ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಇಡೀ ಏರಿಯಾ ಜನ ಆಸ್ಪತ್ರೆಗೆ ದಾಖಲು!
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಕವಾಡಿಗರಹಟ್ಟಿಯಲ್ಲಿ ಜುಲೈ 31ರ ತಡರಾತ್ರಿ ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.1): ಹೊಟ್ಟೆ ತುಂಬಾ ಊಟ ಸಿಗಲಿಲ್ಲ ಅಂದ್ರೂ ಪರವಾಗಿಲ್ಲ ಕುಡಿಯೋಕೆ ಶುದ್ದ ನೀರು ಇದ್ರೆ ಸಾಕು ಜನ ಸ್ವಲ್ಪ ನೆಮ್ಮದಿಯಾಗಿ ಜೀವನ ಸಾಗಿಸ್ತಾರೆ. ಆದ್ರೆ ಇಲ್ಲೊಂದು ಏರಿಯಾದಲ್ಲಿ ಕಲಷಿತ ನೀರು ಸೇವನೆ ಮಾಡಿದ ಪರಿಣಾಮ ಇಡೀ ಏರಿಯಾ ಜನರು ಆಸ್ಪತ್ರೆ ಸೇರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ.
ಒಂದೆಡೆ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟಾಣಿ ಮಕ್ಕಳು. ಮತ್ತೊಂದೆಡೆ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿರೋ ಮಹಿಳೆಯ ಕುಟುಂಬಸ್ಥರಿಂದ ಮುಗಿಲು ಮುಟ್ಟಿದ ಆಕ್ರಂದನ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಕವಾಡಿಗರಹಟ್ಟಿಯಲ್ಲಿ ಜುಲೈ 31ರ ತಡರಾತ್ರಿ ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಇದ್ರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಗುಂಡ್ಲುಪೇಟೆ: ಕಲುಷಿತ ಆಹಾರ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ
ನಿನ್ನೆ ರಾತ್ರಿ ಯಾವ ಕಾರಣಕ್ಕೆ ಈ ರೀತಿ ಆಯಿತು ಎಂದು ಗೊತ್ತಿಲ್ಲ. ನಮ್ಮ ಮನೆಯಲ್ಲಿ ಸುಮಾರು 6 ಜನ ಮಕ್ಕಳು ವಾಂತಿ, ಭೇದಿಯಿಂದ ಬಳಲಿದ್ರು. ನಮ್ಮ ಏರಿಯಾದಲ್ಲಿ ಕುಡಿಯುವ ನೀರು ಸರಿಯಾಗಿ ಬರ್ತಿಲ್ಲ, ಬರೀ ಕಲುಷಿತವಾಗಿಯೇ ಬರ್ತಿವೆ. ಟ್ಯಾಂಕ್ ಕೂಡ ಕ್ಲೀನ್ ಮಾಡದ ಕಾರಣ ಜನರಿಗೆ ಈ ರೀತಿ ಸಮಸ್ಯೆ ಎದುರಾಗಿದೆ ಅಂತಾರೆ ಅಸ್ಪಸ್ಥಗೊಂಡವರ ಸಂಬಂಧಿ.
ಇನ್ನೂ ಘಟನೆ ತಿಳಿದ ಕೂಡಲೇ ಆಸ್ಪತ್ರೆಗೆ ದೌಡಾಯಿಸಿದ ಅಧಿಕಾರಿಗಳು ನಾ ಮುಂದು ತಾ ಮುಂದು ಎಂದು ಪರಿಶೀಲನೆ ಮಾಡೋದ್ರಲ್ಲಿ ಬ್ಯುಸಿ ಆದರು. ಆದ್ರೆ ಯಾವೊಬ್ಬ ಜನಪ್ರತಿನಿಧಿ ಕೂಡ ಈ ಘಟನೆ ಸಂಬಂಧ ಭೇಟಿ ನಿಡದೇ ಇರುವುದು ದುರದೃಷ್ಟಕರ. ಇನ್ನೂ ಕವಾಡಿಗರಹಟ್ಟಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡು ಪರಿಶೀಲಿಸಿದ ಡಿಸಿ, ಕೂಡಲೇ ಏರಿಯಾಕ್ಕೆ ತೆರಳಿ ಅಲ್ಲಿನ ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಪಡೆದರು. ಬಳಿಕ ಓವರ್ ಹೆಡ್ ಟ್ಯಾಂಕ್ ಪರಿಶೀಲನೆ ಘಟನೆಗೆ ಸೂಕ್ತ ಕಾರಣ ಏನೆಂದು ತಿಳಿಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಈ ಘಟನೆಯಲ್ಲಿ ಓರ್ವ ಮಹಿಳೆ ಮಾತ್ರ ಸಾವನ್ನಪ್ಪಿದ್ದಾರೆ. ಉಳಿದ ಎಲ್ಲಾ ಅಸ್ವಸ್ಥರು ಪ್ರಾಣಾಪಾಯಿಂದ ಪಾರಾಗಿದ್ದಾರೆ ಎಂದು ತಿಳಿಸಿದರು.
ಕೆಆರ್‌ಎಸ್ ಡ್ಯಾಂ 35 ಟಿಎಂಸಿ ಭರ್ತಿ: ಬೆಂಗಳೂರಿಗೆ ಕಾವೇರಿ ಕುಡಿಯುವ ನೀರಿನ ಆತಂಕ ದೂರ
ಒಟ್ಟಾರೆ ಕಲುಷಿತ ನೀರಿನ ಸೇವನೆಯಿಂದ ಆಸ್ಪತ್ರೆಯಲ್ಲಿ ನರಳ್ತಿರೋ ಪುಟಾಣಿ ಮಕ್ಕಳು ಆದಷ್ಟು ಬೇಗ ಗುಣಮುಖರಾಗಿ ಬರಲಿ. ಹಾಗೂ ಇನ್ನಾದ್ರು ಈ ರೀತಿಯ ಪ್ರಕರಣಗಳು ಕಡಿಮೆ ಆಗಲು ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿದೆ. ಕಳೆದ ತಿಂಗಳು ಜು.13ರಂದು ಕಲುಷಿತ ನೀರು ಕುಡಿದು 30 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರದಲ್ಲಿ ನಡೆದಿತ್ತು.