ಕನಕದಾಸರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ: ಸಿಎಂ ಸಿದ್ದರಾಮಯ್ಯ
ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ, ಸರ್ವಜನಾಂಗವನ್ನು ಸಮಾನವಾಗಿ ಕಂಡವರು. ಅವರು ವಿಶ್ವಮಾನವರು, ನಾವು ವಿಶ್ವಮಾನವರಾಗಲು ಸಾಧ್ಯವಿಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನೆಲಮಂಗಲ (ಡಿ.04): ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ, ಸರ್ವಜನಾಂಗವನ್ನು ಸಮಾನವಾಗಿ ಕಂಡವರು. ಅವರು ವಿಶ್ವಮಾನವರು, ನಾವು ವಿಶ್ವಮಾನವರಾಗಲು ಸಾಧ್ಯವಿಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಬೀರೇಶ್ವರ ಸಮುದಾಯ ಭವನ ಹಾಗೂ ಜೀರ್ಣೋದ್ಧಾರಗೊಂಡಿರುವ ಬೀರೇಶ್ವರ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಎಚ್.ಎಂ.ರೇವಣ್ಣ ಅವರ ಪ್ರಯತ್ನದಿಂದ ಸಮುದಾಯ ಭವನ ನಿರ್ಮಾಣಕ್ಕೆ 70 ಲಕ್ಷ ರು. ಅನುದಾನ ನೀಡಿದೆ.
ಕುರುಬರು ಶೈವ ಪಂಥಕ್ಕೆ ಸೇರಿದ್ದಾರೆ, ಕನಕರು ವೈಷ್ಣವ ಪಂಥ ಅನುಸರಿಸಿದರು. ಎಲ್ಲರನ್ನೂ ಪ್ರೀತಿಸಿದರೆ ಸಾಮರಸ್ಯದಿಂದ ಬಾಳಬಹುದು, ಎಲ್ಲ ಬಡವರಿಗು ಆರ್ಥಿಕ ಶಕ್ತಿ ತುಂಬಲು ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ, 2000 ರು. ಆರ್ಥಿಕ ನೆರವು, ಉಚಿತ ವಿದ್ಯುತ್, ಅಕ್ಕಿ ಬದಲು ಹಣ, ಎಲ್ಲ ಬಡವರು ಎರಡು ಹೊತ್ತು ಊಟ ಮಾಡಬೇಕು, ಹಸಿವು ಮುಕ್ತವಾಗಬೇಕು ಇದನ್ನೇ ಬುದ್ದ, ಬಸವ, ಅಂಬೇಡ್ಕರ್ ಬಯಸಿದ್ದು. 1.30 ಕೋಟಿ ಕುಟುಂಬಗಳಿಗೆ 4 ರಿಂದ 5 ಸಾವಿರಗಳ ಸವಲತ್ತುಗಳನ್ನು ನೀಡಿದ್ದೇವೆ ಎಂದು ಹೇಳಿದರು.
ದೇಶದ ಜನತೆ ಕಾಂಗ್ರೆಸ್ ಗ್ಯಾರಂಟಿ ಭಾಗ್ಯಗಳ ತಿರಸ್ಕರಿಸಿದ್ದಾರೆ: ಶಾಸಕ ಸಿ.ಸಿ.ಪಾಟೀಲ್
ನೆಲಮಂಗಲಕ್ಕೆ ಒಳಚರಂಡಿ ಯೋಜನೆಯನ್ನು ಮಂಜೂರು ಮಾಡಿದ್ದೇವೆ, ಮಂಜೂರಾಗಿರುವ ಅನುದಾನ ಸಾಲದಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ, ಇನ್ನು 3 ವರ್ಷದಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ, ಕೋಲಾರದಲ್ಲಿ ಕೆಸಿ ವ್ಯಾಲಿ ಹಾಗು ಚಿಕ್ಕಬಳ್ಳಾಪುರದಲ್ಲಿ ಎಚ್ಎನ್ ವ್ಯಾಲಿ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅದೇ ಮಾದರಿಯಲ್ಲಿ ನೆಲಮಂಗಲದಲ್ಲಿ ವೃಷಭಾವತಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ, ಮೆಟ್ರೊ ರೈಲನ್ನು ಇಲ್ಲಿಯವರೆಗೆ ತರಲು ಪ್ರತ್ನಿಸುತ್ತೇವೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಹಲವು ಕುರುಬ ನಾಯಕರಲ್ಲಿ ಸಿದ್ದರಾಮಯ್ಯ ಅತ್ಯಂತ ಆತ್ಮೀಯರಾಗಿದ್ದಾರೆ. ಏಕೆಂದರೆ ಎಲ್ಲ ಜನಾಂಗವನ್ನು ಸಮಾನವಾಗಿ ಕಂಡಿದ್ದಾರೆ. ತೈಲೇಶ್ವರ ಗಾಣಿಗ ಮಠದ ಪೂರ್ಣಾನಂದ ಪುರಿ ಶ್ರೀಗಳು (ಬಿ.ಜೆ.ಪುಟ್ಟಸ್ವಾಮಿ) ಅವರು ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಭವನದ ಜಾಗದ ವಿಚಾರದಲ್ಲಿ ಸಹಕರಿಸಿದ್ದಾರೆ, ರಾಜ್ಯಸಭಾ ಸದಸ್ಯ ರಾಮಮೂರ್ತಿ, ಮಾಜಿ ಸಚಿವ ಎಂಟಿಬಿ ನಾಗರಾಜು, ಆ.ದೇವೇಗೌಡ ಅವರ ಅನುದಾನ, ಮಾಜಿ ಮಂತ್ರಿ ದಿ.ಆಂಜನಮೂರ್ತಿ ಹೀಗೆ ಹಲವರ ಸಹಕಾರದಿಂದ ಭವನ ನಿರ್ಮಾಣವಾಗಿದೆ. ನೆಲಮಂಗಲದಲ್ಲಿರುವ 1.8 ಎಕರೆ ಸಮುದಾಯದ ಜಮೀನಿನಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದ ಶ್ರೀಗಳು ಮಾತನಾಡಿ, ಸಿದ್ದರಾಮಯ್ಯ ಅವರು ಕುರುಬ ಸಮುದಾಯವಷ್ಟೆ ಅಲ್ಲ, ಎಲ್ಲ ಸಮುದಾಯವನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದಾರೆ. ಯೋಜನೆಗಳ ಘೋಷಣೆ ಅಷ್ಟೆ ಅಲ್ಲ ಅನುಷ್ಠಾನಕ್ಕೆ ಬರುವವರೆಗೂ ಬಿಡುವುದಿಲ್ಲ, ಆಯಾಸದ ಅರಿವಿಲ್ಲದೆ ಇಡೀ ದಿನ ಜನತಾದರ್ಶನ ಮಾಡಿ ಸ್ಥಳದಲ್ಲೆ ಪರಿಹರಿಸಿದ್ದಾರೆ. ಯಾವಾಗಲು ನೀವೆ ಮುಖ್ಯಮಂತ್ರಿಯಾಗಿರಬೇಕು ಎಂದ ಶ್ರೀಗಳು, ಜಾತಿಗಣತಿ ವರದಿಯನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲೆ ಬಿಡುಗಡೆ ಮಾಡಿ, ಇದರಿಂದ ತುಳಿತಕ್ಕೊಳಗಾದವರಿಗೆ ನ್ಯಾಯ ದೊರಕಿದಂತಾಗುತ್ತದೆ ಎಂದು ಸಲಹೆ ಮಾಡಿದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, 25 ಕೋಟಿ ರು. ವೆಚ್ಚದ ಒಳಚರಂಡಿ ಹಾಗು 1081 ಕೋಟಿ ರು. ವೆಚ್ಚದ ವೃಷಭಾವತಿ ಯೋಜನೆಯನ್ನು ಮಂಜೂರು ಮಾಡಿರುವ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. ಕೆಪಿಟಿಸಿಎಲ್ ಉಪಕೇಂದ್ರಕ್ಕೂ ಶೀಘ್ರದಲ್ಲೆ ಅನುಮೋದನೆ ಸಿಗಲಿದೆ ಎಂದು ಹೇಳಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಗಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ 1997ರಲ್ಲಿ ಸ್ಥಾಪಕ ಅಧ್ಯಕ್ಷ ಕಲ್ಯಾಣಪ್ಪ ಹಾಗು ಇತರರ ಶ್ರಮದಿಂದ ಇಂದು ದೇವಸ್ಥಾನ ನಿರ್ಮಾಣವಾಗಿ, ಜೀರ್ಣೋದ್ಧಾರವಾಗಿ, ಸಮುದಾಯ ಭವನ ನಿರ್ಮಾಣವಾಗಿದೆ. ಇದಲ್ಲೆ ಅನುದಾನ ನೀಡಿದ ಸಿದ್ದರಾಮಯ್ಯ ಹಾಗು ಇತರರ ಸಹಕಾರವನ್ನು ಸ್ಮರಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮಗದೊಮ್ಮೆ ಪ್ರಧಾನಿ: ನಳಿನ್ ಕಟೀಲ್
ಕಾರ್ಯಕ್ರಮದಲ್ಲಿ ತೈಲೇಶ್ವರ ಗಾಣಿಗರ ಮಹಾಸಂಸ್ಥಾನದ ಪೂರ್ಣಾನಂದಪುರಿ ಶ್ರೀಗಳು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದಪುರಿ ಶ್ರೀಗಳು, ನಗರಸಭೆ ಅಧ್ಯಕ್ಷೆ ಲತಾ ಹೇಮಂತಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಎಲ್ ಕಾಂತರಾಜು, ಮುಖಂಡ ಚಿಕ್ಕನಾಗಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ತಾಲೂಕು ಅಧ್ಯಕ್ಷ ವಜ್ರಘಟ್ಟ ನಾಗರಾಜು, ಕುರುಬರ ಸಂಘದ ಅಧ್ಯಕ್ಷ ಎನ್.ಆರ್.ಹೊನ್ನಸಿದ್ದಯ್ಯ, ನಿರ್ದೇಶಕ ಚಿಕ್ಕರಾಜು, ದೇವಸ್ಥಾನ ಸಮಿತಿಯ ಕೆ.ನಾರಾಯಣಪ್ಪ, ಸೇವಾ ಸಮಿತಿಯ ಬೀರಯ್ಯ, ಚಿಕ್ಕಯ್ಯಸ್ವಾಮಿ ಅಭಿವೃದ್ಧಿ ಸಮಿತಿಯ ಗಂಗಕಾಳಯ್ಯ, ನಾಗರಾಜು, ಕನಕ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಲೋಕೇಶ್ ಇತರರಿದ್ದರು.