಷಾರ್ಥಕ್ಕೆ? ನಿಮ್ಮ ಉದ್ದೇಶವೇನು? ಎಂದು ಸಚಿವ ಎಚ್.ಕೆ. ಪಾಟೀಲ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಶಾಸಕರನ್ನು ಖರೀದಿ ವಸ್ತುಗಳನ್ನಾಗಿಸುವ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಅಲ್ಲದೇ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಿ, ಅಭಿವೃದ್ಧಿ ಕೆಲಸಗಳಿಗೆ ಕೊಡಲಿ ಪೆಟ್ಟು ಹಾಕುವ ಕಾರ್ಯ ಮಾಡಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಷಡ್ಯಂತ್ರ. ಜನರಿಗೆ ಕೆಲಸ ಆಗಬೇಕು. ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಇದನ್ನು ಬಿಟ್ಟು ಮಾಧ್ಯಮಗಳ ಮೂಲಕ ಜನರ ಮನಸ್ಸು ಅಭದ್ರಗೊಳಿಸುವ ಪ್ರಯತ್ನ ಯಶಸ್ವಿ ಆಗುವುದಿಲ್ಲ ಎಂಬುದನ್ನು ಅರಿತುಕೊಳ್ಳಲಿ ಎಂದರು.
ಬಿಜೆಪಿ ಶಾಸಕರು ಉತ್ತರ ಕರ್ನಾಟಕದ ವಿರೋಧಿಗಳು: ಕಲಾಪಕ್ಕೆ ಅಡ್ಡಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತರಾಟೆ
ಜನರಿಗೆ ನಿಮ್ಮ ಬಗ್ಗೆ ಎಲ್ಲ ತಿಳಿಯುತ್ತಿದೆ. ಶಾಸಕರ ಖರೀದಿ ವಾತಾವರಣಕ್ಕೆ ಯಾರೂ ಬಲಿ ಆಗುವುದಿಲ್ಲ. ಈ ಮೊದಲು 17 ಶಾಸಕರನ್ನು ಮುಂಬೈ, ಗೋವಾಕ್ಕೆ ಕರೆದೊಯ್ದು ಖರೀದಿ ಮಾಡಿದ್ದರು. ನಂತರ ಜನರು ಯಾವ ರೀತಿ ಉತ್ತರಿಸಿದರು ಎಂಬುದನ್ನು ಈಗಾಗಲೇ ನೋಡಿಯಾಗಿದೆ. ಇಷ್ಟಾದ ಮೇಲೂ ಹಾಗೆಯೇ ಆಗುತ್ತದೆ ಎಂದು ಯಾರಾದರೂ ತಿಳಿದಿದ್ದರೆ ಅದು ಅವರ ಭ್ರಮೆ ಎಂದರು.
ಭ್ರಷ್ಟ ಸರ್ಕಾರ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಪಾಟೀಲ, ಭ್ರಷ್ಟ ಸರ್ಕಾರ ಎಂದರೆ ನಿಮ್ಮ ಸೆಂಟ್ರಲ್ ವಿಜಿಲೆನ್ಸ್ ಏನು ಮಾಡುತ್ತಿದೆ? ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಇಟ್ಟುಕೊಂಡು ದಾಳಿ ಮಾಡಿದ್ದೀರಲ್ಲ. ತಾವು ಏನಿದ್ದಾರೆ? ಏನು ಹೇಳುತ್ತಿದ್ದಾರೆ? ಎಂಬುದರ ಬಗ್ಗೆ ಕೇಂದ್ರ ಸಚಿವ ಜೋಶಿ ಅವರಿಗೆ ಅರಿವಿರಬೇಕು. ಸರ್ಕಾರದಲ್ಲಿ ಇರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಈಗ 10 ವರ್ಷ ಆಯ್ತು. ಯಾರು ನಿಮಗೆ ತಡೆದಿದ್ದು? ಎಂದು ಜೋಶಿಗೆ ಸಚಿವ ಎಚ್.ಕೆ. ಪಾಟೀಲ ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ನೀವು ಭ್ರಷ್ಟಾಚಾರದ ಮೂಲಕ ಸರ್ಕಾರ ಬದಲಾಯಿಸಿ ಯಶಸ್ವಿ ಆಗಿದ್ದೀರಿ. ಅದು ನಿಮ್ಮ ಪ್ರಾಮಾಣಿಕತೆ ಅಲ್ವೇ? ಎಂದು ಲೇವಡಿ ಮಾಡಿದರು.