ಭಾರತ್ ಜೋಡೋ ವರ್ಷಾಚರಣೆ: ರಾಮನಗರದಲ್ಲಿ ಸಿಎಂ ಸಿದ್ದು ಪಾದಯಾತ್ರೆ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಸಂಸದರೊಂದಿಗೆ ತೆರೆದ ವಾಹನ ಹತ್ತಿದಾಗ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ರೇಷ್ಮೆಗೂಡು ಮತ್ತು ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಬರ ಮಾಡಿಕೊಂಡರು.

ರಾಮನಗರ(ಸೆ.08): ಭಾರತ್ ಜೋಡೋ ಯಾತ್ರೆಯ ಮೊದಲನೇ ವಾರ್ಷಿಕೋತ್ಸವ ಪ್ರಯುಕ್ತ ರೇಷ್ಮೆನಗರಿಯಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಭರ್ಜರಿ ಪಾದಯಾತ್ರೆ ನಡೆಸಲಾಯಿತು.
ಬೆಂಗಳೂರಿನಿಂದ ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಬಳಿ ಒಂದೇ ಕಾರಿನಲ್ಲಿ ಆಗಮಿಸಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಗಮಿಸಿದರು. ಈ ವೇಳೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಸಂಸದರೊಂದಿಗೆ ತೆರೆದ ವಾಹನ ಹತ್ತಿದಾಗ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ರೇಷ್ಮೆಗೂಡು ಮತ್ತು ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಬರ ಮಾಡಿಕೊಂಡರು.
ಕಾಂಗ್ರೆಸ್‌ನಲ್ಲಿ ಲೋಕಸಭೆ ಸ್ಪರ್ಧೆಗೆ ಹೆಚ್ಚಿದ ಪೈಪೋಟಿ..!
ನಂತರ ಪೂರ್ಣಕುಂಭ ಸ್ವಾಗತ, ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ, ಅದ್ಧೂರಿ ವಾದ್ಯಗಳೊಂದಿಗೆ ನಡಿಗೆಗೆ ಚಾಲನೆ ದೊರಕಿತು. ಕೈ ನಾಯಕರು ವಾಹನದಿಂದ ಕೆಳಗಿಳಿದು ಒಟ್ಟಾಗಿ ಹೆಜ್ಜೆ ಹಾಕಿ ಪಾದಯಾತ್ರೆಯಲ್ಲಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರೆ, ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಹಿಡಿದು ಸಾಗಿದರು. ಸುಮಾರು ಮೂರ್ನಾಲ್ಕು ಕಿ.ಮೀ. ನಡೆದ ಈ ಪಾದಯಾತ್ರೆಯಲ್ಲಿ ಹಲವು ಸಚಿವರು, ಪಕ್ಷದ ಪ್ರಮುಖ ನಾಯಕರು, ಸಂಸದರು, ಶಾಸಕರು ಸೇರಿ ಸುಮಾರು 15 ರಿಂದ 20 ಸಾವಿರ ಕಾರ್ಯಕರ್ತರು ಭಾಗಿಯಾಗಿದ್ದರು.
ಪಾದಯಾತ್ರೆಗೆ ಕಲಾ ತಂಡಗಳ ಸಾಥ್: ವಿವಿಧೆಡೆಗಳಿಂದ ಆಗಮಿಸಿದ್ದ ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ, ನಂದಿ ಧ್ವಜ, ಬೊಂಬೆ ಕುಣಿತ ಮತ್ತಿತರ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡುವ ಮೂಲಕ ನಡಿಗೆಗೆ ಕಳೆಕಟ್ಟಿದವು. ಜಾನಪದ ಕಲೆಗಳ ಮುಮ್ಮೇಳದೊಂದಿಗೆ ಪಾದಯಾತ್ರೆ ಸಾಗಿತು. ಜಿಲ್ಲಾಕಾರಿಗಳ ಕಚೇರಿ ಬಳಿಯಿಂದ ಆರಂಭವಾದ ಪಾದಯಾತ್ರೆ ಪೊಲೀಸ್ ಭವನ ವೃತ್ತ, ವಾಟರ್ ಟ್ಯಾಂಕ್ ಸರ್ಕಲ…ಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು.
ಕೆಂಗಲ್ ಪ್ರತಿಮೆಗೆ ಮಾಲಾರ್ಪಣೆ: ನಂತರ ಪಾದಯಾತ್ರೆ ಕೆಂಗಲ್ ಹನುಮಂತಯ್ಯ ವೃತ್ತಕ್ಕೆ ಆಗಮಿಸಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕೊನೆಗೆ ಪಾದಯಾತ್ರೆ ಐಜೂರು ವೃತ್ತದಲ್ಲಿ ಸಮಾವೇಶಗೊಂಡಿತು.