ಕ್ಷೀರಭಾಗ್ಯ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ: ಮಕ್ಕಳಿಗೆ ಹಾಲು ಕುಡಿಸಿದ ಸಿಎಂ ಸಿದ್ದರಾಮಯ್ಯ!
ಇಂಟರ್ ನ್ಯಾಷನಲ್ ಡೈರಿ ಫೆಡರೇಷನ್ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳುವ ಮೂಲಕ ಕ್ಷೀರಭಾಗ್ಯ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಲಾಯಿತು.
ತುಮಕೂರು (ಸೆ.07): ಇಂಟರ್ ನ್ಯಾಷನಲ್ ಡೈರಿ ಫೆಡರೇಷನ್ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳುವ ಮೂಲಕ ಕ್ಷೀರಭಾಗ್ಯ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ. ಹೆಚ್ಚಳ ಮಾಡಲಾಯಿತು. ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಇಂದು 11 ನೇ ವರ್ಷಕ್ಕೆ ಕಾಲಿಡುತ್ತಿರುವ `ಕ್ಷೀರಭಾಗ್ಯ’ ಯೋಜನೆಗೆ ಸರ್ಕಾರ ಈ ವರ್ಷ ಒಂದು ಸಾವಿರಕ್ಕೂ ಹೆಚ್ಚು ಕೋಟಿಗಳನ್ನು ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಮಧುಗಿರಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿ ಯೋಜನೆಗಳನ್ನು ಇಂದು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದ್ದು, ರಾಜ್ಯದಲ್ಲಿ 53 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ಅಂದಾಜು ಪ್ರತಿ ದಿನ 50 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.
ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಕೊಡುಗೆ ಏನು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
`ಗೃಹಜ್ಯೋತಿ’ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಅರ್ಹ ಕುಟುಂಬಗಳು ಇಂದು ಪಡೆದಿರುತ್ತಾರೆ. ‘ಗೃಹಲಕ್ಷ್ಮಿ’ ಯೋಜನೆಯಡಿ ಒಂದು ಕೋಟಿ 10 ಲಕ್ಷ ಕುಟುಂಬದ ಯಜಮಾನಿ ಮಹಿಳೆಯರು ನೋಂದಾಯಿಸಿಕೊಂಡಿದ್ದು, ಪ್ರತಿ ಮಾಹೆ ಅರ್ಹ ಯಜಮಾನಿ ಮಹಿಳೆಯ ಖಾತೆಗೆ ಮಾಸಿಕ 2 ಸಾವಿರ ರೂ.ಗಳನ್ನು ಜಮೆ ಮಾಡಲಾಗುತ್ತಿದ್ದು, ಬರುವ ಜನವರಿ-2024 ರಂದು ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಹಾಗೂ ಡಿಪ್ಲೋಮಾದವರಿಗೆ 1500 ರು. ನೀಡಲಾಗುವುದು. ಹಾಗೂ ಇವರುಗಳು ೨ ವರ್ಷದೊಳಗಾಗಿ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿಯನ್ನೂ ಸಹ ನೀಡಲಾಗುವುದು ಎಂದು ತಿಳಿಸಿದರು.
ತುಮಕೂರು ಜಿಲ್ಲೆ ಸೇರಿದಂತೆ ನೀರಿನ ಅಭಾವವಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಎತ್ತಿನಹೊಳೆ ಯೋಜನೆಯನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯನ್ನು ಉದ್ಘಾಟಿಸಿದ್ದು, ಇದೀಗ ಆದಷ್ಟು ಜಾಗ್ರತೆ ವಹಿಸಿ ಯೋಜನೆಗೆ ಒತ್ತು ನೀಡಿ ಎತ್ತಿನಹೊಳೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಕೂಡಲೇ ಯೋಜನೆಗೆ ಬಿಡುಗಡೆ ಮಾಡಬೇಕು ಎಂದು ಈ ಸಂದರ್ಭ ಆಗ್ರಹಿಸಿದರು.
ಮಧುಗಿರಿಗೆ ತಾಯಿ-ಮಕ್ಕಳ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಅನುದಾನ ಒದಗಿಸುವ ಸಂಬಂಧ ಮುಂದಿನ ಆಯವ್ಯಯದಲ್ಲಿ ಘೋಷಿಸಲಾಗುವುದು. ಮಧುಗಿರಿ ಬೆಟ್ಟಕ್ಕೆ ರೂಪ್ ವೇಗೆ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮಾತನಾಡಿ, ಬಡವರು ಹಸಿವಿನಿಂದ ಬಳಲಬಾರದು ಎಂಬ ಯೋಚನೆಯಿಂದ ಜಾರಿಗೆ ತಂದಂತಹ ಅನ್ನಭಾಗ್ಯ ಯೋಜನೆ ಪುಣ್ಯದ ಕಾರ್ಯಕ್ರಮವಾಗಿದ್ದು, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರಿಗೆ ಬಡವರು ಋಣಿಯಾಗಿರಬೇಕು ಎಂದು ಕರೆ ನೀಡಿದರು.
ಮಧುಗಿರಿ ತಾಲ್ಲೂಕು ಕೇಂದ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಮತ್ತು ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿರುವ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್‌ಕಾರು ಅಳವಡಿಸುವಂತೆ ಈ ಸಂದರ್ಭ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ಮಧುಗಿರಿ ತಾಲೂಕನ್ನು ಜಿಲ್ಲೆಯನ್ನಾಗಿ ನೋಡಬೇಕೆಂಬುದು ಕೆ.ಎನ್.ರಾಜಣ್ಣನವರ ಹಾಗೂ ಇಲ್ಲಿನ ಜನರ ಬಹಳ ವರ್ಷದ ಕನಸಾಗಿದ್ದು, ಸನ್ಮಾನ್ಯ ಮುಖ್ಯಮಂತ್ರಿಗಳು ಮಧುಗಿರಿ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸುವ ಮೂಲಕ ಇಲ್ಲಿನ ಜನರ ಬಹುದಿನದ ಕನಸನ್ನು ನನಸು ಮಾಡಬೇಕೆಂದು ಮನವಿ ಮಾಡಿದರು.
2013 ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಕೇವಲ ಅರ್ಧ ಗಂಟೆಯಲ್ಲಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಅಂತೆಯೇ ೨೦೧೩ರಲ್ಲಿ ಕ್ಷೀರಭಾಗ್ಯವನ್ನು ಜಾರಿಗೆ ತಂದಿದ್ದು, ಈ ಹತ್ತು ವರ್ಷಗಳಲ್ಲಿ ಕೋಟ್ಯಂತರ ಮಕ್ಕಳು ಕ್ಷೀರಭಾಗ್ಯ ಯೋಜನೆಯ ಲಾಭವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು. 156 ಕೋಟಿ ರು..ಗಳ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಇಂದು ಮುಖ್ಯಮಂತ್ರಿಗಳು ನೆರವೇರಿಸಿದ್ದು, ಸಚಿವ ಕೆ.ಎನ್. ರಾಜಣ್ಣನವರು ಹಲವು ಯೋಜನೆಗಳನ್ನು ತಾಲೂಕಿಗೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು. ಮಧುಗಿರಿ ಉಪವಿಭಾಗ ಬರಪೀಡಿತ ಪ್ರದೇಶವಾಗಿದ್ದು, ಶಿರಾ, ಪಾವಗಡ, ಕೊರಟಗೆರೆ ಮಧುಗಿರಿ ಸೇರಿದಂತೆ ಈ ಭಾಗದ 4 ತಾಲೂಕುಗಳು ಖಾಯಂ ಬರ ತಾಲೂಕುಗಳಾಗಿದ್ದು, ಎತ್ತಿನ ಹೊಳೆ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಮನವಿ ಮಾಡಿದರು.
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೀರಭಾಗ್ಯ ಯೋಜನೆಯ ಜಾರಿಯಿಂದಾಗಿ 27 ಲಕ್ಷ ಹಾಲು ಉತ್ಪಾದಕರು ಹಾಗೂ 14 ಹಾಲು ಒಕ್ಕೂಟಗಳಿಗೆ ಲಾಭವಾಗಿದೆ. ಕ್ಷೀರಭಾಗ್ಯ ಯೋಜನೆಯ ಮೂಲಕ ಕೆಎಂಎಫ್‌ಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಾಲಿನ ಪುಡಿಯ ದರವನ್ನು ಹೆಚ್ಚಳ ಮಾಡುವಂತೆ ಈ ಸಂದರ್ಭ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಶಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಬೃಹತ್ ಹೂವಿನ ಹಾರವನ್ನು ಹಾಕಲಾಯಿತು ಮತ್ತು ಹಸು-ಕರು ಬೆಳ್ಳಿಯ ವಿಗ್ರಹವನ್ನು ನೀಡಿ ಸನ್ಮಾನಿಸಲಾಯಿತು. ಕ್ಷೀರಭಾಗ್ಯ ಕಾರ್ಯಕ್ರಮವನ್ನು ಅಂದು ಯಶಸ್ವಿಯಾಗಿ ಅನುಷ್ಟಾನಗೊಳಿಸಿದ ಹಿರಿಯ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಕರ್ನಾಟಕ ಹಾಲು ಮಂಡಳ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಎ.ಎಸ್ ಪ್ರೇಮನಾಥ್ ಅವರುಗಳಿಗೆ ಈ ಸಂದರ್ಭ ಮುಖ್ಯಮಂತ್ರಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಸಮಾರಂಭದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕರ್ನಾಟಕ ರಾಜ್ಯ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ರಾಜೇಂದ್ರ, ರಂಗನಾಥ್, ಕೆ.ಷಡಕ್ಷರಿ, ವೆಂಕಟೇಶ್, ಎಸ್.ಆರ್.ಶ್ರೀನಿವಾಸ್, ಸಹಕಾರ ಸಂಘಗಳ ನಿಬಂಧಕರಾದ ಡಾ : ಕೆ.ರಾಜೇಂದ್ರ, ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿ.ಪಂ. ಸಿಇಓ ಜಿ.ಪ್ರಭು, ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆ.ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಅವರು ಸ್ವಾಗತಿಸಿದರು. ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸ್ಮರಣ ಸಂಚಿಕೆಯನ್ನು ಈ ಸಂದರ್ಭ ಬಿಡುಗಡೆ ಮಾಡಲಾಯಿತು.
ರಾಜ್ಯ ಸರ್ಕಾರಕ್ಕೆ ದೇವಾಲಯ ಅಭಿವೃದ್ಧಿಗಿಂತ ಮಹಿಷ ದಸರಾವೇ ಮುಖ್ಯ: ಸಂಸದ ಪ್ರತಾಪ ಸಿಂಹ ಟೀಕೆ
ಮಧುಗಿರಿ ಜಿಲ್ಲಾ ಕೇಂದ್ರವಾಗಿಸುವ ಬಗ್ಗೆ ಪರಿಶೀಲನೆ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಒತ್ತಾಯದ ಮೇರೆಗೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಸರ್ಕಾರ ಪರಿಶೀಲನೆ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ ಸಭಿಕರು ಶಿಳ್ಳೆ-ಕೇಕೆ ಹಾಕಿ ಸಂಭ್ರಮ ವ್ಯಕ್ತಪಡಿಸಿದರು. ಇನ್ನೊಂದೆಡೆ ಶಾಸಕ ಕೆ.ಷಡಕ್ಷರಿ ಕೂಡ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಮಕ್ಕಳಿಗೆ ಹಾಲು ಕುಡಿಸಿದ ಸಿಎಂ: ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ಯೋಜನೆಯ ಕಾರ್ಯಕ್ರಮದ ವೇದಿಕೆ ಮೇಲೆ ಹತ್ತು ಮಂದಿ ಶಾಲಾ ಮಕ್ಕಳಿಗೆ ಹಾಲು ಕೊಡುವ ಮೂಲಕ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಸಂಭ್ರಮಾಚರಣೆಗೆ ಮೆರಗು ತಂದರು. ಈ ಯೋಜನೆಯ ಚೆನ್ನಾಗಿದ್ಯಾ ಎಂದು ಮಕ್ಕಳನ್ನು ಕೇಳಿದರು.