ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮತ್ತೊಬ್ಬ ಸಾವು, ತನಿಖೆಗೆ ಸಿಎಂ ಆದೇಶ
ಘಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪೂರ್ಣ ಮಾಹಿತಿ ಪಡೆದಿದ್ದಾರೆ. ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಅವರು ಪೂರ್ಣ ಪ್ರಮಾಣದ ತನಿಖೆಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಅಗತ್ಯ ಪರಿಹಾರ ಕೈಗೊಳ್ಳಲು ಸೂಚಿಸಿದ್ದಾರೆ: ದಿವ್ಯಾಪ್ರಭು
ಚಿತ್ರದುರ್ಗ(ಆ.03): ಚಿತ್ರದುರ್ಗ ಹೊರವಲಯ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಏತನ್ಮಧ್ಯೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದವರ ಸಂಖ್ಯೆ ನೂರರ ಗಡಿ ದಾಟಿದೆ. ಈ ನಡುವೆ ದುರಂತಕ್ಕೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ತನಿಖೆಗೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ವಡ್ಡರಸಿದ್ದವ್ವನಹಳ್ಳಿಯ ಪ್ರವೀಣ್ (25) ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ವಾರ ಕಾಲ ಕವಾಡಿಗರಹಟ್ಟಿಯ ಸಂಬಂಧಿಕರ ಮನೆಯಲ್ಲಿದ್ದ ಪ್ರವೀಣ್ ಎರಡು ದಿನದ ಹಿಂದೆಯಷ್ಟೇ ತಮ್ಮ ಗ್ರಾಮಕ್ಕೆ ತೆರಳಿದ್ದ. ನಂತರ ವಾಂತಿ ಭೇದಿಯಿಂದ ಅಸ್ವಸ್ಥನಾಗಿದ್ದ ಆತ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದು ಬುಧವಾರ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಚಿತ್ರದುರ್ಗ: ಕಲುಷಿತ ನೀರು ಸೇವನೆ ಕೇಸ್, ಸಾವಿನ ಸಂಖ್ಯೆ 3ಕ್ಕೇರಿಕೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್..!
ಪರಿಹಾರಕ್ಕೆ ಬಿಗಿಪಟ್ಟು:
ಕಲುಷಿತ ನೀರು ಸೇವಿಸಿ ಅಸುನೀಗಿದ್ದ ಮಂಜುಳಾ ಅಂತ್ಯ ಸಂಸ್ಕಾರ ಮಾಡಲು ಪೋಷಕರು ಬೆಳಗ್ಗೆ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪರಿಹಾರ ನೀಡದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ಬಿಗಿಪಟ್ಟು ಹಿಡಿದರು. ಮಧ್ಯಾಹ್ನ ವೇಳೆಗೆ ಜಿಲ್ಲಾಧಿಕಾರಿ ದಿವ್ಯಾಪ್ರಭು, ಎಸ್ಪಿ ಪರಶುರಾಂ ಮೃತ ಮಂಜುಳಾ ನಿವಾಸಕ್ಕೆ ಆಗಮಿಸಿ ಪೋಷಕರು, ಪತಿ ಹಾಗೂ ಹರಳಯ್ಯ ಸ್ವಾಮೀಜಿಯೊಂದಿಗೆ ಸುಮಾರು ಮುಕ್ಕಾಲು ತಾಸು ಮಾತುಕತೆ ನಡೆಸಿದರು. ಅಂತಿಮವಾಗಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಸರ್ಕಾರದ ನಿಯಮಾವಳಿ ಪ್ರಕಾರವೇ ಪರಿಹಾರ ಘೋಷಣೆಯಾಗುತ್ತದೆ. ಸಾವಿಗೆ ಕಾರಣಗಳು ಲಭ್ಯವಾಗುವ ತನಕ ಪರಿಹಾರ ಕೊಡುವುದು ಕಷ್ಟಸಾಧ್ಯ. ಇನ್ನೊಂದು ದಿನದಲ್ಲಿ ರಿಪೋರ್ಚ್ ಬರುತ್ತದೆ ಎಂದು ಕುಟುಂಬಸ್ಥರ ಮನವೊಲಿಸಿದಾಗ ಅಂತ್ಯ ಸಂಸ್ಕಾರಕ್ಕೆ ಒಪ್ಪಿಗೆ ಸೂಚಿಸಿದರು.
4 ಮಂದಿ ತಜ್ಞರ ಸಮಿತಿ:
ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ವರದಿ ಪಡೆಯಲು ನಾಲ್ಕು ಮಂದಿ ಅಧಿಕಾರಿಗಳ ಸಮಿತಿ ನಿಯೋಜಿಸಲಾಗಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ನಗರಸಭೆ ಪೌರಾಯುಕ್ತರು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇದ್ದಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುವುದು. ಲ್ಯಾಬ್ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.
ಸಿಎಂ ತನಿಖೆಗೆ ನಿರ್ದೇಶನ:
ಘಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರು ಪೂರ್ಣ ಮಾಹಿತಿ ಪಡೆದಿದ್ದಾರೆ. ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಅವರು ಪೂರ್ಣ ಪ್ರಮಾಣದ ತನಿಖೆಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ. ಅಗತ್ಯ ಪರಿಹಾರ ಕೈಗೊಳ್ಳಲು ಸೂಚಿಸಿದ್ದಾರೆಂದು ದಿವ್ಯಾಪ್ರಭು ಹೇಳಿದರು.
ನೀರಗಂಟಿ ವಿಚಾರಣೆ:
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಪರಶುರಾಂ, ಸಾವುಗಳ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಅನುಮಾನಾಸ್ಪದ ಸಾವಿನ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಲ್ಯಾಬ… ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನೀರಗಂಟಿ ಸುರೇಶ ವಿರುದ್ಧವೂ ಆರೋಪವಿದೆ. ಈಗಾಗಲೇ ಆತನನ್ನು ಕರೆಸಿ ವಿಚಾರಣೆ ಮಾಡಿದ್ದೇವೆ. ಸಾಕ್ಷಾಧಾರವಿಲ್ಲದ ಕಾರಣ ಕರೆದಾಗ ವಿಚಾರಣೆಗೆ ಬರಲು ಸೂಚಿಸಿದ್ದೇವೆ. ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ವಿಷ ಬೆರಕೆ ಬಗ್ಗೆ ವದಂತಿ ಕೇಳಿ ಬರುತ್ತಿವೆ. ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತೇವೆ ಎಂದರು.
ನೀರಿನ ಘಟಕಕ್ಕೆ ಕಲ್ಲು:
ಕಲುಷಿತ ನೀರು ಸೇವಿಸಿ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಯುವಕರು ಅಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕಲ್ಲು ತೂರಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಧಗಿತವಾಗಿತ್ತು.
ದ್ವೇಷದ ಕಾರಣಕ್ಕೆ ನೀರಿಗೆ ವಿಷ: ಹರಳಯ್ಯ ಸ್ವಾಮೀಜಿ
ಪ್ರಕರಣಕ್ಕೆ ಸಂಬಂಧಿಸಿ ಹರಳಯ್ಯ ಗುರುಪೀಠದ ಶರಣ ಹರಳಯ್ಯ ಸ್ವಾಮೀಜಿ ಸಿಟ್ಟಿಗೆದ್ದಿದ್ದು, ವೈಯಕ್ತಿಕ ದ್ವೇಷದಿಂದ ನೀರಿನಲ್ಲಿ ವಿಷ ಬೆರೆಸಿದ್ದಾರೆಂಬ ಶಂಕೆಯಿದೆ ಎಂದು ಹೇಳಿದರು. ದ್ವೇಷದಿಂದ ಆಗಿದ್ದರೆ ಮಾತ್ರ ಇಷ್ಟೊಂದು ಸಮಸ್ಯೆ ಸೃಷ್ಟಿಯಾಗಲು ಸಾಧ್ಯ. ಕಲುಷಿತ ನೀರಿನ ಸೇವನೆ ಆಗಿದ್ದರೆ ಇಡೀ ಬಡಾವಣೆಗೆ ಆಗಬೇಕಿತ್ತು. ದಲಿತ ಕೇರಿಗೆ ಮಾತ್ರ ಕಲುಷಿತ ನೀರು ಪೂರೈಕೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಇಡೀ ಏರಿಯಾ ಜನ ಆಸ್ಪತ್ರೆಗೆ ದಾಖಲು!
ಉದ್ದೇಶಪೂರಿತವಾಗಿ ನಡೆದ ಘಟನೆ ಇದಾಗಿದೆ. ಈ ಘಟನೆಯಿಂದ ಮತ್ತೊಂದು ಮಣಿಪುರ ಸೃಷ್ಟಿಯಾದಂತೆ ಕಾಣಿಸುತ್ತಿದೆ. ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರು. ಪರಿಹಾರ ಘೋಷಿಸಬೇಕು. ಘಟನೆ ಪುನಾರಾವರ್ತನೆ ಆಗದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪೋಕ್ಸೋ ಪ್ರಕರಣ ತಳಕು:
ಕವಾಡಿಗರ ಹಟ್ಟಿಯ ಒಬ್ಬ ಯುವಕನ ಮೇಲೆ ವರ್ಷದ ಹಿಂದೆ ಪೋಕ್ಸೋ ಪ್ರಕರಣವೊಂದು ದಾಖಲಾಗಿತ್ತು. ದಲಿತ ಸಮುದಾಯದ ಯುವಕ ಸವರ್ಣೀಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಇದಾಗಿತ್ತು. ಹೀಗಾಗಿ ದ್ವೇಷದ ಕಾರಣಕ್ಕೆ ನೀರಿನ ಟ್ಯಾಂಕಿಗೆ ವಿಷ ಬೆರೆಸಲಾಗಿದೆ ಎಂಬ ಶಂಕೆಗಳು ಸುಳಿದಾಡಿವೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ನೀರಗಂಟಿ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ.